Mysore
18
broken clouds

Social Media

ಶನಿವಾರ, 31 ಜನವರಿ 2026
Light
Dark

ಮಾಜಿ ಶಾಸಕರಿಗೆ ಡಿಜಿಟಲ್‌ ಅರೆಸ್ಟ್ ಹೆಸರಿನಲ್ಲಿ ವಂಚನೆ: 30 ಲಕ್ಷ ಕಳೆದುಕೊಂಡ ಗುಂಡಪ್ಪ ವಕೀಲ್‌

ಬೆಂಗಳೂರು: ಮನಿ ಲ್ಯಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದೀರೆಂದು ಬೆದರಿಸಿ ಮಾಜಿ ಶಾಸಕರೊಬ್ಬರಿಗೆ ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 30 ಲಕ್ಷ ರೂ.ಗಳನ್ನು ಸುಲಿಗೆ ಮಾಡಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಔರಾದ್‍ನ ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರಿಗೆ ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಹಂತಹಂತವಾಗಿ 30 ಲಕ್ಷ ರೂ. ಹಣವನ್ನು ಖದೀಮರು ವರ್ಗಾಯಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ.‌

ಗುಂಡಪ್ಪ ಅವರ ಮೊಬೈಲ್‍ಗೆ ಆ.12ರಂದು ಸಂಜೆ 6 ಗಂಟೆ ಸುಮಾರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಸಿಬಿಐ ಆಫೀಸರ್ ಎಂದು ಪರಿಚಯಿಸಿಕೊಂಡಿದ್ದಾನೆ.

ನೀವು ನರೇಶ್ ಗೋಯಲ್ ಅವರ ಮನಿ ಲ್ಯಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹಾಗೂ ನಿಮ್ಮ ಎಟಿಎಂ ಕಾರ್ಡ್‍ಗಳು ಸಿಕ್ಕಿದ್ದು, ಸಾಕಷ್ಟು ಹಣದ ವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿ ಸೈಬರ್ ವಂಚಕ ಹೆದರಿಸಿದ್ದಾನೆ.

ತದನಂತರದಲ್ಲಿ ಗುಂಡಪ್ಪ ಅವರಿಗೆ ಕರೆ ಮಾಡಿದ ವ್ಯಕ್ತಿ ತಾನು ಪ್ರಕರಣದ ತನಿಖಾಧಿಕಾರಿ ಡಿಸಿಪಿ ನೀರಜ್‍ಕುಮಾರ್ ಎಂದು ಪರಿಚಯಿಸಿಕೊಂಡಿದ್ದು, ನೀವು ಡಿಜಿಟಲ್ ಅರೆಸ್ಟ್ ಆಗಿರುವುದಾಗಿ ಹೇಳಿ ಮೊಬೈಲ್ ಸ್ಥಗಿತಗೊಳಿಸಬೇಡಿ ಎಂದು ಹೇಳಿದ್ದಾಗ ಗುಂಡಪ್ಪ ಅವರು ಗಾಬರಿಗೊಂಡಿದ್ದಾರೆ.

ಆ.13 ರಂದು ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಆನ್‍ಲೈನ್‍ನಲ್ಲಿ ಜಡ್ಜ್ ಮುಂದೆ ಹಾಜರುಪಡಿಸುತ್ತಿರುವುದಾಗಿ ಹೇಳಿದ ವಂಚಕರು ನೀವು ತಪ್ಪಿತಸ್ಥನಲ್ಲ ಎಂಬುದಕ್ಕಾಗಿ ಮುಚ್ಚಳಿಕೆ ಬರೆಸಿಕೊಂಡು ಆರ್‌ಟಿಜಿಎಸ್ ಮೂಲಕ 10.99 ಲಕ್ಷ ರೂ. ಹಣವನ್ನು ವಂಚಕರು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.‌

ತದನಂತರದಲ್ಲಿ ನೀರಜ್‍ಕುಮಾರ್ ಹಾಗೂ ಸಂದೀಪ್‍ಕುಮಾರ್ ಪ್ರತಿನಿತ್ಯ ಗುಂಡಪ್ಪನವರನ್ನು ಮೊಬೈಲ್‍ನಲ್ಲಿ ಸಂಪರ್ಕಿಸಿ ತನಿಖೆಗೆ ಸಹಕರಿಸುವಂತೆ ಹಾಗೂ ತಮ್ಮ ಕುಟುಂಬದ ಬ್ಯಾಂಕ್ ಹಾಗೂ ಇತರೆ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ನಿಮ್ಮನ್ನು ಆನ್‍ಲೈನ್ ಮುಖಾಂತರ ಜಡ್ಜ್ ಮುಂದೆ ಹಾಜರುಪಡಿಸಿ ಇಡಿ, ಸಿಬಿಐಗಳಿಂದ ನಿಮ್ಮ ಪ್ರಾಪರ್ಟಿ ತನಿಖೆ ನಡೆಸಲು 20 ಲಕ್ಷ ರೂ. ಡೆಪಾಸಿಟ್ ಮಾಡಲು ತಿಳಿಸಿದ್ದು, ಆ ಹಣವನ್ನು ತನಿಖೆ ಮುಗಿದ ನಂತರ ಹಿಂದಿರುಗಿಸುವುದಾಗಿ ನಂಬಿಸಿದ್ದಾರೆ.

ಹೀಗೆ ಸತತವಾಗಿ ತಮ್ಮನ್ನು ಸಂಪರ್ಕಿಸುತ್ತಾ ಡಿಜಿಟಲ್ ಬಂಧನದಲ್ಲಿರಿಸಿ ಹಣದ ವ್ಯವಹಾರ ಮಾಡುತ್ತಿರುವುದರ ಬಗ್ಗೆ ಅನುಮಾನಗೊಂಡು ಗುಂಡಪ್ಪ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಜಾಲದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Tags:
error: Content is protected !!