ಕಚೇರಿ ಕೆಲಸದ ನಡುವೆಯೂ ಆಗಾಗ್ಗೆ ಎದ್ದು ಓಡಾಡಿ
ನೀರು ಕುಡಿಯಲು ಆಗಾಗ್ಗೆ ಎದ್ದು ನಡೆಯಿರಿ
ಲಿಫ್ಟ್, ಎಸ್ಕಲೇಟರ್ ಬದಲು ಮೆಟ್ಟಿಲು ಹತ್ತಿ ಇಳಿಯಿರಿ
ಫೋನ್ ಕರೆ ಬಂದಾಗ ಮಾತನಾಡುತ್ತಾ ಓಡಾಡಿ
ವರ್ಕ್ ಫ್ರಮ್ ಹೋಮ್ ಇದ್ದರೆ ಹಾಸಿಗೆ/ ಫೋಮ್ ಬೆಡ್ ಮೇಲೆ ಕುಳಿತು ಕೆಲಸ ಮಾಡಬೇಡಿ
ಬದಲಾದ ಜೀವನಶೈಲಿಯಿಂದಾಗಿ ಪ್ರತಿಯೊಂದಕ್ಕೂ ಯಂತ್ರಗಳ ಮೊರೆ ಹೋಗುತ್ತಿರುವುದರಿಂದ ದೈಹಿಕ ಶ್ರಮ ಕಡಿಮೆಯಾಗಿ, ಮಾನಸಿಕ ಶ್ರಮ (ಒತ್ತಡ) ಹೆಚ್ಚಾಗುತ್ತಿರುವುದರಿಂದ ದೇಹ ಅನಾರೋಗ್ಯಗಳ ಆಗರ ಆಗುತ್ತಿದ್ದು, ಈ ಅನಾರೋಗ್ಯವನ್ನು ಹೊಡೆದೋಡಿಸಲು ತೆಗೆದುಕೊಳ್ಳುವ ಗುಳಿಗೆಗಳಿಂದಾಗಿ ಉಂಟಾಗುವ ಸೈಡ್ ಎಫೆಕ್ಟ್‌ನಿಂದಾಗಿ ಆರೋಗ್ಯ ಮತ್ತಷ್ಟು ಹಾಳಾಗುತ್ತಿರುವುದು ಸಾಮಾನ್ಯ ಸಂಗತಿ.
ಕೃಷಿ ಪ್ರಧಾನವಾದ ಭಾರತದಲ್ಲಿ ಯಾಂತ್ರಿಕ ಕೃಷಿ ಹೆಚ್ಚಾಗುವ ಮುಂಚೆ ರೈತ ಮಹಿಳೆಯರೂ ಪ್ರಮುಖ ಪಾತ್ರವಹಿಸುತ್ತಿದ್ದರು. ಗಂಡ-ಮಕ್ಕಳು ದನ ಕರು ಗಳನ್ನು ಈಚೆಗೆ ಕಟ್ಟಿ ಜಮೀನಿಗೆ ಹೊರಟರೆ ಕೊಟ್ಟಿಗೆ ಬಳಿದು ಸ್ವಚ್ಛಗೊಳಿಸಿ, ಹಾಲು ಕರೆದು, ಬಾವಿಯಿಂದ ನೀರು ಸೇದಿ ಮನೆಗೆ ತುಂಬಿಸಿಕೊಂಡು ಒರಳುಕಲ್ಲಿ ನಲ್ಲಿ ಮಸಾಲೆ ರುಬ್ಬಿ ಅಡುಗೆ ಮಾಡಿಕೊಂಡು ಜಮೀನಿಗೆ ಬುತ್ತಿ ಹೊತ್ತುಕೊಂಡು ಹೋಗಿ ಸಂಜೆವರೆಗೂ ಗಂಡ-ಮಕ್ಕಳೊಂದಿಗೆ ಜಮೀನಿನಲ್ಲಿ ದುಡಿದು ಬಂದು, ರಾತ್ರಿ ಮನೆ ಮಂದಿಗೆಲ್ಲಾ ಅಡುಗೆ ಮಾಡಿ ಗೃಹಕೃತ್ಯಗಳನ್ನೆಲ್ಲ ಪೂರೈಸಿ ದಿಂಬಿಗೆ ತಲೆ ಕೊಡುತ್ತಿದ್ದ ರೈತ ಮಹಿಳೆಯ ಬಳಿಗೆ ಯಾವ ರೋಗ ರುಜಿನವೂ ಸುಳಿಯುತ್ತಿರಲಿಲ್ಲ.
