ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಡೇಟಿಂಗ್‌ಗೆ ಹುಡುಗಿಯರು ಬೇಕಿದ್ದರೆ ಸಂಪರ್ಕಿಸುವಂತೆ ಪೋಸ್ಟ್ ಹಾಕಿ ಹಣಕ್ಕಾಗಿ ಪೀಡಿಸುತ್ತಿದ್ದ ಆರೋಪಿಯನ್ನು ಕೊಡಗು ಪೊಲೀಸರು ಬಂಧಿಸಿದ್ದು, ಬ್ಯಾಂಕ್ ಖಾತೆಯಲ್ಲಿದ್ದ ೮೦,೦೦೦ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಬೆಳಗಲಿ ಗ್ರಾಮದ ನಿವಾಸಿ ನಾಗಪ್ಪ ಹನುಮಂತ ಲಮಾಣಿ(೨೬) ಬಂಧಿತ ಆರೋಪಿ.
ನಾಗಪ್ಪ ಹನುಮಂತ ಲಮಾಣಿ ಇನ್‌ಸ್ಟಾಗ್ರಾಂನ ‘ಕೋಟ್ಯಾ ೨೦೨೬’ ಎಂಬ ಖಾತೆ ಸೃಷ್ಟಿಸಿ ಅದರಲ್ಲಿ ಮಡಿಕೇರಿ ಬಸ್ ನಿಲ್ದಾಣದ ಸುತ್ತಮುತ್ತಲಿನ ವೀಡಿಯೋ ಹಾಕಿ ಹುಡುಗಿಯರು ಬೇಕಿದ್ದರೆ ಸಂಪರ್ಕಿಸುವಂತೆ ತನ್ನ ನಂಬರ್ ನೀಡಿದ್ದ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪ್ರಕರಣ ಸಂಬಂಧ ಎಸ್‌ಪಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕೊಡಗು ಜಿಲ್ಲಾ ಪೊಲೀಸರಿಗೆ ಈ ಮಾಹಿತಿ ದೊರೆಯುತ್ತಿದ್ದಂತೆ ಸುಮೊಟೋ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು ಎಂದರು.
ಈ ಸಂಬಂಧ ವಿಶೇಷ ತಂಡ ರಚಿಸಿ ಬಾಗಲಕೋಟೆಗೆ ಕಳುಹಿಸಲಾಗಿತ್ತು. ಬಾಗಲಕೋಟೆ ಎಸ್‌ಪಿ ಸಹಕಾರದೊಂದಿಗೆ ಆರೋಪಿ ನಾಗಪ್ಪ ಹನುಮಂತ ಲಮಾಣಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಬಂಧಿತ ಆರೋಪಿ ಇದೇ ವಿಚಾರದಲ್ಲಿ ಹಿಂದೆ ಮೋಸ ಹೋಗಿ ಹಣ ಕಳೆದುಕೊಂಡಿದ್ದ. ಪುಣೆಯಲ್ಲಿ ಹುಡುಗಿಯರು ಸಿಗುತ್ತಾರೆಂದು ನಂಬಿ ೪,೦೦೦ ರೂ. ಹಾಕಿ ಮೋಸ ಹೋಗಿದ್ದ. ಬಳಿಕ ಇದನ್ನೇ ಕಸುಬಾಗಿ ಮಾಡಿಕೊಂಡ ಈತ ಅದೇ ರೀತಿ ಪೋಸ್ಟ್ ಹಾಕಿ ಹಣ ಮಾಡಲು ಮುಂದಾಗಿದ್ದ. ಕೊಡಗು ಮಾತ್ರವಲ್ಲದೆ ಮೈಸೂರು, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಇತರ ಜಿಲ್ಲೆಗಳ ಹೆಸರನ್ನೂ ಹಾಕಿ ಇದೇ ರೀತಿ ಹುಡುಗಿಯರು ಬೇಕಿದ್ದರೆ ಸಂಪರ್ಕಿಸುವಂತೆ ನಂಬರ್ ನೀಡಿ ಹಣ ಪಡೆದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬಂಧಿತನಿಂದ ೨ ಮೊಬೈಲ್ ಫೋನ್, ೫ ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಬ್ಯಾಂಕ್ ಖಾತೆಯಲಿದ್ದ ೮೦,೦೦೦ ರೂ. ಸೀಜ್ ಮಾಡಲಾಗಿದೆ. ಈ ತಿಂಗಳಲ್ಲೇ ೩೦ರಿಂದ ೪೦ ಸಾವಿರ ರೂ. ಸಂಗ್ರಹಿಸಿರುವುದು ಕಂಡುಬಂದಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.
ಸಾರ್ವಜನಿಕರು ಎಚ್ಚರ ವಹಿಸಿ
ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಸಂದೇಶ, ಭಾವಚಿತ್ರ, ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಸತ್ಯ-ಅಸತ್ಯತೆಯನ್ನು ಪರಿಶೀಲಿಸಿಕೊಳ್ಳಬೇಕು. ಯಾವುದೇ ರೀತಿ ಅಕ್ರಮ ಚಟುವಟಿಕೆಗಳ ಕುರಿತು ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸಹಾಯವಾಣಿ ೧೧೨ ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಅಥವಾ ಕೆಎಸ್‌ಪಿ ತಂತ್ರಾಂಶದ ಮೂಲಕ ಮಾಹಿತಿ ನೀಡಿ ಸಹಕರಿಸಿ ಎಂದು ಎಸ್‌ಪಿ ಮನವಿ ಮಾಡಿದ್ದಾರೆ.
ಮಡಿಕೇರಿ ಉಪವಿಭಾಗ ಡಿವೈಎಸ್‌ಪಿ ಸೂರಜ್, ಮಡಿಕೇರಿ ನಗರ ವೃತ್ತ ಸಿಪಿಐ ರಾಜು, ಮಡಿಕೇರಿ ನಗರ ಪೊಲೀಸ್ ಠಾಣೆ ಪಿಎಸ್‌ಐ ಅನ್ನಪೂರ್ಣ, ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧಿಕ್ಷಕ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಬಿ.ಪಿ ದಿನೇಶ್ ಕುಮಾರ್ ಶ್ಲಾಘಿಸಿದ್ದಾರೆ.





