ನವದೆಹಲಿ: ಲೋಕಸಭೆಯಲ್ಲಿಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ಮಸೂದೆಗಳನ್ನು ಮಂಡಿಸಿದರು.
ಭಾರೀ ವಿರೋಧದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಸಂವಿಧಾನ ಮಸೂದೆ 2025, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಮಸೂದೆ 2025, ಜಮ್ಮು ಮತ್ತು ಕಾಶ್ಮೀರದ ಪುನರ್ವಿಂಗಡಣೆ ಮಸೂದೆ 2025ನ್ನು ಮಂಡಿಸಿದರು.
ಇಂದು ಲೋಕಸಭೆಯಲ್ಲಿ ಸಂವಿಧಾನದ 130ನೇ ತಿದ್ದುಪಡಿ ಮಸೂದೆ ಕೂಡ ಮಂಡನೆಯಾಗಿದೆ.
ಈ ಮಸೂದೆ ಮಂಡನೆಯಾಗಿ ಕಾನೂನಾದರೆ ಯಾವುದೇ ಗಂಭೀರ ಪ್ರಕರಣಗಳಲ್ಲಿ 30 ದಿನಗಳ ಕಾಲ ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಜೈಲಿನಲ್ಲಿದ್ದರೆ ಅವರನ್ನು ಕೂಡಲೇ ಅಧಿಕಾರದಿಂದ ಕೆಳಗಿಳಿಸಲಾಗುತ್ತದೆ.
ಈ ಮಸೂದೆ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಉತ್ತಮ ಆಡಳಿತ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಈ ಮಸೂದೆ ಅಗತ್ಯವಾಗಿದೆ. ಗಂಭೀರ ಅಪರಾಧಗಳ ಆರೋಪದ ಮೇಲೆ ಬಂಧಿಸಲ್ಪಟ್ಟ ಸಚಿವರು ಅಧಿಕಾರದಲ್ಲಿ ಮುಂದುವರಿದರೆ, ಅದು ಸಾಂವಿಧಾನಿಕ ಮೌಲ್ಯಗಳು ಹಾಗೂ ಉತ್ತಮ ಆಡಳಿತಕ್ಕೆ ಅಪಾಯವನ್ನು ಉಂಟುಮಾಡಬಹುದು ಎಂದು ಹೇಳಿದರು.





