Mysore
23
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕಡಲ ಮೇಲಿನ ಕನಸು ಸೇಂಟ್ ಮೇರಿಸ್ ದ್ವೀಪ 

ಜಂಜಾಟದ ಬದುಕಿನಲ್ಲಿ ಪ್ರವಾಸ ಎಂದಾಕ್ಷಣ ಎಲ್ಲರ ಮೈಮನ ರೋಮಾಂಚನಗೊಳ್ಳುತ್ತದೆ. ಮನಸ್ಸಿಗೆ ಚೇತೋಹಾರಿ ಅನುಭವ ನೀಡುವ ಪ್ರವಾಸ ಎಲ್ಲರಿಗೂ ಇಷ್ಟವಾಗುತ್ತದೆ. ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಸಂತಸ ಮತ್ತು ಉತ್ಸಾಹದಿಂದ ತೊಡಗಿಸಿಕೊಳ್ಳಲು ಹಾಗೂ ನಮ್ಮನ್ನು ಪುನಶ್ಚೇತನಗೊಳಿಸುವಲ್ಲಿ ಪ್ರವಾಸವು ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಪ್ರವಾಸಗಳಲ್ಲಿ ಮನಸ್ಸಿಗೆ ಮುದ ನೀಡುವ, ನವಚೈತನ್ಯವನ್ನು ತುಂಬುವ ದ್ವೀಪ ‘ಸೇಂಟ್ ಮೇರಿಸ್ ಐಲ್ಯಾಂಡ್’ ಬಹಳ ಅದ್ಭುತವಾಗಿದ್ದು ಭೂಲೋಕದ ಸ್ವರ್ಗ ಎನಿಸಿದೆ.

ಸೇಂಟ್ ಮೇರಿಸ್ ಐಲ್ಯಾಂಡ್, ಬೀಚ್‌ಗಳ ತವರೂರು ಎಂದೇ ಕರೆಯುವ ಉಡುಪಿ ಜಿಲ್ಲೆಯ ಕಡಲ ಕಿನಾರೆಯ ಮಲ್ಪೆ ಬೀಚ್‌ನ ಸನಿಹದಲ್ಲಿದೆ. ಈ ದ್ವೀಪಕ್ಕೆ ಒಬ್ಬರಿಗೆ ೩೫೦ ರೂ.ಗಳ ಪ್ರವೇಶದ ಟಿಕೇಟ್‌ಅನ್ನು ಖರೀದಿಸಿ ಲಾಂಚ್‌ನ ಮೂಲಕ ನಾಲ್ಕು ಕಿಲೋ ಮೀಟರ್ ಸಮುದ್ರದಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಅಗಾಧವಾದ ಕಡಲಿನ ಮಧ್ಯೆ ಲಾಂಚ್‌ನಲ್ಲಿ ಪ್ರಯಾಣ ಮಾಡಬೇಕಾದರೆ ಪ್ರಕೃತಿಯ ರುದ್ರ ರಮಣೀಯ ಸೌಂದರ್ಯವನ್ನು ವೀಕ್ಷಿಸುತ್ತಾ, ಸಾಗರದ ನೀರಿನ ಭೋರ್ಗರೆತ, ಒಂದರ ಹಿಂದೆ ಒಂದರಂತೆ ರಭಸವಾಗಿ ಬರುವ ದೈತ್ಯಾಕಾರದ ಅಲೆಗಳ ಹೊಡೆತ, ನೀಲಿ ಬಣ್ಣದ ನೀರಿನ ನರ್ತನವನ್ನು ವೀಕ್ಷಿಸುತ್ತಾ, ತಂಡೋಪ ತಂಡವಾಗಿ ತಮಗೆ ಇಷ್ಟವಾದ ಸಂಗೀತ ಮತ್ತು ಹಾಡುಗಳಿಗೆ ಹೆಜ್ಜೆಗಳನ್ನು ಹಾಕುತ್ತಾ ನಾವೆಲ್ಲರೂ ಒಂದೇ ಎನ್ನುವ ಭಾವನೆಯಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಪ್ರವಾಸಿಗರು ಈ ಲಾಂಚ್ ನಲ್ಲಿ ಅವರ್ಣನೀಯ ಆನಂದದಿಂದ ಸ್ನೇಹಿತರು, ಕುಟುಂಬಸ್ಥರು ಆಹ್ಲಾದಕರ ವಾತಾವರಣದಲ್ಲಿ ಪ್ರಯಾಣಿಸಬಹುದು. ಎತ್ತ ನೋಡಿದರತ್ತ ನೀಲಿ ಬಣ್ಣದ ನೀರು ಮತ್ತು ನೀಲ ನಭ ಇವೆರಡೂ ಒಂದೇ ಎನ್ನುವ ಕಲ್ಪನೆ ನಮ್ಮಲ್ಲಿ ಮೂಡಿ ಮನಸ್ಸಿಗೆ ಮುದ ನೀಡುತ್ತದೆ.

