ಭೇರ್ಯ ಮಹೇಶ್
ಅವಳಿ ತಾಲ್ಲೂಕುಗಳ ಹಲವೆಡೆ ಬೆಳೆ ನಾಶ; ರೈತರಿಗೆ ಸಂಕಷ್ಟ
ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಮಳೆಯ ಅಬ್ಬರದಿಂದ ಜಮೀನುಗಳಿಗೆ ನೀರು ನುಗ್ಗಿಅವಾಂತರ ಸೃಷ್ಟಿಯಾಗಿ, ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಬುಧವಾರ ರಾತ್ರಿಯಿಡೀ ಸುರಿದ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿ, ಕೆರೆಗಳಂತಾಗಿವೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮಿರ್ಲೆ ಭಾಗದಲ್ಲಿ ಸರಾಸರಿ ೯೨.೬ ಮಿ.ಮೀ. ಮಳೆಯಾಗಿದ್ದು, ಕಪ್ಪಡಿ ಕ್ಷೇತ್ರಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಂತೆ ಇರುವ ಗಂಧನಹಳ್ಳಿ ಬಳಿ ಹಂಪಾಪುರ ಹಳೇ ನಾಲೆಗೆ ೫ ಕಿ.ಮೀ.ನಿಂದ ೨೧ ಕಿ.ಮೀ.ವರೆಗೆ ನಾಲೆ ಏರಿ ಕುಸಿದಿದೆ ಹಾಗೂ ಹಿರಿನಾಲೆಯ ೯ರಿಂದ ೧೩ ಕಿ.ಮೀ.ನಲ್ಲಿ ನಾಲೆ ಏರಿ ಒಡೆದಿರುವ ಪರಿಣಾಮ ಭತ್ತದ ಬೆಳೆ ಸೇರಿದಂತೆ ಅನೇಕ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಪೂರ್ಣವಾಗಿ ಹಾನಿಯಾಗಿದೆ.
ಧಾರಾಕಾರವಾಗಿ ಸುರಿದ ಮಳೆಯ ನೀರು ನುಗ್ಗಿದ ಪರಿಣಾಮ ನಾಲೆಯ ಏರಿ ಒಡೆದು ನೀರು ರೈತರ ಜಮೀನುಗಳಿಗೆ ನುಗ್ಗಿದ ಪರಿಣಾಮದಿಂದಾಗಿ ಭತ್ತದ ಬೆಳೆ, ಬಾಳೆ, ನಾಟಿ ಮಾಡಿದ ಅಡಕೆ, ವಿವಿಧ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ರೈತರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ತಹಸಿಲ್ದಾರ್ ಭೇಟಿ: ಗಂಧನಹಳ್ಳಿ ಬಳಿ ಹಂಪಾಪುರ ಹಳೇ ನಾಲೆ ಹಾಗೂ ಏರಿ ಒಡೆದು ಹಿರಿನಾಲೆ ೧೩ ನೇ ಕಿ.ಮೀ. ಬಳಿಯ ರೈತರ ಜಮೀನಿಗೆ ನೀರು ನುಗ್ಗಿ ಅಪಾರ ಬೆಳೆ ನಷ್ಟವಾಗಿದೆ. ಸ್ಥಳಕ್ಕೆ ಕೆ.ಆರ್.ನಗರ ತಾಲ್ಲೂಕಿನ ತಹಸಿಲ್ದಾರ್ ಜಿ.ಸುರೇಂದ್ರಮೂರ್ತಿ, ಹಾರಂಗಿ ನೀರಾವರಿ ನಿಗಮದ ಅಧಿಕ್ಷಕ ಇಂಜಿನಿಯರ್ ಸತೀಶ್, ಸಾಲಿಗ್ರಾಮ ನೀರಾವರಿ ನಿಗಮದ ಇಇ ಕುಶುಕುಮಾರ್ ಭೇಟಿ ನೀಡಿ, ಜಂಟಿ ಸಮೀಕ್ಷೆ ಮಾಡಿದ್ದು, ಬೆಳೆ ನಷ್ಟ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು. ಒಡೆದು ಹೋಗಿರುವ ನಾಲೆ ಏರಿಯನ್ನು ತಾತ್ಕಾಲಿಕವಾಗಿ ಮರಳು ಮೂಟೆಯಿಂದ ಮುಚ್ಚಿಸಿ ಸೂಚಿಸಿದರು. ರಾಜಸ್ವ ನಿರೀಕ್ಷಕ ಪ್ರಕಾಶ್ ಹಾಗೂ ಹಾರಂಗಿ ನೀರಾವರಿ ನಿಗಮದ ಕೆ.ಆರ್.ನಗರ ವಿಭಾಗದ ಎಇಇ ಅಯಾಜ್ ಪಾಷ, ಎಇ ಕಿರಣ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲಿಸಿದರು.
ಲೈನಿಂಗ್ ಕಾಮಗಾರಿ ನಡೆಸಲು ಆಗ್ರಹ: ಅತಿ ಹೆಚ್ಚು ಮಳೆಯಾದಾಗ ಮಿರ್ಲೆ ಶ್ರೇಣಿ ನಾಲೆಗಳಾದ ಹಂಪಾಪುರ ನಾಲೆ, ಹಳೇ ಹೊಸ ನಾಲೆ, ನಾಯಿನಾಲೆ, ಹಿರಿನಾಲೆ ಹಾಗೂ ಗೋವಿನ ನಾಲೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಭಾರಿ ಮಳೆಯಾಗಿ ಹೆಚ್ಚುವರಿ ನೀರು ನಾಲೆಗೆ ಹರಿದು ಬರಲಿದೆ. ನಾಲೆ ಒಡೆದು ಬೆಳೆ ಹಾನಿಯಾದರೆ ರೈತರಿಗೆ ಕಷ್ಟವಾಗಲಿದೆ. ಆದ್ದರಿಂದ ತಾಲ್ಲೂಕಿನ ಇತರೆ ನಾಲೆಗಳಾದ ಚಾಮರಾಜ ಎಡದಂಡೆ ಮತ್ತು ಬಲದಂಡೆ ನಾಲೆಗಳ ಆಧುನೀಕರಣ ಕಾಮಗಾರಿ ಕೈಗೊಂಡಂತೆ ಈ ನಾಲೆಗಳ ಕಾಂಕ್ರೀಟ್ ಲೈನಿಂಗ್ ಕಾಮಗಾರಿ ಕೈಗೊಳ್ಳಬೇಕೆಂದು ರೈತರು ಜನಪ್ರತಿನಿಽಗಳಿಗೆ, ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಮಾಡಿದರು.





