Mysore
22
haze

Social Media

ಭಾನುವಾರ, 25 ಜನವರಿ 2026
Light
Dark

ಕೃಷ್ಣ ಮೇಲ್ದಂಡೆ 3 | ಎಕರೆಗೆ 40 ಲಕ್ಷ ರೂ.ಪರಿಹಾರ

ಬೆಂಗಳೂರು : ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯಡಿ ಮುಳುಗಡೆಯಾಗುವ ಪ್ರತಿ ಎಕರೆ ನೀರಾವರಿ ಜಮೀನಿಗೆ ರೂ.40 ಲಕ್ಷ ಹಾಗೂ ಒಣ ಜಮೀನಿಗೆ ಪ್ರತಿ ಎಕರಿಗೆ ರೂ.30 ಲಕ್ಷ. ಕಾಲುವೆಗಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿ ಪೈಕಿ ನೀರಾವರಿ ಜಮೀನಿಗೆ ಪ್ರತಿ ಎಕರೆಗೆ ರೂ.30 ಲಕ್ಷ ಹಾಗೂ ಒಣ ಜಮೀನಿಗೆ ಪ್ರತಿ ಎಕರಿಗೆ ರೂ.25 ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ವಿಧಾನಸೌಧದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಲು ಮಂಗಳವಾರ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸ್ಥಳೀಯ ಜನಪ್ರತಿನಿಧಿಗಳು, ರೈತರು, ಸಚಿವರ ಅಭಿಪ್ರಾಯ ಪಡೆದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು ಈ ಪರಿಹಾರ ದರವು ಕೇವಲ ಕೃಷ್ಣಾ ಭಾಗ್ಯ ಜಲನಿಗಮ ವ್ಯಾಪ್ತಿಯ ಯುಕೆಪಿ 3ನೇ ಹಂತದ ಯೋಜನೆ ಪ್ರದೇಶಕ್ಕೆ ಮಾತ್ರ ಸೀಮಿತವಾಗಲಿದೆ. ಅಧಿಸೂಚನೆ ಹೊರಡಿಸುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಇತರೆ ಪ್ರಕ್ರಿಯೆಗಳು ವಿಳಂಬವಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ ಎಂದು ಹೇಳಿದರು.

ಈ ಯೋಜನೆಯಲ್ಲಿ ರೂ.70 ಸಾವಿರ ಕೋಟಿ ಕೇವಲ ಭೂಸ್ವಾಧೀನ ಪ್ರಕ್ರಿಯೆಗೆ ವ್ಯಯವಾಗಲಿದೆ. ಈ ಪ್ರಕ್ರಿಯೆಯನ್ನು ರೈತರ ಒಪ್ಪಿಗೆ ಹಾಗೂ ನೇರವಾಗಿ ಖರೀದಿ ಮೂಲಕ 3 ವರ್ಷಗಳ ಅವಧಿಯಲ್ಲಿ ಮುಗಿಸಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು.

ಈ ಭಾಗದಲ್ಲಿ ದಿನೇ ದಿನೆ ಭೂಮಿ ಬೆಲೆ ಏರಿಕೆಯಾಗುತ್ತಿದೆ. ಈ ಹಿಂದೆ ಬೊಮ್ಮಾಯಿ ಅವರ ಸರ್ಕಾರವು ನೀರಾವರಿ ಜಮೀನಿಗೆ ಪ್ರತಿ ಎಕರೆಗೆ 24 ಲಕ್ಷ ಹಾಗೂ ಒಣ ಭೂಮಿಗೆ 20 ಲಕ್ಷ ಪರಿಹಾರ ನಿಗದಿ ಮಾಡಿತ್ತು. ಈ ವಿಚಾರವಾಗಿ ಸಂಪುಟ ಉಪಸಮಿತಿ ರಚಿಸಲಾಗಿತ್ತಾದರೂ ರೈತರು ಈ ತೀರ್ಮಾನಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಈ ತೀರ್ಮಾನವನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಈ ಯೋಜನೆಯ ಎಲ್ಲಾ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ಮಾಡಲು ತೀರ್ಮಾನಿಸಿದ್ದೇವೆ” ಎಂದರು.

