Mysore
25
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ರಾಜಣ್ಣ ವಜಾ ಬೆನ್ನಲ್ಲೇ  ಡಿಕೆಶಿ ಬಣ, ಬಿಜೆಪಿ ಹೊಸ ಲೆಕ್ಕಾಚಾರ

Cm Siddaramaiah

ಬೆಂಗಳೂರು ಡೈರಿ 
ಆರ್‌.ಟಿ.ವಿಠ್ಠಲಮೂರ್ತಿ 

ಅಧಿಕಾರ ಹಂಚಿಕೆಯ ಎಪಿಸೋಡಿಗೆ ವರಿಷ್ಠರು ಕೈ ಹಾಕಿದರೆ ಅಲುಗಾಡಲಿದೆ ಸರ್ಕಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಿಗೇಡ್‌ನ ದಂಡ ನಾಯಕ ಎಂದೇ ಗುರುತಿಸಲ್ಪಡುತ್ತಿದ್ದ ಸಹಕಾರ  ಸಚಿವ ಕೆ.ಎನ್.ರಾಜಣ್ಣ ಮಂತ್ರಿ  ಮಂಡಲ ದಿಂದ ವಜಾ ಆಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ  ಮತಗಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿಯವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ರೀತಿಯೇ ರಾಜಣ್ಣ ಅವರ ವಜಾ ಎಪಿಸೋಡಿಗೆ ಮೂಲವಾಯಿತು. ಅಂದ ಹಾಗೆ ವಜಾ ಪ್ರಕರಣದ ನಂತರ ಮಾತನಾಡಿದ ರಾಜಣ್ಣ ಅವರು, ಇದರ ಹಿಂದೆ ಪಿತೂರಿ,   ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರಾದರೂ ಸಿಎಂ ಸಿದ್ದರಾಮಯ್ಯ ಅವರು ದೊಡ್ಡ ಮಟ್ಟದ ಪ್ರತಿಕ್ರಿಯೆ ನೀಡಿಲ್ಲ.

ಅದೇನೇ ಇರಲಿ, ಆದರೆ ಇಂತಹ ಬೆಳವಣಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬಣದಲ್ಲಿ ಮತ್ತು ಪ್ರತಿಪಕ್ಷ ಬಿಜೆಪಿ ಪಾಳೆಯದಲ್ಲಿ ಹೊಸ ಉತ್ಸಾಹ ಮೂಡಿಸಿರುವುದು ಮಾತ್ರ ಸ್ಪಷ್ಟ. ಅಂದ ಹಾಗೆ ರಾಜಣ್ಣ ವಜಾ ಆದ ಪ್ರಕರಣದಿಂದ ಡಿಕೆಶಿ ಮತ್ತು ಬಿಜೆಪಿ ಪಾಳೆಯದಲ್ಲಿ ಹೊಸ ಉತ್ಸಾಹ ಕಾಣಿಸಿಕೊಂಡಿದ್ದರೂ,  ಈ ಉತ್ಸಾಹಗಳಿಗೆ ಕಾರಣ ಮಾತ್ರ ಬೇರೆಯೇ ಇದೆ. ಉದಾಹರಣೆಗೆ ಡಿಕೆಶಿ ಪಾಳೆಯವನ್ನೇ ತೆಗೆದುಕೊಳ್ಳಿ.  ಅದಕ್ಕೆ ಮಂತ್ರಿ ರಾಜಣ್ಣ ದೊಡ್ಡ ತಲೆನೋವಾಗಿದ್ದರು. ಅದರಲ್ಲೂ ಕಾಂಗ್ರೆಸ್ ಪಕ್ಷ ಕರ್ನಾಟಕದ ಅಧಿಕಾರ ಸೂತ್ರ ಹಿಡಿದಂದಿನಿಂದ ಆರಂಭವಾದ ಅಧಿಕಾರ ಹಂಚಿಕೆಯ  ಮಾತಿಗೆ ಮೊದಲು ತಿರುಗೇಟು ಕೊಟ್ಟವರೇ  ರಾಜಣ್ಣ.

ಸರ್ಕಾರ ಅಸ್ತಿತ್ವಕ್ಕೆ ಬರುವಾಗ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಅಧಿಕಾರ ಹಂಚಿಕೆ ಒಪ್ಪಂದವಾಗಿದೆ. ಅದರ ಪ್ರಕಾರ, ಮೊದಲು ಎರಡೂವರೆ ವರ್ಷಗಳ ಕಾಲ  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿರಲಿದ್ದಾರೆ. ನಂತರದ  ಎರಡೂವರೆ ವರ್ಷಗಳ ಕಾಲ ಡಿಕೆಶಿ ಮುಖ್ಯಮಂತ್ರಿಯಾಗಲಿದ್ದಾರೆ  ಎಂಬ  ಮಾತು ಶುರುವಿನಲ್ಲೇ  ಮೇಲೆದ್ದಾಗ, ಅದಕ್ಕೆ ತಿರುಗೇಟು ಕೊಟ್ಟ ರಾಜಣ್ಣ, ಅಧಿಕಾರ ಹಂಚಿಕೆಯೂ ಇಲ್ಲ, ಸಿದ್ದರಾಮಯ್ಯ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯುವುದರಲ್ಲಿ ಅನುಮಾನವೂ ಇಲ್ಲ ಎಂದು   ನೀಡಿದ ಹೇಳಿಕೆ ಸಹಜವಾಗಿಯೇ ಡಿಕೆಶಿ ಬಣಕೆ ಆಕ್ರೋಶ ಮೂಡಿಸಿತು.

