Mysore
25
clear sky

Social Media

ಬುಧವಾರ, 21 ಜನವರಿ 2026
Light
Dark

ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದ ಕೈಲ್ ಮುಹೂರ್ತ ಆಚರಣೆ

kail murth

ಮಡಿಕೇರಿ : ಕೈಲ್ ಮುಹೂರ್ತ(ಕೈಲ್‌ಪೋಳ್ದ್) ಹಬ್ಬವನ್ನು ಕೊಡಗು ಜಿಲ್ಲೆಯಾದ್ಯಂತ ಬುಧವಾರ ಸಾಂಪ್ರದಾಯಿಕವಾಗಿ, ಸಂಭ್ರಮದಿಂದ ಆಚರಿಸಲಾಯಿತು.

ಕೊಡವ ಭಾಷೆಯಲ್ಲಿ ಕೈಲ್ ಎಂದರೆ ಆಯುಧ. ಪೋಳ್ದ್ ಎಂದರೆ ಹಬ್ಬ ಎಂದು ಅರ್ಥವಿದೆ. ಹಾಗಾಗಿ ಈ ಹಬ್ಬ ಕೊಡವರ ಆಯುಧ ಪೂಜೆಯೆಂದೇ ಪರಿಗಣಿಸಲ್ಪಡುತ್ತದೆ. ಕೊಡವ ಕ್ಯಾಲೆಂಡರ್ ಪ್ರಕಾರ ಕೊಡವ ತಿಂಗಳ ಚಿನ್ಯಾರ್‌ನ ೧೮ನೇ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದರೆ ಪ್ರತಿವರ್ಷ ಸೆ.೩ ರಂದು ಕೊಡಗಿನಾದ್ಯಂತ ಕೈಲ್ ಪೋಳ್ದ್ ಆಚರಣೆಯ ಸಂಭ್ರಮ ಮನೆ ಮಾಡಿರುತ್ತದೆ. ಜಿಲ್ಲೆಯ ಗಾಳಿಬೀಡು, ನಾಲ್ಕುನಾಡು ವ್ಯಾಪ್ತಿಯಲ್ಲಿ ಬೇರೆಬೇರೆ ದಿನದಂದು ಹಬ್ಬ ಆಚರಿಸಲಾಗುತ್ತದೆ.

ಮುಂಜಾನೆ ಮನೆಯ ಯಜಮಾನ ತೋಟದಿಂದ ಕುತ್ತರ್ಚಿ ಎಂಬ ಮರದ ಸಣ್ಣ ಪುಟ್ಟ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಅಲಂಕರಿಸಿ ಹಾಲು ಮರಕ್ಕೆ ಸಿಕ್ಕಿಸುವ ಪದ್ಧತಿ ಇದೆ. ನಂತರ ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಲಾದ ನೇಗಿಲು, ನೋಗ, ಹಾಗೂ ನೇಗಿಲಿಗೆ ನೊಗ ಕೊಟ್ಟ ದನವನ್ನು ಸ್ವಚ್ಛಗೊಳಿಸಿ, ಶೃಂಗರಿಸಲಾಗುತ್ತದೆ. ನಂತರ ಕೃಷಿಗೆ ಬಳಸಿಕೊಳ್ಳಲಾದ ಎಲ್ಲ ವಸ್ತುವನ್ನು ಚೆನ್ನಾಗಿ ಶುದ್ಧವಾಗಿ ತೊಳೆದು ನೆಲ್ಲಿಕ್ಕಿಯಲ್ಲಿಟ್ಟು(ದೇವರಮನೆ) ಪೂಜಿಸಲಾಗುತ್ತದೆ. ಇದು ಕೊಡಗಿನವರಿಗೆ ಕೃಷಿಯೊಂದಿಗೆ ಇರುವ ಸಂಬಂಧವನ್ನು ಸೂಚಿಸುತ್ತದೆ.

ಕೈಲ್ ಮೂಹೂರ್ತದಲ್ಲಿ ಕೊಡಗಿನ ಕೊಡವರಿಗೆ ಕೋವಿಯ ಪೂಜೆ ಅತ್ಯಂತ ಪ್ರಮುಖ್ಯತೆಯ ವಿಷಯ. ಕೊಡಗಿನಲ್ಲಿ ಕೊಡವ ಜನಾಂಗದವರು ಹಿಂದೆ ಭೇಟೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ, ಕೃಷಿ ಚಟುಚಟಿಕೆ ಆರಂಭವಾಗುತ್ತಿದ್ದಂತೆಯೇ ಕೋವಿಯನ್ನು ನೆಲ್ಲಕ್ಕಿಯಲ್ಲಿಡಲಾಗುತ್ತಿತ್ತು. ಈ ಸಂದರ್ಭ ರೈತರು ಸಾಕಷ್ಟು ಕಷ್ಟ ಪಟ್ಟು ತಮ್ಮ ಹೊಲದಲ್ಲಿ ದುಡಿಯುತ್ತಿದ್ದರು. ಭೇಟೆಗೆ ತೆರಳಲು ಸಮಯವಿರುತ್ತಿರಲಿಲ್ಲ. ಕೃಷಿ ಚಟುವಟಿಕೆಯ ನಂತರ ಬಿಡುವು ದೊರೆತ ವೇಳೆ ಭೇಟೆಗೆ ತೆರಳುತ್ತಿದ್ದರು.

