Mysore
24
scattered clouds

Social Media

ಸೋಮವಾರ, 12 ಜನವರಿ 2026
Light
Dark

ಧರ್ಮಸ್ಥಳ ಪ್ರಕರಣ | ಸುಜಾತ ಭಟ್‌ ವಿಚಾರಣೆಗೆ ಎಸ್‌ಐಟಿ ಸಿದ್ಧತೆ

sujatha bhatf

ಬೆಂಗಳೂರು : ಅನನ್ಯ ಭಟ್ ನಾಪತ್ತೆ ಕುರಿತಂತೆ ದಿನಕ್ಕೊಂದು ಗೊಂದಲದ ಹೇಳಿಕೆ ನೀಡಿ ದಾರಿ ತಪ್ಪಿಸುತ್ತಿರುವ ಸುಜಾತ ಭಟ್ ಅವರನ್ನು ಅವರ ಮನೆಯಲ್ಲೇ ಶೀಘ್ರದಲ್ಲೇ ವಿಚಾರಣೆ ನಡೆಸಲು ಎಸ್‍ಐಟಿ ವಿಶೇಷ ತಂಡ ನಿರ್ಧರಿಸಿದೆ.

ಸುಜಾತ ಭಟ್ ನೆಲೆಸಿರುವ ಬನಶಂಕರಿಯಲ್ಲಿರುವ ಅವರ ನಿವಾಸಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಇಲ್ಲವೆ ಒಂದೇರಡು ದಿನಗಳಲ್ಲಿ ಅವರನ್ನು ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಶೇಷ ತಂಡದ ಮೂಲಗಳು ತಿಳಿಸಿವೆ.

ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಮಾಸ್ಕ್‌ ಮ್ಯಾನ್ ತೋರಿಸಿದ 17 ಪ್ರದೇಶಗಳಲ್ಲಿ ಎಸ್‍ಐಟಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಸುಜಾತ ಭಟ್ ಅವರು ನನ್ನ ಮಗಳು ಅನನ್ಯ ಭಟ್ ಅವರನ್ನು ಧರ್ಮಸ್ಥಳದಲ್ಲಿ ಕೊಲೆ ಮಾಡಿ ಹೂತು ಹಾಕಲಾಗಿದೆ ಎಂದ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದರು.

ಮಾತ್ರವಲ್ಲ, ಎಸ್‍ಐಟಿ ಪೊಲೀಸರಿಗೆ ನನ್ನ ಮಗಳ ಅಸ್ಥಿಪಂಜರ ಹುಡುಕಿಕೊಟ್ಟರೆ ಹಿಂದೂ ಸಂಪ್ರದಾಯದಂತೆ ಸಂಸ್ಕಾರ ನಡೆಸಬೇಕು ಹೀಗಾಗಿ ಅಸ್ಥಿಪಂಜರ ಹುಡುಕಿಕೊಡಿ ಎಂದು ದೂರು ನೀಡಿದ್ದರು. ಅವರ ಈ ಹೇಳಿಕೆಯಿಂದ ಧರ್ಮಸ್ಥಳದ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ ಎನ್ನುವ ಹೊತ್ತಿಗೆ ಸುಜಾತಾ ಅವರಿಗೆ ಯಾವುದೇ ಮಕ್ಕಳಿರಲಿಲ್ಲ ಎಂಬ ಅಂಶ ಬಹಿರಂಗಗೊಂಡಿತ್ತು.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸುಜಾತ ಭಟ್ ಅವರು ಮಣಿಪಾಲ್‍ನಲ್ಲಿ ನನ್ನ ಅಜ್ಜನ ಆಸ್ತಿ ಇತ್ತು. ಆ ಆಸ್ತಿಯನ್ನು ನಮ್ಮ ಕುಟುಂಬದವರು ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ನೀಡಿದ್ದಾರೆ. ಆ ಸಂದರ್ಭದಲ್ಲಿ ಕಾಗದ ಪತ್ರಕ್ಕೆ ನನ್ನ ಸಹಿ ತೆಗೆದುಕೊಂಡಿರಲಿಲ್ಲ. ಹೀಗಾಗಿ ನಾನು ಈ ರೀತಿಯ ಸುಳ್ಳು ಹೇಳಬೇಕಾಯಿತು ಎಂದಿದ್ದರು. ಅವರು ಈ ಹೇಳಿಕೆ ನೀಡಿದ ಮರುದಿನವೇ ಮತ್ತೊಂದು ಮಾಧ್ಯಮವೊಂದರಲ್ಲಿ ನನ್ನ ಆ ಸಂದರ್ಶನ ಬರೀ ಸುಳ್ಳು ಒಂದು ಚಾನಲ್‍ನವರು ಬಲವಂತವಾಗಿ ನನ್ನಿಂದ ಅಂತಹ ಹೇಳಿಕೆ ಪಡೆದುಕೊಂಡಿದ್ದರು ಎಂಬ ಬಾಂಬ್ ಹಾಕಿದ್ದರು.

ಸುಜಾತ ಭಟ್ ಅವರ ಈ ಗೊಂದಲ ಹೇಳಿಕೆಯಿಂದ ಕಂಗಲಾದಾ ಎಸ್‍ಐಟಿ ಪೊಲೀಸರು ಖುದ್ದು ವಿಚಾರಣೆಗೆ ಹಾಜರಾಗಿ ಘಟನೆಯ ಸಂಪೂರ್ಣ ವಿವರ ನೀಡುವಂತೆ ನೋಟೀಸ್ ಜಾರಿ ಮಾಡಿದ್ದರು. ಆದರೆ, ಆ ನೋಟೀಸ್‍ಗೆ ಭಟ್ ಅವರು ಕ್ಯಾರೇ ಎಂದಿರಲಿಲ್ಲ. ಹೀಗಾಗಿ ಅವರಿಗೆ ಮತ್ತೊಂದು ನೋಟೀಸ್ ನೀಡಿದಾಗ ಅವರು ನನಗೆ ತೀರಾ ವಯಸ್ಸಾಗಿದೆ ಜೊತೆಗೆ ನನಗೆ ಪ್ರಾಣ ಬೆದರಿಕೆ ಇರುವುದರಿಂದ ನಾನು ಎಸ್‍ಐಟಿ ಕಚೇರಿಗೆ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂಬ ಉತ್ತರ ನೀಡಿದ್ದರು. ಹೀಗಾಗಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಬನಶಂಕರಿಯಲ್ಲಿರುವ ಅವರ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಮಾತ್ರವಲ್ಲ, ನಾಳೆ ಇಲ್ಲವೇ ಒಂದೆರಡು ದಿನಗಳಲ್ಲಿ ಸುಜಾತಾ ಭಟ್ ಅವರ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿ ಅವರು ನೀಡಿರುವ ಹೇಳಿಕೆಗಳ ಸತ್ಯಾಸತ್ಯತೆ ಪರಿಶೀಲನೆ ನಡೆಸಲು ಎಸ್‍ಐಟಿ ಪೊಲೀಸರು ನಿರ್ಧರಿಸಿದ್ದಾರೆ.‌

ಎಸ್‍ಐಟಿ ವಿಚಾರಣೆ ನಡೆಸಿದ ನಂತರ ಅನನ್ಯ ಭಟ್ ನಾಪತ್ತೆಯಾಗಿದ್ದಾರಾ, ಇಲ್ಲವಾ, ಇದು ಕಟ್ಟುಕಥೆಯೇ ಎಂಬುದು ಬೆಳಕಿಗೆ ಬರಲಿದೆ.

Tags:
error: Content is protected !!