ಆದರೆ, ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಿದಂತೆಲ್ಲ ರೈತ ಮಹಿಳೆಯೂ ಮನೆಗೆ ಸೀಮಿತಳಾಗಿದ್ದರೆ, ವಿದ್ಯಾವಂತ ಮಹಿಳೆ ಗಂಡಿಗೆ ಸರಿಸಮನಾಗಿ ತಿಂಗಳ ಸಂಬಳಕ್ಕೆ ದುಡಿಯಲು ಹೊರಗೆ ಹೋಗುತ್ತಿರುವುದರಿಂದ ಗೃಹಕೃತ್ಯವೆಂಬುದು ಸ್ಮಾರ್ಟ್ ವರ್ಕ್ ಆಗಿರುವುದರಿಂದ ಹಸಿವು ನೀಗಿಸಿಕೊಳ್ಳಲು ಮನೆಗೂ ಜಂಕ್ ಫುಡ್‌ಗಳನ್ನು ಆರ್ಡರ್ ಮಾಡಿ ತರಿಸಿಕೊಳ್ಳಲಾಗುತ್ತಿದೆ. ಇನ್ನೂ ಬಹುತೇಕ ಮಹಿಳೆಯರು ಧಾರವಾಹಿಗಳ ದಾಸರಾಗಿ ಗಂಟೆ ಗಟ್ಟಲೇ ಟೀವಿ ಮುಂದೆಯೇ ಕುಳಿತಿರುತ್ತಾರೆ. ಊಟ, ತಿಂಡಿ ಎಲ್ಲವೂ ಟಿವಿ ಇಲ್ಲವೇ ಮೊಬೈಲ್ ನೋಡುತ್ತಲೇ ಮುಗಿಯುತ್ತದೆ. ಈ ರೀತಿ ದೇಹವನ್ನು ಅನಾರೋಗ್ಯಕ್ಕೆ ತೆರೆದಿಟ್ಟು ಆರೋಗ್ಯ ಕಾಪಾಡಿ ಕೊಳ್ಳಲು ಬಹುತೇಕರು ವಾಕಿಂಗ್, ಜಾಗಿಂಗ್ ಮೊರೆ ಹೋಗುತ್ತಿರುವುದನ್ನು ಕಾಣಬಹುದು.
ಹೀಗೆ ಹೊರಗೆ ಹೋಗಿ ಕಚೇರಿಗಳಲ್ಲಿ ದಿನವಿಡೀ ಕುಳಿತು ಕೆಲಸ ಮಾಡುತ್ತಾ ಕೈ ತುಂಬಾ ಸಂಬಳ ಎಣಿಸಿಕೊಳ್ಳುವ ಮಹಿಳೆಯರು ತನಗರಿವಿಲ್ಲದಂತೆ ದೇಹವನ್ನು ಅನಾರೋಗ್ಯದ ಆಗರ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಗಂಡಸರೂ ಕೂಡ ಹೊರತಾಗಿಲ್ಲ. ದಿನವಿಡೀ ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವವರು ಜಾಗರೂಕರಾಗಿರಿ. ಸರಿಯಾದ ರೀತಿಯಲ್ಲಿ ಮುನ್ನೆಚ್ಚರಿಕೆ ಗಳನ್ನು ತೆಗೆದುಕೊಳ್ಳದಿದ್ದರೆ, ಹೃದಯಾಘಾತದಂತಹ ಅಪಾಯಗಳು ಎದುರಾಗುವ ಸಾಧ್ಯತೆಗಳು ಹೆಚ್ಚು ಎಂದು ಆರೋಗ್ಯತಜ್ಞರು ಹೇಳುತ್ತಾರೆ. ಆರೋಗ್ಯಕರ ಅಭ್ಯಾಸಗಳಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ. ಸದ್ದಿಲ್ಲದೇ ನಮ್ಮ ದೇಹವನ್ನು ಬಾಧಿಸುವ ಈ ರೀತಿಯ ಅಪಾಯವನ್ನು ಕಡಿಮೆ ಮಾಡಲು ಜೀವನಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯ.
ನಿತ್ಯ ಲಘು ವ್ಯಾಯಾಮ, ವಾಕಿಂಗ್, ಜಾಗಿಂಗ್ ಮಾಡುವುದನ್ನು ಮರೆಯಬೇಡಿ. ಜೊತೆಗೆ ನಿತ್ಯ ಸಮತೋಲಿತ ಆಹಾರವನ್ನು ಸೇವಿಸಿ. ಕಚೇರಿ ಕೆಲಸದ ನಡುವೆ ಪ್ರತಿ ೩೦- ೪೦ ನಿಮಿಷಗಳಿಗೊಮ್ಮೆ ಎದ್ದು ಸ್ವಲ್ಪ ನಡೆದಾಡುವುದು ಒಳ್ಳೆಯದು. ಸಾಧ್ಯವಾದಷ್ಟು ಧೂಮಪಾನ ಮತ್ತು ಮದ್ಯಪಾನ ಗಳಿಂದ ದೂರವಿರಿ. ಕನಿಷ್ಠ ೭ ರಿಂದ ೮ ಗಂಟೆಗಳ ಕಾಲ ನಿದ್ರೆ ಮಾಡಿ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ.
