ಎಚ್.ಡಿ.ಕೋಟೆ : ತಾಲ್ಲೂಕಿನ ಕಂದಲಿಕೆ ಹೋಬಳಿಯ (ತೆಕ್ಕಲು) ಗ್ರಾಮದಲ್ಲಿ ಜಮೀನಿನಲ್ಲಿ ಮತ್ತು ಮನೆ ಹಿಂಭಾಗದಲ್ಲಿ ಬೆಳೆದಿದ್ದ ಸುಮಾರು ೨ ಲಕ್ಷ ರೂ. ಮೌಲ್ಯದ ಗಾಂಜಾ ಗಿಡಗಳನ್ನು ಕೋಟೆ ಅಬಕಾರಿ ಇನ್‌ಸ್ಪೆಕ್ಟರ್ ಶಿವರಾಜ್ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಗ್ರಾಮದ ರಾಜೇಶ್ ರಮೇಶ್ ಎಂಬವರ ಮನೆ ಹಿಂಭಾಗ ಮತ್ತು ಜಮೀನಿನಲ್ಲಿ ೨೦ ಕೆಜಿಗೂ ಹೆಚ್ಚು ತೂಕದ ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕೋಟೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಮತ್ತು ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು ಹಾಗೂ ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ನಂಜನಗೂಡು ಉಪ ವಿಭಾಗದ ಅಬಕಾರಿ ಉಪ ಅಧಿಕ್ಷಕರ ಮಾರ್ಗದರ್ಶನದಲ್ಲಿ ಕೋಟೆ ಅಬಕಾರಿ ನಿರೀಕ್ಷಕರು, ಉಪನಿರೀಕ್ಷಕರು ಮತ್ತು ಸಿಬ್ಬಂದಿ ಕಂದಲಿಕೆ (ತೆಕ್ಕಲು) ಗ್ರಾಮದಲ್ಲಿ ಸ್ಥಳೀಯ ಕಂದಾಯ ಅಽಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸಮಕ್ಷಮದಲ್ಲಿ ದಾಳಿ ನಡೆಸಿದ್ದಾರೆ.
ಈ ವೇಳೆ ರಾಜೇಶ್ ಎಂಬಾತ ತನ್ನ ವಾಸದ ಮನೆಯ ಹಿಂಭಾಗದ ಹಿತ್ತಲಿನಲ್ಲಿ ಸುಮಾರು ೩ ಹಸಿ ಗಾಂಜಾ ಗಿಡಗಳನ್ನು ಬೆಳೆದಿರುವುದು (ಒಟ್ಟು ತೂಕ ೪.೬೬೫ ಕೆಜಿ) ಪತ್ತೆಯಾಗಿದೆ.
ಅದೇ ಗ್ರಾಮದ ರಮೇಶ ಎಂಬಾತ ತನ್ನ ವಾಸದ ಮನೆಯ ಹಿಂಭಾಗದ ಜಮೀನಿನಲ್ಲಿ ೩೦ ಹಸಿ ಗಾಂಜಾ ಗಿಡಗಳನ್ನು (ಒಟ್ಟು ತೂಕ ೧೭ ಕೆಜಿ)ಬೆಳೆದಿರುವುದನ್ನು ಪತ್ತೆ ಹಚ್ಚಿ, ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ೨ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಶಿವರಾಜ, ಅಬಕಾರಿ ಉಪ ನಿರೀಕ್ಷಕ ಅಪ್ಸರ್, ಮುಖ್ಯಪೇದೆ ರವಿ, ಪೇದೆ ಕೃಷ್ಣ, ಗೃಹರಕ್ಷಕ ಸಿಬ್ಬಂದಿ ಮತ್ತು ವಾಹನ ಚಾಲಕರು, ಕಂದಾಯ ಅಽಕಾರಿಗಳು, ಗ್ರಾಪಂ ಸಿಬ್ಬಂದಿ ಭಾಗವಹಿಸಿದ್ದರು.





