Mysore
18
few clouds

Social Media

ಶನಿವಾರ, 24 ಜನವರಿ 2026
Light
Dark

ಅಭಿಮಾನ್‍ ಸ್ಟುಡಿಯೋ ಜಾಗವನ್ನು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲು ಡಿಸಿಗೆ ಪತ್ರ

ನಟ ಬಾಲಕೃಷ್ಣ ಅವರಿಗೆ ಅಭಿಮಾನ್‍ ಸ್ಟುಡಿಯೋ ಕಟ್ಟುವುದಕ್ಕೆ ನೀಡಿದ್ದ ಜಾಗವನ್ನು ಹಿಂಪಡೆಯಲು ಸರ್ಕಾರ ತೀರ್ಮಾನಿಸಿದೆ. ಆ ಜಾಗವನ್ನು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲು ಮುಂದಾಗಿದೆ.

ಈ ಸಂಬಂಧ ಇತ್ತೀಚೆಗೆ ಅರಣ್ಯ ಇಲಾಖೆಯ ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಜಗದೀಶ್‍ ಅವರಿಗೆ ಪತ್ರ ಬರೆದು, ಆ ಜಾಗವನ್ನು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲು ಮನವಿ ಸಲ್ಲಿಸಿದ್ದಾರೆ.

70ರ ದಶಕದಲ್ಲಿ ಸ್ಟುಡಿಯೋ ಕಟ್ಟುವುದಕ್ಕಾಗಿ ಸರ್ಕಾರವು ಹಿರಿಯ ನಟ ಟಿ.ಎನ್.ಬಾಲಕೃಷ್ಣ ಅವರಿಗೆ ಗುತ್ತಿಗೆ ಆಧಾರದ ಮೇಲೆ 20 ಎಕರೆ ಜಾಗ ನೀಡಿತ್ತು. ಸರ್ಕಾರದಿಂದ ಜಾಗ ಪಡೆದ ಬಾಲಣ್ಣ, ಅಲ್ಲಿ ಅಭಿಮಾನ್‍ ಸ್ಟುಡಿಯೋ ಕಟ್ಟಿದರು. ಅವರ ನಿಧನದ ನಂತರ, 2003ರಲ್ಲಿ 20 ಎಕರೆ ಪೈಕಿ, 10 ಎಕರೆಯನ್ನು ಅವರ ಮಕ್ಕಳು ಮಾರಿಕೊಂಡಿದ್ದರು. ಉಳಿದ 10 ಎಕರೆ ಜಾಗವನ್ನೂ ಮಾರಲು ಅಗ್ರಿಮೆಂಟ್‍ ‍ಆಗಿದ್ದು, ಅದರಲ್ಲಿದ್ದ ವಿಷ್ಣುವರ್ಧನ್ ‍ಅವರ ಪುಣ್ಯಭೂಮಿಯನ್ನೂ ಇತ್ತೀಚೆಗೆ ನೆಲೆಸಮಗೊಳಿಸಲಾಗಿತ್ತು.

ಸರ್ಕಾರಿ ಜಾಗವನ್ನು ಮಾರಿಕೊಳ್ಳುವುದರ ಜೊತೆಗೆ, ಕಾನೂನನ್ನು ಉಲ್ಲಂಘಿಸಿದ್ದರಿಂದ, ತಪ್ಪು ಮಾಡಿದವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ವಿಷ್ಣುವರ್ಧನ್‍ ಅಭಿಮಾನಿಗಳು ಸೇರಿ ಹಲವರು ಹೋರಾಟ ನಡೆಸಿದ್ದರು.

ಈ ಹೋರಾಟಕ್ಕೀಗ ಫಲ ಸಿಕ್ಕಿದ್ದು, ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ ಸ್ಟುಡಿಯೋ ಸ್ಥಾಪಿಸುವ ಕುರಿತು ಮಂಜೂರಾದ ಆದೇಶವನ್ನು ರದ್ದುಪಡಿಸುವುದರ ಜೊತೆಗೆ, ಅರಣ್ಯ ಇಲಾಖೆಯ ಹೆಸರಿಗೆ ಇಂಡೀಕರಣ ಮಾಡಬೇಕೆಂದು ಅರಣ್ಯ ಇಲಾಖೆಯ ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಜಗದೀಶ್‍ ಅವರಿಗೆ ಪತ್ರ ಬರೆದಿದ್ದಾರೆ.

ಅಭಿಮಾನ್ ಸ್ಟುಡಿಯೋವನ್ನು ಸರ್ಕಾರವು ಅರಣ್ಯ ಪ್ರದೇಶವೆಂದು ಘೋಷಿಸಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಹೊಸದೇನೂ ಅಲ್ಲ. ಈ ಹಿಂದೆಯೂ ನಡೆದಿತ್ತು. ಆದರೆ ಸರ್ಕಾರದ ವತಿಯಿಂದ ಸರಿಯಾದ ರೀತಿಯಲ್ಲಿ ವಾದ ಮಂಡನೆ ಆಗದ ಕಾರಣದಿಂದ ಅಭಿಮಾನ್ ಸ್ಟುಡಿಯೋದ ಮಾಲೀಕರು ಆ ಪ್ರಕ್ರಿಯೆ ವಿರುದ್ಧ ತಡೆಯಾಜ್ಞೆ ತಂದು ಅದನ್ನು ಖಾಸಗಿ ಸ್ವತ್ತು ಎಂದು ಬಿಂಬಿಸಿ ಅವ್ಯವಹಾರ ನಡೆಸಲಾಗುತ್ತಿತ್ತು. ಈ ಬಾರಿಯೂ ಅದೇ ಮರುಕಳಿಸಬಾರದೆಂದು ಡಾ. ವಿಷ್ಣುಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಮತ್ತು ಪದಾಧಿಕಾರಿಗಳು, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು, ಅಭಿಮಾನ್ ಸ್ಟುಡಿಯೋವನ್ನು ಸರ್ಕಾರ ಅಧೀನಕ್ಕೆ ತೆಗೆದುಕೊಂಡು, ಅಲ್ಲಿ ಒಂದು ಜೈವಿಕ ಶ್ವಾಸಕೋಶ ಉದ್ಯಾನವನವನ್ನು ನಿರ್ಮಿಸುವುದಾಗಿಯೂ ಮತ್ತು ವಿಷ್ಣುವರ್ಧನ್ ಅವರ ಸಮಾಧಿಗೆ ಸ್ಥಳವನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಆಶ್ವಾಸನೆ ನೀಡಿದ್ದಾರೆ.

Tags:
error: Content is protected !!