ಇದನ್ನು ಓದಿ: ಜಾತಿಗಣತಿ ಮರುಸಮೀಕ್ಷೆ : ಸೆ.22ರಿಂದ ಸರ್ವೇ ಆರಂಭ : ಸಿಎಂ ಮಾಹಿತಿ

ಮಕ್ಕಳ ಆಟಗಳಂತೂ ಹೇಳತೀರದು. ಅವರ ಸಂತೋಷಕ್ಕೆ ಪಾರವೇ ಇಲ್ಲ. ಕುಣಿದು ಕುಪ್ಪಳಿಸಿ ತಮ್ಮನ್ನು ತಾವು ಮರೆತು ತುಂಟಾಟದೊಂದಿಗೆ ಪ್ರಯಾಣಿಸುತ್ತಾರೆ. ಸುತ್ತಲೂ ನೀರಿದ್ದು ಮಧ್ಯೆ ಲಾಂಚ್‌ನಲ್ಲಿ ಹೋಗುವುದೇ ಒಂದು ಅದ್ಭುತ ರೋಮಾಂಚನ ಅನುಭವ. ಲಾಂಚ್ನಿಂದ ಇಳಿದಾಗ ಸೇಂಟ್ ಮೇರಿಸ್ ದ್ವೀಪ ಹಸಿರು ಸೀರೆಯನ್ನುಟ್ಟು, ಮಿರಮಿರನೇ ಮಿಂಚುತ್ತಾ ನವ ವಧುವಿನಂತೆ ಕಂಗೊಳಿಸುತ್ತಾ ಅಲ್ಲಿನ ಉಸುಕಿನ ರಾಶಿಯೊಂದಿಗೆ ಸರ್ವರನ್ನು ಕೈಬೀಸಿ ಕರೆಯುತ್ತದೆ.

ಸೇಂಟ್ ಮೇರಿಸ್ ದ್ವೀಪದ ವಿಶೇಷತೆಗಳು ಈ ದ್ವೀಪದಲ್ಲಿ ಮುಗಿಲೆತ್ತರಕ್ಕೆ ಕಾಣುವ ತೆಂಗಿನ ಮರಗಳನ್ನು ನೋಡುವುದೇ ಒಂದು ಚೆಂದದ ಅನುಭವ ಮರಳಿನಲ್ಲಿ ಒಂದರ ಹಿಂದೆ ಮತ್ತೊಂದು ಹೆಜ್ಜೆಗಳನ್ನು ಇರಿಸುತ್ತಿದ್ದರೆ. ಅದರ ಸೊಬಗೇ ಬೇರೆ. ಕಡಲ ತೀರದಲ್ಲಿ ಅತ್ಯದ್ಭುತವಾದ ದೃಶ್ಯಗಳನ್ನು ಸೆರೆಹಿಡಿದು ಆನಂದಿಸುವ ಆ ಪರಿಯೇ ಅವರ್ಣನೀಯ ವರ್ಣರಂಜಿತವಾಗಿ ಮಿನುಗುವ ಕಪ್ಪೆ ಚಿಪ್ಪು ತುಂಬಾ ಹೇರಳವಾಗಿರುವುದನ್ನು ಕಣ್ತುಂಬಿಕೊಳ್ಳಬಹುದು. ಸಮುದ್ರದ ತೀರದಲ್ಲಿ ಕಪ್ಪು ಬಣ್ಣದಿಂದ ಕೂಡಿದ ಮಾನವನೇ ನಿರ್ಮಿಸಿರುವಂತೆ ವಿಭಿನ್ನ ಚಿತ್ತಾರಗಳ ಆಕಾರವುಳ್ಳ ಷಡ್ಭುಜಾಕೃತಿಗಳ ಶಿಲೆಗಳನ್ನು ನೋಡಲು ಎರಡು ಕಣ್ಣುಗಳು ಸಾಲವು.

