Mysore
24
overcast clouds

Social Media

ಬುಧವಾರ, 27 ಮೇ 2026
Light
Dark

ನಾಲೆಯ ಪಥ ಬದಲು ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ

ನಂಜನಗೂಡು: ಸರ್ಕಾರದ ಅಧಿಕಾರಿಗಳು ಖಾಸಗಿ ಬಡಾವಣೆಯವರ ಆಮಿಷಕ್ಕೆ ಒಳಗಾಗಿ ಜಮೀನಿನ ಹಿತ ಮರೆತು ನಾಲೆಯ ಪಥವನ್ನೇ ಬದಲಾಯಿಸಲು ಹೊರಟಿರುವ ಸುದ್ದಿ ಸೋಮವಾರ ‘ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ಗಮನಿಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ದೇಬೂರು ಬಳಿಯ ಆ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ನಾಲೆಯ ಪಥದ ಬದಲಾವಣೆ ಕುರಿತಂತೆ ಪರಿಶೀಲನೆಗೆ ಆಗಮಿಸಿದ ಕಾವೇರಿ ನೀರಾವರಿ ನಿಗಮದ ಕಬಿನಿ ನಾಲೆ ವಿಭಾಗದ ಅಧಿಕಾರಿ (ಇಇ) ಮಧುಸೂದನ ಅವರಿಗೆ ಗ್ರಾಮಸ್ಥರು ಈ ಕುರಿತು ಸಮಗ್ರ ಮಾಹಿತಿ ನೀಡಿ, ಈ ಜಮೀನಿನಲ್ಲಿ ನಾಲೆ ನಿರ್ಮಿಸಲು ಸರ್ಕಾರ ೧೯೭೩ರಲ್ಲೇ ೫ ಗುಂಟೆ ಜಮೀನು ವಶಪಡಿಸಿಕೊಂಡು ಜಮೀನಿನ ಮಾಲೀಕರಿಗೆ ಪರಿಹಾರವನ್ನೂ ನೀಡಿತ್ತು ಎಂಬ ಅಂಶವನ್ನು ಗಮನಕ್ಕೆ ತಂದರು. ಪರಿಹಾರ ನೀಡಿದ ಮೇಲೆ ಜಾಗ ಸರ್ಕಾರದ್ದಲ್ಲವೇ? ಪರಿಹಾರ ಪಡೆದುಕೊಂಡ ಮಾಲೀಕರಿಗೆ ಆ ಜಾಗದ ಹಕ್ಕು ಎಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರು ಹರಿಯುವ ಹಳ್ಳದ ಪಥ ಬದಲಾವಣೆ ಮಾಡಲಾಗುತ್ತಿದೆಯೇ ಹೊರತು ನಾಲೆಯನ್ನು ಅಲ್ಲ ಎಂದು ನೂತನ ಬಡಾವಣೆಯ ಮಾಲೀಕರು ಅಧಿಕಾರಿಗಳ ಮುಂದೆ ಪ್ರತಿಪಾದಿಸಿದಾಗ, ತಕ್ಷಣ ಕಾಮಗಾರಿ ನಿಲ್ಲಿಸಿ, ಸೂಕ್ತವಾದ ದಾಖಲೆ ತನ್ನಿ ಎಂದು ಮಧುಸೂದನ ಸೂಚಿಸಿದರು. ಅಲ್ಲದೆ, ಈ ಜಾಗದ ಕುರಿತಂತೆ ದಾಖಲೆಗಳಿಗಾಗಿ ಕಂದಾಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಕೆಲವು ತಿಂಗಳ ಹಿಂದೆ ಕಬಿನಿ ನಾಲಾ ವ್ಯಾಪ್ತಿಯ ೬ ಕೋಟಿ ರೂ. ಮೊತ್ತದ ನಾಲೆಯ ಮಣ್ಣು ರೆಸಾರ್ಟ್‌ಗೆ ಅಕ್ರಮವಾಗಿ ಸಾಗಾಣಿಕೆಯಾದ ಪ್ರಕರಣ ಏನಾಯಿತು? ಎಂದು ಮಧುಸೂದನ್ ಅವರನ್ನು ಪ್ರಶ್ನಿಸಿದಾಗ, ಆಗ ನಾನಿರಲಿಲ್ಲ, ನಾನು ಹೊಸದಾಗಿ ಬಂದಿದ್ದು, ನಾಳೆಯೇ ಆ ಕುರಿತು ಪರಿಶೀಲಿಸುತ್ತೇನೆ ಎಂದು ತಿಳಿಸಿದರು.

Tags:
error: Content is protected !!