Mysore
20
broken clouds

Social Media

ಸೋಮವಾರ, 26 ಜನವರಿ 2026
Light
Dark

ಬಾಹ್ಯಾಕಾಶ ಕ್ಷೇತ್ರಕ್ಕೆ ರಾಜ್ಯದ ಕೊಡುಗೆ ಅಪಾರ- ಸಚಿವ ಪ್ರಿಯಾಂಕ್ ಖರ್ಗೆ.

ಕಲಬುರಗಿ : ಬಾಹ್ಯಾಕಾಶ ಕ್ಷೇತ್ರಕ್ಕೆ‌ ರಾಜ್ಯದ ಕೊಡುಗೆ ಅಪಾರವಾಗಿದೆ. ಬೆಂಗಳೂರು ಬಾಹ್ಯಾಕಾಶದ ರಾಜಧಾನಿ ಎಂದು‌ ಹೆಸರು ಮಾಡಿದೆ. ಹೆಚ್ ಎ ಎಲ್ ಹಾಗೂ ಇಸ್ರೋದಂತಹ ಮಹತ್ತರ ಸಂಸ್ಥೆಗಳನ್ನು ಹೊಂದಿರುವ ಹೆಗ್ಗಳಿಕೆ ರಾಜ್ಯಕ್ಕೆ ಇದೆ. ಜೊತೆಗೆ ಬಾಹ್ಯಾಕಾಶ ಕ್ಷೇತ್ರಕ್ಕೆ ಬೇಕಾಗುವ ತಾಂತ್ರಿಕ ಅವಶ್ಯಕತೆಗಳ ತಯಾರಿಕೆ ಹಾಗೂ ರಕ್ಷಣಾ ಕ್ಷೇತ್ರದ ಸಂಶೋಧನೆಯಲ್ಲಿ ಶೇ 60 ರಷ್ಟು ಕೊಡುಗೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯ ಪಟ್ಟರು.

ಕಲಬುರಗಿ ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್ ಆರ್ ಎನ್ ಮೆಹ್ತಾ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಅವರು ಮಾತನಾಡಿದರು.

ತಂತ್ರಜ್ಞಾನದ ಶರವೇಗದ ಬೆಳವಣಿಗೆಗೆ ಅನುಗುಣವಾಗಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದನ್ನು ಗಮನದಲ್ಲಿಟ್ಟಿಕೊಂಡು ವಿದ್ಯಾರ್ಥಿಗಳು ಸಾಧನೆಯ ಹಾದಿಯೆಡೆಗೆ ದಿಟ್ಟ ಹೆಜ್ಜೆಗಳನ್ನಿಟ್ಟು ಸಾಗಬೇಕು ಎಂದು ಹೇಳಿದರು.

ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳು ಇಂದು ತೆರೆದುಕೊಂಡಿವೆ. ವಿದ್ಯಾರ್ಥಿಗಳು ತಮಗಿರುವ ಅವಕಾಶಗಳನ್ನು ಬಳಸಿಕೊಂಡು ತಾವು ಆಯ್ಕೆ ಮಾಡಿಕೊಂಡ‌ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು‌ ಕರೆ ನೀಡಿದ ಸಚಿವರು ರಾಜ್ಯ ಪ್ರಪಂಚದಲ್ಲಿಯೇ ಮಾಹಿತಿ ತಂತ್ರಜ್ಞಾನದಲ್ಲಿ ಅಗಾಧವಾದ ಸಾಧನೆ ಮಾಡಿದೆ. ಈಗಿನ ತರುಣ ವಿದ್ಯಾರ್ಥಿ‌ಗಳು ಈ ಕ್ಷೇತ್ರಗಳನ್ನು ಕೂಡಾ ಆಯ್ಕೆ ಮಾಡಿಕೊಂಡು ಕಲಿಕೆ ಹಾಗೂ ಕಟ್ಟುನಿಟ್ಟಿನ ಅಭ್ಯಾಸ ಮಾಡಿದರೆ ಸಾಧನೆ ಮಾಡಬಹುದು. ನಿಮಗೆ ಸರ್ಕಾರ ಸದಾ ಬೆನ್ನಿಗಿರುತ್ತದೆ ಎಂದು ಅಭಯ ನೀಡಿದರು.

ಎಸ್ ಆರ್ ಎನ್ ಮೆಹ್ತಾ ಶಾಲೆಯ ಹನ್ನೊಂದು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಕಳೆದ ಜುಲೈ ತಿಂಗಳಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ಸಂಘದ ಅಡಿಯಲ್ಲಿ ಅಮೇರಿಕಾದ ಫ್ಲಾರಿಡಾದಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಜರುಗಿದ ಅಂತರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಸುಸ್ಥಿರ ಬಾಹ್ಯಾಕಾಶ ವಸಾಹತು ಹಾಗೂ ಭವಿಷ್ಯತ್ತಿನಲ್ಲಿ ವೈಜ್ಞಾನಿಕ ನಿಖರತೆ ಕುರಿತು ತಾವೇ ಪ್ರಸ್ತುತ ಪಡಿಸಿದ ‘ ಇರಾ ‘ ಎನ್ನುವ ಯೋಜನೆಯನ್ನು ಪ್ರಸ್ತುತಪಡಿಸಿ ಪ್ರಥಮ ಬಹುಮಾನ ಪಡೆದ ಹಿನ್ನೆಲೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅಭಿನಂದಿಸಿ ಅವರು ಮಾತನಾಡುತ್ತಿದ್ದರು. ಪ್ರಪಂಚದ 25 ದೇಶಗಳಿಂದ 4900 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್ ಆರ್ ಎನ್ ಮೆಹ್ತಾ ಶಾಲೆಯ ವಿದ್ಯಾರ್ಥಿಗಳ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿದ ಸಚಿವರು, ಸಾಧನೆಗೆ ಅಸಾಧ್ಯವಾದದು ಯಾವುದು ಇಲ್ಲ. ನಿರಂತರ ಕಲಿಕೆ ನಿಮ್ಮ ಸಾಧನೆಗೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಸಚಿವರೊಂದಿಗೆ ಹಂಚಿಕೊಂಡರು.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್ ಕಮೀಷನರ್ ಡಾ ಶರಣಪ್ಪ ಢಗೆ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ‌ ಕಮೀಷನರ್ ಅವಿನಾಶ್ ಶಿಂಧೆ, ಸಹಾಯಕ‌ ಆಯುಕ್ತೆ ಸಾಹಿತ್ಯ, ಡಿಡಿಪಿಐ ಸೂರ್ಯಕಾಂತ ಮದಾನೆ ಸೇರಿದಂತೆ ಎಸ್ ಆರ್ ಎನ್ ಮೆಹ್ತಾ ಶಾಲೆಯ ಆಡಳಿತ ವರ್ಗದವರು ಹಾಗೂ ಸಿಬ್ಬಂದಿ ಇದ್ದರು.

Tags:
error: Content is protected !!