ಬೆಂಗಳೂರು: ಐಕ್ಯತೆ ಏಕತೆಗೆ ವಿರುದ್ಧವಾಗಿರುವ ಆರ್‌ಎಸ್‌ಎಸ್‌ನ್ನು ಕಾಂಗ್ರೆಸ್ ನಿರಂತರವಾಗಿ ವಿರೋಧಿಸುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬೇಕೆಂದರೆ ಭಾರತದ ಪ್ರತಿ ಪ್ರಜೆಯೂ ಆರ್‌ಎಸ್‌ಎಸ್‌ನಿಂದ ದೂರ ಇರಬೇಕು. ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿ಼ವಾದ, ಮನುವಾದಗಳನ್ನೇ ನರನಾಡಿ, ರಕ್ತಗಳಲ್ಲಿ ಪ್ರವಹಿಸಿಕೊಂಡಿರುವ ಆರ್‌ಎಸ್‌ಎಸ್ ಎಂಬ ಸಂಘಟನೆಯನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಶತ್ರುವಾಗಿಯೇ ನೋಡುತ್ತದೆ ಎಂದಿದ್ದಾರೆ.
ಏಕೆಂದರೆ, ಆರ್‌ಎಸ್‌ಎಸ್ ಸಂವಿಧಾನಕ್ಕೆ ಶತ್ರು, ಆರ್‌ಎಸ್‌ಎಸ್ ಐಕ್ಯತೆ, ಏಕತೆ, ಸಾರ್ವಭೌಮತೆಗೆ ವಿರುದ್ಧವಾಗಿದೆ. ಬಾಬಾ ಸಾಹೇಬರು, ಸರ್ದಾರ್ ಪಟೇಲರು ದಶಕಗಳ ಹಿಂದೆಯೇ ಆರ್‌ಎಸ್‌ಎಸ್ ಕುರಿತು ನಿಷ್ಠುರವಾಗಿ ಎಚ್ಚರಿಕೆಯ ಸಂದೇಶ ನೀಡಿ ಹೋಗಿದ್ದಾರೆ. ಆ ಮಹನೀಯರ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಮನುವಾದಿಗಳನ್ನು ದೂರ ಇಡಬೇಕಿದೆ ಎಂದಿದ್ದಾರೆ.
ಬ್ರಿಟಿಷರೊಂದಿಗೆ ಕೈಜೋಡಿಸಿ ಭಾರತ ವಿರೋಧಿಯಾಗಿ ನಡೆದುಕೊಂಡಿದ್ದ ಆರ್‌ಎಸ್‌ಎಸ್ ಸ್ವಾತಂತ್ರಾ ನಂತರ ಐಕ್ಯತೆಯ ವಿರೋಧಿ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸಿತು. ಸಂಘ ಪರಿವಾರದ ಅಪಾಯವನ್ನು ಅಂದೇ ಊಹಿಸಿದ ಸರ್ದಾರ್ ಪಟೇಲರು ನಿಷೇಧ ಹೇರಿದ್ದರು ಎಂದು ವಿವರಿಸಿದ್ದಾರೆ.





