ನಾಗಮಂಗಲ : ತಾಲ್ಲೂಕಿನಲ್ಲಿ ಸೆಪ್ಟೆಂಬರ್ 4 ರಂದು ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ಅಧಿಕಾರಿಗಳಿಗೆ ತಿಳಿಸಿದರು. ಅವರು ಇಂದು ಪಾಂಡವಪುರ ಡಿ.ಒ.ಎಸ್.ಪಿ ಕಚೇರಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿರುವ ಆಯೋಜಕರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಸೆಪ್ಟೆಂಬರ್ 4 ರಂದು ಸುಮಾರು 11 ಗಣಪತಿಗಳ ವಿಸರ್ಜನೆಗೆ ಸಿದ್ಧತೆಯಾಗಿದ್ದು, ಮೆರವಣಿಗೆ ಸಾಗುವ ಸ್ಥಳಗಳಲ್ಲಿ ಸೂಕ್ತ ಬಂದೋಬಸ್ತ್ ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆಯೋಜಕರು ಕೂಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸಿ. ಈಗಾಗಲೇ ಬಂದೋಬಸ್ತ್ ಕೆಲಸಕ್ಕೆ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಇದನ್ನು ಓದಿ: ಮೈಸೂರು | ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿತ : ವ್ಯಕ್ತಿ ಕಣ್ಣಿಗೆ ಗಾಯ
ಸಾರ್ವಜನಿಕರು ಅವರೊಂದಿಗೆ ಸಹಕರಿಸಬೇಕು ಎಂದರು. ಈ ಬಾರಿ ಪೊಲೀಸ್ ಇಲಾಖೆಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದ್ದು, ಸಮಾಜದ ಶಾಂತಿ , ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಕೋಮು ಗಲಭೆ ಉಂಟುಮಾಡುವ ರೀತಿ ಯಾವುದಾದರೂ ಪ್ರಯತ್ನ ನಡೆದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗಣಪತಿ ಹಬ್ಬವು ಸಮಾಜಕ್ಕೆ ಒಳಿತಾಗಲಿ ಎಂದು ಆಚರಿಸುವ ಹಬ್ಬ. ಸಮಾಜದ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರು ತಮ್ಮ ಸುತ್ತಮುತ್ತಲು ಯಾವುದೇ ಅಹಿತಕರ ಘಟನೆಯಾಗದಂತೆ ಎಚ್ಚರಿಕೆ ವಹಿಸಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿ.ಒ.ಎಸ್.ಪಿ ಡಿ ಚಲುವರಾಜು, ತಹಶೀಲ್ದಾರ್ ಆದರ್ಶ, ಸಿ.ಪಿ.ಐ ನಿರಂಜನ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.