ದೇವರಮನೆಯಲ್ಲಿ ಬಂದೂಕನ್ನ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಈ ಸಂದರ್ಭ ಕೋವಿಗೆ ವಿಶೇಷವಾಗಿ ಅಲಂಕರಿಸಲು ಕಾಡಿನಿಂದ ಗೌರಿ ಹೂವನ್ನು ತರಲಾಗುತ್ತದೆ. ಆ.೧೫ ರಿಂದ ಸೆ.೧೫ ರ ದಿನಾಂಕದ ಒಳಗೆ ಮಾತ್ರ ನಮಗೆ ಈ ಹೂ ಕಾಣ ಸಿಗುತ್ತದೆ.

ದೇವರ ಮನೆಯಲ್ಲಿ ಕುಟುಂಬದ ಹಿರಿಯರು, ಕಿರಿಯರು ಎಲ್ಲ ಸೇರಿ ಪೂಜೆ ಸಲ್ಲಿಸಿದ ನಂತರ ಮನೆಯ ಅಂಗಳ ಅಥವಾ ಮೈದಾನದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಪದ್ಧತಿ ಇದೆ. ಬಹಳ ಹಿಂದೆ ಕೋವಿಗೆ ಪೂಜೆ ಸಲ್ಲಿಸಿದ ನಂತರ ಕುಟುಂಬದ ಹಿರಿಯರೆಲ್ಲ ಸೇರಿ ಭೇಟೆಗೆ ತೆರಳುತ್ತಿದ್ದರು. ಆದರೆ, ಇಂದು ಭೇಟೆ ನಿಷೇಧವಿರುದರಿಂದ ತೆಂಗನಕಾಯಿಗೆ ಗುಂಡು ಹೊಡೆಯುವ ಪದ್ಧತಿ ರೂಡಿಕ್ಷಿಯಲ್ಲಿದೆ.

ಕೈಲ್ ಪೋಳ್ದ್‌ನಲ್ಲಿ ಕೊಡವರಿಗೆ ಪಂದಿಕರಿ(ಹಂದಿಮಾಂಸ) ಕಡಂಬುಟ್ಟ್(ಕಡಂಬಿಟ್ಟು) ವಿಷೇಷವಾದ ಆಹಾರ. ಹಿಂದೆ ಭೇಟೆ ಮಾಡಿದ ಹಂದಿಯನ್ನು ಆಹಾರವಾಗಿ ಸೇವಿಸಲಾಗುತ್ತಿತ್ತು. ಆದರೆ, ಇಂದು ಊರಿನಲ್ಲಿ ಸಾಕಿದ ಹಂದಿಯ ಮಾಂಸವನ್ನೇ ಸೇವಿಸಲಾಗುತ್ತದೆ. ಕೊಡಗಿನಲ್ಲಿ ಮದ್ಯಸೇವಿಸುವ ಪದ್ಧತಿ ಹಿಂದಿನಿಂದಲೂ ಇದ್ದು, ಈ ಹಬ್ಬದಲ್ಲೂ ಇದು ಕಂಡು ಬರುತ್ತದೆ.

ಕೈಲ್ ಮುಹೂರ್ತ ಹಬ್ಬದ ನಂತರ ಕತ್ತಿ, ಕೋವಿಗಳು ಬಳಕೆಯಾದರೆ ಅಲ್ಲಿಯವರೆಗೆ ವ್ಯವಸಾಯದಲ್ಲಿ ಬಳಕೆಯಾದ ನೇಗಿಲು, ನೊಗ ಇತ್ಯಾದಿ ಉಪಕರಣಗಳಿಗೆ ವಿರಾಮ ದೊರೆಯುತ್ತದೆ. ಈ ಎಲ್ಲಾ ಉಪಕರಣ ತೊಳೆದು ಪೂಜೆ ಸಲ್ಲಿಸಲಾಯಿತು. ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಕುಂಕುಮ, ಗಂಧ ಹಚ್ಚಿ ಅಲಂಕರಿಸಲಾಗಿತ್ತು. ಕೈಲು ಮುಹೂರ್ತ ಹಬ್ಬದ ವಿಶೇಷವಾಗಿರುವ ಕಡಂಬಿಟ್ಟು ಹಾಗೂ ಹಂದಿ ಮಾಂಸದ ಊಟ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇವಿಸಿದರು. ವಿಶೇಷ ಖಾದ್ಯದ ಊಟದ ಬಳಿಕ ಎಲ್ಲರೂ ಊರ್ ಮಂದ್‌ನಲ್ಲಿ ಸೇರಿ ಅಲ್ಲಿ ಕೋವಿಯ ಮೂಲಕ ತೆಂಗಿನ ಕಾಯಿಗೆ ಗುಂಡು ಹಾರಿಸಿ ಹಬ್ಬ ಆಚರಿಸಲಾಯಿತು.

Tags:
error: Content is protected !!