ಇದನ್ನು ಓದಿ: ನೋಟರಿಗಳಿಗೂ ಶಿಕ್ಷೆ ಇದೆ
ಸೈಲೆಂಟ್ ಹಾರ್ಟ್ ಅಟ್ಯಾಕ್ ಎಂದರೇನು?: ಸಾಮಾನ್ಯವಾಗಿ ಸೈಲೆಂಟ್ ಹಾರ್ಟ್ ಅಟ್ಯಾಕ್‌ಅನ್ನು ಮೌನ ಹೃದಯಾಘಾತ ಎಂದು ಕರೆಯಲಾಗುತ್ತದೆ. ಇದರಲ್ಲಿ ಎದೆ ನೋವು, ಮೈ ಬೆವರುವುದು ಮತ್ತು ಉಸಿರಾಟದ ತೊಂದರೆಯಂತಹ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಬದಲಾಗಿ ಈ ರೀತಿಯ ಲಕ್ಷಣಗಳು ಬಹಳ ಸೌಮ್ಯವಾಗಿ ಇರಬಹುದು ಅಥವಾ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು. ಹೃದಯಕ್ಕೆ ರಕ್ತದ ಪೂರೈಕೆ ನಿಂತಿದ್ದರೂ ಸಹ ದೇಹವು ಗಮನಾರ್ಹ ಎಚ್ಚರಿಕೆಗಳನ್ನು ನೀಡುವುದಿಲ್ಲ.
ಬಹುತೇಕ ಜನ ಇದನ್ನು ಕೆಲಸದ ಆಯಾಸ ಅಥವಾ ಒತ್ತಡ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಈ ರೀತಿ ಸ್ವಯಂ ವೈದ್ಯರಾಗಿ ನಿರ್ಲಕ್ಷ್ಯವಹಿಸುವುದೇ ಹೆಚ್ಚು ಅಪಾಯಕಾರಿ, ಸೈಲೆಂಟ್ ಹಾರ್ಟ್ ಅಟ್ಯಾಕ್ ನಿಂದ ರೋಗ ಲಕ್ಷಣಗಳು ಕಾಣಿಸಿಕೊಳ್ಳದಿರುವು ದರಿಂದ ರೋಗಿಗೆ ಸಕಾಲಿಕ ವೈದ್ಯಕೀಯ ನೆರವು ದೊರೆಯುವುದಿಲ್ಲ. ಇದರಿಂದ ಹೃದಯವು ತೀವ್ರವಾಗಿ ಹಾನಿಗೆ ಒಳಗಾದ ನಂತರವೇ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗಾಗಿ ಇದು ಸಾವಿನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು. ನಿತ್ಯ ಕನಿಷ್ಠ ಹತ್ತು ಸಾವಿರ ಹೆಜ್ಜೆಗಳಷ್ಟು ನಿಯಮಿತವಾಗಿ ನಡೆಯುವವರು ಆರೋಗ್ಯವಂತರು ಎನ್ನುತ್ತಾರೆ ಹೃದ್ರೋಗ ತಜ್ಞರು. ಹೃದಯವನ್ನು ಅಪಾಯಕ್ಕೆ ಒಡ್ಡುವ ಮುನ್ನ ಜಡ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದು ಉತ್ತಮ.
ಹೃದಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?: ತುಂಬಾ ಸಮಯದವರೆಗೆ ಚಲನೆ ಇಲ್ಲದೆ, ಕುಳಿತಲ್ಲಿಯೇ ಒತ್ತಡದಿಂದ ಕೆಲಸ ಮಾಡುವುದರಿಂದ ರಕ್ತ ಪರಿಚಲನೆ ನಿಧಾನವಾಗುತ್ತದೆ. ಇದರ ಪರಿಣಾಮವಾಗಿ ಹೃದಯಕ್ಕೆ ರಕ್ತ ಮತ್ತು ಆಮ್ಲಜನಕ ಪೂರೈಕೆ ಸರಿಯಾಗಿ ಆಗುವುದಿಲ್ಲ. ಈ ಸ್ಥಿತಿಯು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ದೇಹವನ್ನು ಒಡ್ಡುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಆರೋಗ್ಯ ತಜ್ಞರು. ಸಾಲದ್ದಕ್ಕೆ ದಿನವಿಡೀ ಕುಳಿತು ಕೆಲಸ ಮಾಡುವುದರಿಂದ ಬೊಜ್ಜು, ಮಧುಮೇಹ, ಅಧಿಕ ರಕ್ತದ ಒತ್ತಡ, ಬೆನ್ನು ನೋವು ಮುಂತಾದ ಸಮಸ್ಯೆಗಳಿಗೂ ಕಾರಣವಾಗಬಹುದು. ಕುಳಿತು ಕೊಳ್ಳುವುದರಿಂದ ಹೃದಯಾಘಾತವಾಗದಿದ್ದರೂ ಆ ಅಪಾಯವನ್ನು ಹೆಚ್ಚಿಸುತ್ತದೆ.




