ಬೆಂಗಳೂರು : ಧರ್ಮಸ್ಥಳದಲ್ಲಿ ಶವ ಹೂತಿದ್ದಾಗಿ ಹೇಳಿದ್ದ ದೂರುದಾರ ಚಿನ್ನಯ್ಯನನ್ನು ಮತ್ತೆ 3 ದಿನ ವಿಶೇಷ ತನಿಖಾ ತಂಡದ ಕಸ್ಟಡಿಗೆ ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.
ಸೆ.6ರಂದು ಚಿನ್ನಯ್ಯನನ್ನು ಮತ್ತೆ ಹಾಜರುಪಡಿಸಲು ಕೋರ್ಟ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಳ್ತಂಗಡಿಯ ನ್ಯಾಯಾಲಯ ದೂರುದಾರ ಚಿನ್ನಯ್ಯನನ್ನು ಹತ್ತು ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿತ್ತು. ಬುಧವಾರ(ಸೆ.3) ಎಸ್ಐಟಿ ಕಸ್ಟಡಿ ಮುಕ್ತಾಯ ಹಿನ್ನಲೆ ಚಿನ್ನಯ್ಯನನ್ನು ಎಸ್ಐಟಿ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು.
ಇದನ್ನು ಓದಿ:ಧರ್ಮಸ್ಥಳ ಪ್ರಕರಣಕ್ಕೆ ಇಡಿ ಎಂಟ್ರಿ: ಕೆಲವರಿಗೆ ತನಿಖೆಯ ಬಿಸಿ ಎದುರಾಗುವ ಸಾಧ್ಯತೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ಕೋರ್ಟ್ ಹಾಲ್ನ ಬಾಗಿಲು ಮುಚ್ಚಿ ವಿಚಾರಣೆ ಮಾಡಲಾಗಿದೆ. ಸರ್ಕಾರಿ ಅಭಿಯೋಜಕರಿಂದ ಸಾಕ್ಷಿ ಸಂಗ್ರಹಣೆ, ಬಾಕಿ ವಿಚಾರಣೆ ಇತ್ಯಾದಿ ವಿವರಗಳ ತನಿಖೆಯ ಪ್ರಗತಿ ವರದಿ ಸಲ್ಲಿಕೆ ಮಾಡಿದರು.
ಎಸ್ಐಟಿಯಿಂದಲೂ ಕೋರ್ಟ್‌ಗೆ ತನಿಖಾ ಪ್ರಗತಿ ವರದಿ ಸಲ್ಲಿಕೆ ಮಾಡಲಾಯಿತು. ಕಾನೂನು ಸೇವಾ ಪ್ರಾಧಿಕಾರದ ವಕೀಲರಿಂದ ಚಿನ್ನಯ್ಯ ಪರ ವಾದ ಮಂಡಿಸಿದರು. ಈ ವೇಳೆ ಎಸ್ಐಟಿ ತನಿಖಾಧಿಕಾರಿ, ಸರ್ಕಾರಿ ಅಭಿಯೋಜಕ, ಚಿನ್ನಯ್ಯ ಮತ್ತು ಕಾನೂನು ಸೇವಾ ಪ್ರಾಧಿಕಾರದ ಇಬ್ಬರು ವಕೀಲರು ಉಪಸ್ಥಿತರಿದ್ದರು.





