ನವೀನ್ ಡಿಸೋಜ
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಾಫಿ ಮಂಡಳಿ ಅಧಿಕಾರಿಗಳು, ತಹಸಿಲ್ದಾರ್ ನೇತೃತ್ವದ ತಂಡ; ಶೀಘ್ರ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ಅತಿವೃಷ್ಟಿ, ಬರ, ಪ್ರಾಕೃತಿಕ ವಿಕೋಪ, ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಂದಾಗಿ ಹಾನಿಯಾಗಿರುವ ಬೆಳೆಗಳ ಸಮೀಕ್ಷೆ ನಡೆಸಿ, ಗ್ರಾಮವಾರು, ಹೋಬಳಿವಾರು ಎಷ್ಟು ಹಾನಿಯಾಗಿರುತ್ತದೆ ಎಂಬುದನ್ನು ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಹಾಗೂ ಸಂಬಂಧಪಟ್ಟ ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಸಲುವಾಗಿ ತಂಡ ರಚಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಮೇ ಅಂತ್ಯದಿಂದಲೇ ಮಳೆ-ಶೀತಗಾಳಿ ವಾತಾವರಣ ಕಂಡುಬಂದಿದೆ. ಇದು ಜಿಲ್ಲೆಯ ತೋಟಗಾರಿಕಾ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಿದ್ದು, ಮುಖ್ಯವಾಗಿ ಕಾಫಿ ಬೆಳೆಗಾರರಿಗೆ ನಷ್ಟದ ಭೀತಿ ಎದುರಾಗಿದೆ. ಇದಲ್ಲದೆ ಕಾಳು ಮೆಣಸು, ಅಡಕೆ, ಇನ್ನಿತರೆ ತೋಟಗಾರಿಕಾ ಬೆಳೆಗಳಿಗೆ ಸಮಸ್ಯೆ ಉಂಟಾಗಿದೆ. ಅತಿಯಾದ ಮಳೆ, ತೇವಾಂಶದ ಪರಿಣಾಮವಾಗಿ ಶಿಲೀಂಧ್ರಗಳು ನಾಶವಾಗಿ ಕೊಳೆರೋಗ ಕಂಡುಬಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಸೂರ್ಲಬ್ಬಿ, ಶಾಂತಳ್ಳಿ, ಬಿರುನಾಣಿ, ಗರ್ವಾಲೆ ಮತ್ತು ಮುಕ್ಕೋಡ್ಲು ಸೇರಿದಂತೆ ಪ್ರತಿ ವರ್ಷ ಹೆಚ್ಚು ಮಳೆ ದಾಖಲಾಗುವ ಪ್ರದೇಶಗಳಲ್ಲಿ ಶೇ.೧೫೬ರಷ್ಟು ಮಳೆಯಾಗಿದೆ. ಆದರೆ ಭಾಗಮಂಡಲ, ಕೆಲವು ಕಡೆ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿದೆ. ಈಗ ಹೆಚ್ಚು ಮಳೆಯಾಗಿರುವ ಪ್ರದೇಶಗಳಲ್ಲಿ ಕಾಫಿಗೆ ಕೊಳೆರೋಗ ಬಾಧಿಸಿದ್ದು, ಇಲ್ಲೆಲ್ಲ ಶೇ.೧೫ ಕಾಫಿ ಬೆಳೆ ಉದುರಿದೆ ಎಂದು ಕಾಫಿ ಮಂಡಳಿ ಅಂದಾಜಿಸಿದೆ.
ಬೆಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲು ತಂಡ ರಚಿಸಲಾಗಿದೆ. ಕೃಷಿ ಇಲಾಖೆ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು, ವಿರಾಜಪೇಟೆಯ ಕಾಫಿ ಮಂಡಳಿ ಉಪ ನಿರ್ದೇಶಕರು ಹಾಗೂ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ ಮತ್ತು ಪೊನ್ನಂಪೇಟೆ ಈ ತಾಲ್ಲೂಕುಗಳ ತಹಸಿಲ್ದಾರರು ತಂಡದಲ್ಲಿದ್ದಾರೆ.ಈ ತಂಡವು ಬೆಳೆಹಾನಿಯಾದ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜತೆ ಜಂಟಿ ಸ್ಥಳ ಪರಿಶೀಲನೆ ನಡೆಸಿ ಛಾಯಾಚಿತ್ರದೊಂದಿಗೆ ಬೆಳೆ ಹಾನಿಯ ಬಗ್ಗೆ ಖಚಿತ ವರದಿ ಸಲ್ಲಿಸಬೇಕಾಗಿದೆ. ತಾಲ್ಲೂಕುವಾರು ತಂಡಗಳನ್ನು ಇಲಾಖೆಗಳ ಸಹಯೋಗದೊಂದಿಗೆ ರಚಿಸಿಕೊಂಡು ವರದಿಯನ್ನು ಕ್ರೋಢೀಕರಿಸಿ ಅ.೬ರೊಳಗೆ ಸಂಬಂಧಿಸಿದ ತಹಸಿಲ್ದಾರರು ಕಚೇರಿಗೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.
ಇದರೊಂದಿಗೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು ಕಾಫಿ ಬೆಳೆ ಹಾನಿ ಸಮೀಕ್ಷೆಯೊಂದಿಗೆ ಕರಿಮೆಣಸು ಬೆಳೆ ಹಾನಿಯನ್ನೂ ಅಂದಾಜಿಸಿ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.
” ಕೊಡಗು ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿ, ಬರ, ಪ್ರಾಕೃತಿಕ ವಿಕೋಪ, ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಂದಾಗಿ ಹಾನಿಯಾಗಿರುವ ಬೆಳೆಗಳ ಸಮೀಕ್ಷೆ ನಡೆಸಲು ತಂಡ ರಚಿಸಲಾಗಿದೆ. ಗ್ರಾಮವಾರು, ಹೋಬಳಿವಾರು ಎಷ್ಟೆಷ್ಟು ಹಾನಿಯಾಗಿರುತ್ತದೆ ಎಂಬುದನ್ನು ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಅ.೬ರೊಳಗೆ ಸಮೀಕ್ಷೆ ವರದಿಯನ್ನು ಕ್ರೋಢೀಕರಿಸಿ ಸಲ್ಲಿಸಲು ಆದೇಶಿಸಲಾಗಿದೆ.”
-ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ





