Mysore
28
scattered clouds

Social Media

ಬುಧವಾರ, 14 ಜನವರಿ 2026
Light
Dark

ವೀರ ಯೋಧರ ಸ್ಮರಣೆ ನಮ್ಮ ಜವಾಬ್ದಾರಿ

ಅಜ್ಜಮಾಡ ಬಿ.ದೇವಯ್ಯ ಅವರ ೬೦ನೇ ಸ್ಮರಣೆ ಕಾರ್ಯಕ್ರಮದಲ್ಲಿ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ 

ಮಡಿಕೇರಿ: ೧೯೬೫ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವೀರ ಮರಣ ಹೊಂದಿದ ಮಹಾವೀರ ಚಕ್ರ (ಮರಣೋತ್ತರ) ಪುರಸ್ಕ ತ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರ ೬೦ನೇ ಸ್ಮರಣೆ ಕಾರ್ಯಕ್ರಮ ನಗರದಲ್ಲಿ ನಡೆಯಿತು.

ಕೊಡವ ಮಕ್ಕಡ ಕೂಟ, ಅಜ್ಜಮಾಡ ಒಕ್ಕ (ಕುಟುಂಬಸ್ಥರು) ಹಾಗೂ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಟ್ರಸ್ಟ್‌ನ ಸಹಯೋಗದಲ್ಲಿ ಅಜ್ಜಮಾಡ ಬಿ.ದೇವಯ್ಯ ವೃತ್ತದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ನಿವೃತ್ತ ಸೇನಾಧಿಕಾರಿಗಳು, ಯೋಧರು, ಜನಪ್ರತಿನಿಧಿಗಳು, ಕೊಡವ ಸಮಾಜದ ಪ್ರತಿನಿಧಿಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ವೀರ ಸೇನಾನಿಗೆ ಗೌರವ ಸಲ್ಲಿಸಿದರು.

ಅಜ್ಜಮಾಡ ಬಿ.ದೇವಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ, ದೇಶ ಹಾಗೂ ದೇಶದ ಪ್ರಜೆಗಳನ್ನು ರಕ್ಷಿಸುತ್ತಿರುವ ವೀರ ಯೋಧರನ್ನು ಸ್ಮರಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮನ್ನು ದೇವರು ರಕ್ಷಿಸುತ್ತಾರೆ ಎಂದು ನಾವು ಸದಾ ದೇವರನ್ನು ಸ್ಮರಿಸುತ್ತೇವೆ. ನಮ್ಮನ್ನು ಸುರಕ್ಷಿತವಾಗಿಟ್ಟಿರುವ ಸೈನಿಕರು ಕೂಡ ದೇವರಿಗೆ ಸಮಾನರಾಗಿದ್ದು, ನಮಗಾಗಿ ಜೀವ ಕೊಟ್ಟ ಹುತಾತ್ಮರ ಸ್ಮರಣೆ ನಮ್ಮ ಕರ್ತವ್ಯವಾಗಿದೆ ಎಂದರು. ವಿಧಾನಸಭೆ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿ, ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರುಗಳ ವಿಮಾನವನ್ನು ಹೊಡೆದುರುಳಿಸಿ ದೇಶಕ್ಕಾಗಿ ವೀರಮರಣವನ್ನಪ್ಪಿದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ದೇಶಪ್ರೇಮದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ತಮ್ಮ ಜೀವದ ಹಂಗನ್ನು ತೊರೆದು ಶತ್ರುಗಳೊಂದಿಗೆ ಹೋರಾಡಿ ದೇಶಪ್ರೇಮವನ್ನು ಮೆರೆದಿದ್ದಾರೆ ಎಂದು ಸ್ಮರಿಸಿದರು.

ನಿವೃತ್ತ ಸೇನಾಧಿಕಾರಿ ಬಾಳೆಯಡ ಮಂದಪ್ಪ ಮಾತನಾಡಿ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ತಮ್ಮ ಕುಟುಂಬದ ಬಗ್ಗೆ ಚಿಂತಿಸದೆ ದೇಶದ ರಕ್ಷಣೆಗಾಗಿ ಜೀವ ನೀಡಿದ್ದಾರೆ. ಮಹಾವೀರ ಚಕ್ರ ಪುರಸ್ಕೃತ ದೇವಯ್ಯ ಅವರ ತ್ಯಾಗ, ಬಲಿದಾನ ಅವಿಸ್ಮರಣೀಯವಾಗಿದ್ದು, ಇವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಫೋರಂನ ಪ್ರಮುಖರಾದ ಉಳ್ಳಿಯಡ ಪೂವಯ್ಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ನಿರ್ದೇಶಕಿ ತೆನ್ನಿರ ಟೀನಾ, ಸಲಹೆಗಾರರಾದ ಐಚಂಡ ರಶ್ಮಿ ಮೇದಪ್ಪ, ಅಜ್ಜಮಾಡ ಒಕ್ಕದ ಅಧ್ಯಕ್ಷ ಲವ ಕುಶಾಲಪ್ಪ, ಪ್ರಮುಖರಾದ ಅಜ್ಜಮಾಡ ಬೋಪಯ್ಯ, ಅಜ್ಜಮಾಡ ಚಂಗಪ್ಪ, ಅಜ್ಜಮಾಡ ಬೆಳ್ಯಪ್ಪ, ಅಜ್ಜಮಾಡ ರಮೇಶ್, ಅಜ್ಜಮಾಡ ಅಯ್ಯಣ್ಣ, ಅಜ್ಜಮಾಡ ಮಂಜುನಾಥ್, ಕೊಡವ ಮಕ್ಕಡ ಕೂಟದ ಸದಸ್ಯರು, ನಿವೃತ್ತ ಯೋಧರು, ಸೇನಾಭಿಮಾನಿಗಳು ಹಾಗೂ ಅಜ್ಜಮಾಡ ಕುಟುಂಬಸ್ಥರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು.

” ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ದೇಶದ ರಕ್ಷಣೆಗಾಗಿ ಹುತಾತ್ಮರಾಗುವ ಮೂಲಕ ಯುವ ಪೀಳಿಗೆಗೆ ಸ್ಛೂರ್ತಿಯಾಗಿದ್ದಾರೆ. ಇವರ ಆದರ್ಶವನ್ನು ಯುವ ಸಮೂಹ ಮೈಗೂಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ದೇಶಸೇವೆಗೆ ಮುಂದಾಗಬೇಕು.”

– ಕೊಡಂದೇರ ನಂದಾ ಕಾರ್ಯಪ್ಪ

Tags:
error: Content is protected !!