ಅಂತಹ ಅದ್ಭುತವಾದಂತಹ ಮರೆಯಲಾಗದ ಅನುಭವವನ್ನು ನೀಡುತ್ತದೆ. ಯಾವುದೋ ಬೇರೊಂದುಲೋಕಕ್ಕೆ ಬಂದಿದ್ದೇವೆ ಎನ್ನುವ ಅನುಭವ ಮತ್ತು ಕಲ್ಪನೆ ನಮಗಾಗುತ್ತದೆ. ಈ ದ್ವೀಪವು ಸುಮಾರು ೫೦೦ ಮೀಉದ್ದವಿದ್ದು, ೧೦೦ ಮೀ ಅಗಲವಿದೆ. ಈ ದ್ವೀಪದಲ್ಲಿ ನಿಂತು ನೀಲಿ ಬಣ್ಣದಿಂದ ಕಾಣುವ ಸಮುದ್ರವನ್ನು ವೀಕ್ಷಿಸುತ್ತಿದ್ದರೆ ಸಮಯ ಸರಿದುಹೋಗುವುದೇ ಗೊತ್ತಾಗುವುದಿಲ್ಲ. ಸಂಜೆಯ ವೇಳೆಯಂತು ಕೆಂಪು ಬಣ್ಣದಿಂದ ರಂಗೇರಿದ ಸೂರ್ಯಾಸ್ತದ ದೃಶ್ಯ ನೋಡಲು ಬಹು ಸುಂದರವಾಗಿರುತ್ತದೆ.

ಇದನ್ನು ಓದಿ: ಕೋಟೆ | 2 ಲಕ್ಷ ರೂ.ಮೌಲ್ಯದ ಗಾಂಜಾ ವಶ

ಈ ಮನಮೋಹಕವಾದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಪ್ರವಾಸಿಗರು ಕಾತರದಿಂದ ಕಾಯುತ್ತಿರುತ್ತಾರೆ. ಸಮುದ್ರದ ಅಲೆಗಳು ದ್ವೀಪದ ತೀರಕ್ಕೆ ಒಂದರ ಹಿಂದೆ ಮತ್ತೊಂದು ಬಂದು ಅಪ್ಪಳಿಸುವುದನ್ನು ನೋಡಲು ತುಂಬಾ ಸೊಗಸಾಗಿರುತ್ತದೆ. ಉಕ್ಕಿ ಹರಿಯುವ ಸಮುದ್ರವೂ ನೋಡಲು ಸುಂದರವಾಗಿರುತ್ತದೆ. ಒಟ್ಟಿನಲ್ಲಿ ಕಣ್ಣಿಗೆ, ಮನಸ್ಸಿಗೆ ಮುದವನ್ನು ನೀಡುತ್ತದೆ. ಇವೆಲ್ಲವನ್ನೂ ವೀಕ್ಷಿಸಬೇಕಾದರೆ ಬಹಳ ಎಚ್ಚರಿಕೆ ವಹಿಸುವುದು ಪ್ರವಾಸಿಗರ ಜವಾಬ್ದಾರಿಯಾಗಿರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಈ ದ್ವೀಪಕ್ಕೆ ಪ್ರವೇಶವಿರುವುದಿಲ್ಲ. ಸಂಜೆ ಆರು ಗಂಟೆಯ ನಂತರ ಈ ದ್ವೀಪದಲ್ಲಿ ಯಾರು ಇರುವಂತಿಲ್ಲ. ಅಲ್ಲಲ್ಲಿ ಎಚ್ಚರಿಕೆಯ ನಿಯಮ ಮತ್ತು ಸೂಚನೆಯ ನಾಮಫಲಕಗಳಿರುತ್ತವೆ.

ಐತಿಹ್ಯದ ಹಿನ್ನೆಲೆ…:  ಈ ದ್ವೀಪದ ಮೊದಲ ಹೆಸರು ‘ತೋನ್ಸೆ ಪಾರ್’ಎಂದಿತ್ತು. ಆದರೆ ಇತಿಹಾಸದ ಪ್ರಕಾರ ೧೪೯೭ರಲ್ಲಿಪೋರ್ಚುಗೀಸ್ ಶೋಧಕ ವಾಸ್ಕೋಡಿಗಾಮ ಜಲಮಾರ್ಗವನ್ನು ಕಂಡುಹಿಡಿಯಬೇಕಾದರೆ, ಯುರೋಪ್‌ನಿಂದ ಭಾರತದ ಕಡೆಗೆ ಸಾಗರ ಮಾರ್ಗದಲ್ಲಿ ಪ್ರಯಾಣಿಸುವಾಗ ಈ ದ್ವೀಪದಲ್ಲಿಇಳಿದನೆಂದು ಹೇಳಲಾಗುತ್ತದೆ.

ಅಲ್ಲಿ ಶಿಲುಬೆ ಯೊಂದನ್ನು ನೆಟ್ಟು ಈ ರೀತಿ ಬರೆಯುತ್ತಾನೆ ‘”El Padron de Santa Maria’’ ಅಂದರೆ ‘ತಾಯಿ ಮೇರಿಗಾಗಿ ಸಮರ್ಪಿಸಿದ ತಾಣ’ ಎಂದು ಹೆಸರಿಟ್ಟ ಎಂದು ಹೇಳಲಾಗುತ್ತದೆ. ಹಾಗಾಗಿಕಾಲಕ್ರಮೇಣ ಈ ದ್ವೀಪಕ್ಕೆ ‘ಸೇಂಟ್ ಮೇರೀಸ್‘ಎಂಬ ಹೆಸರು ಬದಲಾಯಿತೆಂದು ಹೇಳಲಾಗುತ್ತದೆ. ಈ ದ್ವೀಪಕ್ಕೆ ಕೋಕೋನೆಟ್ ಐಲ್ಯಾಂಡ್ ಎಂದು ಕೂಡ ಕರೆಯುತ್ತಾರೆ. ಈ ದ್ವೀಪಕ್ಕೆ ಗೆಳೆಯರೊಟ್ಟಿಗೆ ತೆರಳಿದ ಆ ಸುಮಧುರ ದಿನಗಳನ್ನು ಎಂದಿಗೂ ಮರೆಯಲಾಗದು. ನೀವು ಒಮ್ಮೆ ‘ಸೇಂಟ್ ಮೇರಿಸ್ ಐಲ್ಯಾಂಡ್’ಗೆ ತೆರಳಿ ಪ್ರಕೃತಿಯ ಸೌಂದರ್ಯವನ್ನು ಸವಿದು ಸಂಭ್ರಮಿಸಿ.

-ಪರಶಿವಮೂರ್ತಿ ಎನ್. ಪಿ. ನಂಜೀಪುರ, ಸರಗೂರು ತಾಲ್ಲೂಕು

Tags:
error: Content is protected !!