ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಗಳನ್ನು ತಬ್ಬಿಕೊಂಡು ಯುವತಿಯೋರ್ವಳು ರೀಲ್ಸ್ ಮಾಡಿರುವ ಘಟನೆ ನಡೆದಿದೆ.
ಆನೆಗಳ ಜೊತೆ ರೀಲ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ರಾತ್ರೋರಾತ್ರಿ ಯಾರೂ ಇಲ್ಲದ ವೇಳೆ ಕರಿಕಲ್ಲುತೊಟ್ಟಿ ಮೂಲಕ ಅರಮನೆ ಆವರಣಕ್ಕೆ ಪ್ರವೇಶ ಪಡೆದಿರುವ ಯುವತಿ ಆನೆಗಳು ವಾಸ್ತವ್ಯ ಹೂಡಿದ್ದ ಸ್ಥಳಕ್ಕೆ ಹೋಗಿ ಫೋಟೋಶೂಟ್ ಮಾಡಿಸಿದ್ದಾಳೆ. ಮೊಬೈಲ್‌ನ ಫ್ಲ್ಯಾಶ್ ಲೈಟ್ ಬಳಸಿಕೊಂಡು ರೀಲ್ಸ್ ಮಾಡಿ ಇನ್ಸ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ.
ನಿಯಮಗಳ ಪ್ರಕಾರ ರಾತ್ರಿ ವೇಳೆ ಆನೆಗಳ ಬಳಿ ಯಾರೂ ಕೂಡ ಹೋಗುವಂತಿಲ್ಲ. ಸದ್ಯ ಈ ವಿಡಿಯೋ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿ ವಿಡಿಯೋ ಡಿಲೀಟ್ ಮಾಡಿದ್ದಾಳೆ.





