ಪುನೀತ್ ಮಡಿಕೇರಿ
ಫಲಾನುಭವಿಗಳ ಪಟ್ಟಿಯಲ್ಲಿ ಕೊಡಗಿಗೆ ಮೂರನೇ ಸ್ಥಾನ
ಮಡಿಕೇರಿ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲ ಸದ್ಬಳಕೆ ಮತ್ತು ವಿದ್ಯುತ್ ಉತ್ಪಾದನೆಯ ಮೇಲಿನ ಅವಲಂಬನೆ ತಗ್ಗಿಸುವ ಪ್ರಮುಖ ಗುರಿ ಈ ಯೋಜನೆಯದ್ದಾಗಿದೆ. ಮನೆಯ ವಿದ್ಯುತ್ ಉತ್ಪಾದಿಸಿ ಸರ್ಕಾರಕ್ಕೆ ಮಾರಾಟ ಮಾಡುವ ವ್ಯವಸ್ಥೆಯನ್ನು ಯೋಜನೆ ಒಳಗೊಂಡಿದೆ . ಸೂರ್ಯ ಘರ್ ಯೋಜನೆ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಿದರೆ ಇನ್ನೂ ಹಲವರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.
ಪುಟ್ಟ ಜಿ ಕೊಡಗಿನಲ್ಲಿ ವರ್ಷದ ೫ ತಿಂಗಳೂ ಬಹುತೇಕ ಮಳೆಗಾಲವೇ ಆಗಿರುತ್ತದೆ. ಕೆಲವು ಭಾಗಗಳಲ್ಲಂತೂ ಸೂರ್ಯನ ದರ್ಶನವೇ ಆಗುವುದಿಲ್ಲ. ಇಂಥ ಪರಿಸ್ಥಿತಿ ಮಧ್ಯೆಯೇ ಇಲ್ಲಿನ ಪ್ರಯೋಗಶೀಲ ಮನಸ್ಥಿತಿಯ ಕೆಲವರು ಸೂರ್ಯನ ಶಾಖ ಬಳಸಿ ವಿದ್ಯುತ್ ಉತ್ಪಾದನೆಗೋಸ್ಕರ ಕೇಂದ್ರ ಸರ್ಕಾರ ರೂಪಿಸಿರುವ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆದುಕೊಂಡಿzರೆ. ತಮ್ಮ ಮನೆ ಮಹಡಿ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಮನೆ ಬಳಕೆಗೆ ವಿದ್ಯುತ್ ಉತ್ಪಾದಿಸುವುದರ ಜತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಸೆಸ್ಕ್‌ಗೆ ಮಾರಾಟ ಮಾಡಿಯೂ ಲಾಭ ಗಳಿಸುತ್ತಿದ್ದಾರೆ.
ಪ್ರತಿ ಮನೆಗೆ ಉಚಿತ ವಿದ್ಯುತ್ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸೂರ್ಯ ಘರ್ ಯೋಜನೆಯನ್ನು ರೂಪಿಸಿದೆ. ಈ ಯೋಜನೆ ಮೂಲಕ ತಿಂಗಳಿಗೆ ೩೦೦ ಯೂನಿಟ್ ವಿದ್ಯುತ್ ಪಡೆಯಬಹುದಾಗಿದೆ. ಅಲ್ಲದೇ ಹೆಚ್ಚುವರಿ ವಿದ್ಯುತ್ ಅನ್ನು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಮಾರಾಟ ಮಾಡಿ ಹಣ ಗಳಿಸಬಹುದಾಗಿದೆ. ೨೦೨೪ರ ಫೆ. ೧೫ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಚಾಲನೆ ನೀಡಿದ್ದರು.
ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಮನೆಯ ಚಾವಣಿ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರ ಸಬ್ಸಿಡಿ ಕೊಡುತ್ತದೆ. ಸೌರ ಫಲಕಗಳ ಅಳವಡಿಕೆಗೆ ತಗಲುವ ವೆಚ್ಚದ ಮೇಲೆ ಶೇ. ೬೦ರ ತನಕ ಸಬ್ಸಿಡಿ ಸಿಗುತ್ತದೆ. ೧ ಕಿ.ವ್ಯಾಟ್‌ನಿಂದ ೩ ಕಿ.ವ್ಯಾಟ್ ವರೆಗಿನ ಸೌರ ವಿದ್ಯುತ್ ಘಟಕದ ಅಳವಡಿಕೆಗೆ ಧನ ಸಹಾಯ ನೀಡಲಾಗುತ್ತದೆ. ೧ ಕಿ.ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕದ ಅಳವಡಿಕೆಗೆ ೩೦ ಸಾವಿರ ರೂ., ೨ ಕಿ.ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕದ ಅಳವಡಿಕೆಗೆ ೬೦ ಸಾವಿರ ರೂ. ಹಾಗೂ ೩ ಕಿ.ವ್ಯಾಟ್ ಅಥವಾ ಹೆಚ್ಚಿನ ಸಾಮರ್ಥ್ಯದ ಸೌರ ವಿದ್ಯುತ್ ಘಟಕದ ಅವಳವಡಿಕೆಗೆ ೭೮ ಸಾವಿರ ರೂ. ಸಹಾಯಧನ ಸರ್ಕಾರದಿಂದ ಸಿಗುತ್ತದೆ.
ಈ ಯೋಜನೆಯನ್ನು ಅಳವಡಿಸಿಕೊಳ್ಳಲು ಬಯಸುವವರು ಸ್ವಂತ ಮನೆ ಹೊಂದಿರಬೇಕು. ಈ ಮನೆಯ ಮೇಲೆ ಸೌರಫಲಕಗಳನ್ನು ಅಳವಡಿಸಲು ಸೂಕ್ತ ಜಾಗ ಇರಬೇಕು. ಮನೆಯಲ್ಲಿ ಸೂಕ್ತ ರೀತಿಯ ವಿದ್ಯುತ್ ಸಂಪರ್ಕ ಇರಬೇಕು. ಮೊದಲು ಸೌರಫಲಕಗಳನ್ನು ಅಳವಡಿಸಿಕೊಳ್ಳಲು ಸರ್ಕಾರದಿಂದ ಯಾವುದೇ ರೀತಿಯಲ್ಲಿ ಸಹಾಯಧನ ಪಡೆದುಕೊಂಡಿರಬಾರದು. ಇಂಥವರು ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಟ್ಟು ಅಗತ್ಯ ಮಾಹಿತಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
” ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯಾಪ್ತಿಗೆ ಬರುವ ೫ ಜಿಗಳ ಪೈಕಿ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಅಳವಡಿಸಿಕೊಂಡಿರುವ ಫಲಾನುಭವಿಗಳ ಪಟ್ಟಿಯಲ್ಲಿ ಪುಟ್ಟ ಜಿ ಕೊಡಗು ೩ನೇ ಸ್ಥಾನದಲ್ಲಿದೆ. ೨೦೨೫ರ ಜೂನ್ ಅಂತ್ಯದವರೆಗೆ ಜಿಯಲ್ಲಿ ೧೦೬ ಫಲಾನುಭವಿಗಳು ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆದುಕೊಂಡಿzರೆ. ಮೊದಲ ಸ್ಥಾನದಲ್ಲಿ ಇರುವ ಮೈಸೂರು ಜಿಯಲ್ಲಿ ೯೦೨, ದ್ವಿತೀಯ ಸ್ಥಾನ ಪಡೆದುಕೊಂಡಿರುವ ಹಾಸನದಲ್ಲಿ ೧೩೧ ಫಲಾನುಭವಿಗಳಿದ್ದರೆ, ಮಂಡ್ಯದಲ್ಲಿ ೮೧ ಹಾಗೂ ಚಾಮರಾಜನಗರ ಜಿಯಲ್ಲಿ ೩೮ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.”
” ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಬಗ್ಗೆ ಜಿಯ ಜನರಿಂದ ಇನ್ನೂ ಹೆಚ್ಚಿನ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ಇದ್ದೇವೆ. ಈ ಯೋಜನೆಯ ಅನುಕೂಲತೆಗಳ ಬಗ್ಗೆ ಸಾಕಷ್ಟು ಪ್ರಚಾರ ನಡೆಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಮಾಹಿತಿ ನೀಡಲಾಗುತ್ತಿದೆ. ಆಸಕ್ತಿ ಇರುವ ಸಾರ್ವಜನಿಕರು ವಿವರಗಳಿಗಾಗಿ ನಮ್ಮ ಕಚೇರಿ ಸಂಪರ್ಕ ಮಾಡಬಹುದು.”
?ಎಂ.ರಾಮಚಂದ್ರ, ಕಾರ್ಯಪಾಲಕ ಅಭಿಯಂತರ, ಸೆಸ್ಕ್, ಮಡಿಕೇರಿ





