Mysore
27
scattered clouds

Social Media

ಭಾನುವಾರ, 25 ಜನವರಿ 2026
Light
Dark

ಗೌರಿ-ಗಣೇಶ್‌, ಈದ್‌ ಮಿಲಾದ್‌ ಹಬ್ಬದಲ್ಲಿ ಶಾಂತಿ ಕಾಪಾಡಲು ಕಮಿಷನರ್‌ ಸೂಚನೆ

ಮೈಸೂರು : ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಆಚರಿಸಬೇಕು. ಹಬ್ಬಗಳು ಪರಸ್ಪರ ಭಾವೈಕ್ಯತೆ ಮೂಡಿಸುವ ಕಾರಣ ಪೊಲೀಸ್ ಇಲಾಖೆ ರೂಪಿಸಿರುವ ನಿಯಮಗಳನ್ನು ಪಾಲಿಸಿ ಆಚರಿಸಬೇಕೆಂದು ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್ ಸೂಚನೆ ನೀಡಿದರು.

ಗೌರಿ ಗಣೇಶ, ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆಯಲಾಗಿದ್ದ ಎರಡೂ ಧರ್ಮಗಳ ಪ್ರಮುಖರ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಬ್ಬಗಳು ಪರಸ್ಪರ ಪ್ರೀತಿ,ಸಹಬಾಳ್ವೆಯನ್ನು ಮೂಡಿಸುತ್ತವೆ. ಪೊಲೀಸರು ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಾರೆ. ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಹೇಳಿದರು.

ನಗರಪಾಲಿಕೆ ವತಿಯಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ವೇಳೆ ಬೇಕಾದ ಅನುಕೂಲ ಮಾಡಿಕೊಡಲಾಗುತ್ತದೆ. ಅದೇ ರೀತಿ ಪೊಲೀಸ್ ಇಲಾಖೆಯಿಂದ ಏಕಗವಾಕ್ಷಿ ಪದ್ಧತಿಯಂತೆ ಅನುಮತಿ ಕೊಡುತ್ತೇವೆ. ಆದರೆ, ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ನಂತರ ವಿಸರ್ಜನೆ ಮಾಡುವವರೆಗೂ ಕಾವಲು ಕಾಯಬೇಕು.ಪೊಲೀಸರು ಗಸ್ತು ತಿರುಗುತ್ತಾರೆ. ಇವರ ಜತೆಗೆ ಸಮಿತಿಯವರೂ ಇಬ್ಬರನ್ನು ನಿಯೋಜಿಸಬೇಕು. ಸಾಧ್ಯವಾದರೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಪೊಲೀಸರ ಅನುಮತಿ ಇಲ್ಲದೆ ಮೈಕ್ ಅಳವಡಿಸಬಾರದು.ಡಿಜೆಗೆ ಅವಕಾಶ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲೇ ಈದ್ ಮಿಲಾದ್ ಹಬ್ಬವೂ ಬರಲಿದೆ. ಒಂದು ವೇಳೆ ಈದ್ ಮಿಲಾದ್ ದಿನ ಮೆರವಣಿಗೆ ಮಾಡುವುದಾದರೆ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಬೇಕು. ಮೆರವಣಿಗೆ ಶಾಂತಿಯುತವಾಗಿರಲಿ ಎಂಬ ಉದ್ದೇಶದಿಂದ ಒಂದಿಷ್ಟು ಮಾರ್ಪಾಡುಗಳನ್ನು ಹೇಳಿದಾಗ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಗಣಪತಿ ವಿಸರ್ಜನೆ ಮಾಡಲು ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗುವ ಕಡೆಗಳಲ್ಲಿ ಚಪ್ಪರ,‌ ಶಾಮಿಯಾನ ಹಾಕದೆ ಸೂಕ್ತ ಜಾಗದ ವ್ಯವಸ್ಥೆ ಮಾಡಬೇಕು. ಗಣೇಶ ಹಬ್ಬದ ಮರುದಿನವೇ ವಿಸರ್ಜನೆ ಮಾಡಲು ಆಯಕಟ್ಟಿನ ಸ್ಥಳಗಳಲ್ಲಿ ಟ್ಯಾಂಕರ್ ಸೌಲಭ್ಯ ಕಲ್ಪಿಸುತ್ತೇವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.

ಡಿಸಿಪಿ ಕೆ.ಎಸ್.ಸುಂದರ್‌ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯು ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದರು. ನಗರಪಾಲಿಕೆ ಮಾಜಿ ಸದಸ್ಯರಾದ ರಂಗಸ್ವಾಮಿ,ರಮಣಿ,ಸೈಯದ್ ಫರೂಕ್, ಮಹಮದ್ ಫಿರ್ದೋಸ್, ಕ್ಯಾತಮಾರನಹಳ್ಳಿ ಹುಲಿಯಮ್ಮ ದೇವಿ ಟ್ರಸ್ಟ್‌ನ ಶಿವಕುಮಾರ್, ಮುಖಂಡರಾದ ಕಾರ್ತಿಕ್ ಮರಿಯಪ್ಪ, ಪರಮಾನಂದ, ವಿಜಯನಗರದ ಮಂಜು ಸೇರಿದಂತೆ ಹಿಂದೂ-ಮುಸ್ಲಿಂ ಮುಖಂಡರು ಸಭೆಯಲ್ಲಿ ಹಾಜರಿದ್ದರು.

Tags:
error: Content is protected !!