1.33 ಲಕ್ಷ ಎಕರೆ ಭೂಮಿ ಸ್ವಾಧೀನ
“ಈ ಯೋಜನೆಗೆ 1,33,867 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಈ ಪೈಕಿ 75,563 ಎಕರೆ ಮುಳುಗಡೆಯಾಗಲಿದ್ದು, ಕಾಲುವೆಗಾಗಿ 51,837 ಎಕರೆ ಭೂಮಿ ಅಗತ್ಯವಿದೆ. ಇನ್ನು ಪುನಶ್ಚೇತನ ಕಾರ್ಯಕ್ಕೆ 6,467 ಎಕರೆ ಜಮೀನು ಬೇಕಾಗಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಸ್ವಾಧೀನಪಡಿಸಿಕೊಳ್ಳಲಾಗುವುದು. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳು ವಿಚಾರಣೆ ನಡೆಯುತ್ತಿದೆ. ಸುಮಾರು 20 ಸಾವಿರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಈ ಕಾಯ್ದೆಯಲ್ಲಿ ನೀಡಲಾಗಿರುವ ಅವಕಾಶದ ಪ್ರಕಾರ ಈ ಪ್ರಕರಣಗಳನ್ನು ರಾಜಿ ಸಂಧಾನ ಕಾನೂನು ಪ್ರಕಾರ ಇವುಗಳನ್ನು ಇತ್ಯರ್ಥ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣವಿಲ್ಲದ ಜಮೀನುಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.

“ಪುನಶ್ಚೇತನ ಕಾರ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರಕರಣಗಳಿರುವ ಕಾರಣ, ನಾವು ಈ ವಿಚಾರದಲ್ಲಿ ಹೊಸ ನೀತಿ ರೂಪಿಸಲು ತೀರ್ಮಾನಿಸಿದ್ದೇವೆ. ಈ ವಿಚಾರವಾಗಿ ಸ್ಥಳೀಯ ನಾಯಕರು, ರೈತರ ಅಭಿಪ್ರಾಯ ಪಡೆಯಲಾಗುವುದು. ನ್ಯಾಯಯುತ ಪರಿಹಾರ, ಭೂಸ್ವಾಧೀನ ಪಾರದರ್ಶಕತೆ ಹಕ್ಕು ಕಾಯ್ದೆಯ ಸೆಕ್ಷನ್ 51ರ ಅಡಿಯಲ್ಲಿ ಭೂಸ್ವಾಧೀನ, ಪುನಶ್ಚೇತನ ಹಾಗೂ ಪರಿಹಾರ ಪ್ರಾಧಿಕಾರ ರಚಿಸಲು ಅವಕಾಶವಿದೆ. ಹೀಗಾಗಿ ರಾಜ್ಯ ಸರ್ಕಾರ ಮೊದಲ ಬಾರಿಗೆ ಈ ಪ್ರಾಧಿಕಾರವನ್ನು ರಚಿಸಲಿದೆ. ಮುಖ್ಯನ್ಯಾಯಮೂರ್ತಿಗಳು ನೇಮಕ ಮಾಡುವ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಾಧಿಕಾರವನ್ನು ರಚಿಸಲಾಗುವುದು” ಎಂದು ತಿಳಿಸಿದರು.

“ರೈತರ ಬದುಕಿಗೆ ಹೊಸ ರೂಪ ನೀಡಿ, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ನಮ್ಮ ಸರ್ಕಾರದ ಸಂಕಲ್ಪ. ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಜಾರಿಗೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಇತಿಹಾಸದಲ್ಲೇ ಮಹತ್ತರ ತೀರ್ಮಾನ ಕೈಗೊಂಡಿದೆ. 30-12-2020ರಲ್ಲಿ ಕೃಷ್ಣಾ ನೀರು ವಿವಾದ ನ್ಯಾಯಾಧೀಕರಣದಲ್ಲಿ ಕರ್ನಾಟಕ ರಾಜ್ಯಕ್ಕೆ ತನ್ನ ಪಾಲಿನ ನೀರು ಹಂಚಿಕೆಯಾಗಿದ್ದು, ಇದರ ಅಂತಿಮ ವರದಿ 29-11-2013ರಲ್ಲಿ ನೀಡಲಾಗಿತ್ತು. ಆದರೂ ಇವತ್ತಿನವರೆಗೂ ಕೇಂದ್ರ ಸರ್ಕಾರ ಈ ವಿಚಾರವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ” ಎಂದು ಆಕ್ಷೇಪಿಸಿದರು.

Tags:
error: Content is protected !!