ಮುಂದೆ ರಾಜಣ್ಣ ಅವರಾಡಿದ ಮಾತನ್ನು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ಸಚಿವರು ಆಡಿದರಾದರೂ, ಬರಬರುತ್ತಾ ಅವರ ಪೈಕಿ ಬಹುತೇಕರು ಅಧಿಕಾರ ಹಂಚಿಕೆಯ ಪರ-ವಿರೋಧವಾಗಿ ಮಾತನಾಡುವುದನ್ನೇ ಬಿಟ್ಟರು. ಆದರೆ ಯಾರೇ ಬಿಟ್ಟರೂ ರಾಜಣ್ಣ ಮಾತ್ರ ಅಧಿಕಾರ ಹಂಚಿಕೆಯ ಮಾತೇ ಇಲ್ಲ, ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಅಂತ ನಿರಂತರವಾಗಿ ಹೇಳುತ್ತಾ ಬಂದರು. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಆಪ್ತರ ಬಳಿ ಈ ಬಾರಿ ಸರ್ಕಾರವನ್ನು ಸಿದ್ದರಾಮಯ್ಯ ಅವರೇ ನಡೆಸಲಿ, ಮುಂದಿನ ಚುನಾವಣೆಯಲ್ಲಿ ಡಿಕೆಶಿ ಪಕ್ಷದ ಸಾರಥ್ಯವನ್ನು ವಹಿಸಿಕೊಂಡು
ಪಕ್ಷವನ್ನು ಅಧಿಕಾರಕ್ಕೆ ತರಲಿ, ಸಿಎಂ ಆಗಲಿ  ಎಂದು  ಹೇಳತೊಡಗಿದರು.

ಇದು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ,  ಈ ಅವಧಿಯಲ್ಲೇ ಡಿಕೆಶಿ ಮುಖ್ಯಮಂತ್ರಿ ಆಗಬೇಕು ಎಂಬುದಾದರೆ  ವರಿಷ್ಠರು ಒಂದು ಕೆಲಸ ಮಾಡಲಿ,  ಸರ್ಕಾರವನ್ನು ವಿಸರ್ಜನೆ ಮಾಡಿ, ಮಧ್ಯಂತರ ಚುನಾವಣೆಗೆ ಹೋಗಲಿ, ಡಿಕೆಶಿ ನೇತೃತ್ವದಲ್ಲೇ ಚುನಾವಣೆ ನಡೆದು ಪಕ್ಷ ಗೆದ್ದರೆ ಅವರನ್ನೇ ಸಿಎಂ ಮಾಡಲಿ  ಎಂದು  ಹೇಳುವಲ್ಲಿಯವರೆಗೆ  ಹೋಯಿತು. ಮೂಲಗಳ ಪ್ರಕಾರ,  ಈ ಮಾತನ್ನು ದಿಲ್ಲಿಗೆ ಹೋಗಿ ವರಿಷ್ಠರ ಎದುರು ಹೇಳಲು ರಾಜಣ್ಣ ತಯಾರಿ ಮಾಡಿಕೊಂಡಿದ್ದರು. ಆದರೆ ಇಂತಹ ತಯಾರಿ ಮುಗಿಯುವ ಮುನ್ನವೇ ಅವರು ಮಂತ್ರಿಗಿರಿಯಿಂದ  ವಜಾ ಆಗಿದ್ದಾರೆ.

ವಾಸ್ತವವಾಗಿ ರಾಜಣ್ಣ ಅವರ ವಿರುದ್ಧ ಡಿಕೆಶಿ ಬಣ ದಿಲ್ಲಿಗೆ ನೀಡಿದ ದೂರುಗಳ ಸಂಖ್ಯೆಯನ್ನು ಗಮನಿಸಿದರೆ  ಅವರು ಯಾವತ್ತೋ ಮಂತ್ರಿಗಿರಿಯನ್ನು  ಕಳೆದುಕೊಳ್ಳಬೇಕಿತ್ತು. ಆದರೆ ವರಿಷ್ಠರು ಈ ವಿಷಯದಲ್ಲಿ ಎಚ್ಚರಿಕೆಯಿಂದ  ನಡೆದುಕೊಂಡರು. ಆದರೆ ಯಾವಾಗ ರಾಜಣ್ಣ ಅವರ ಮಾತು ರಾಹುಲ್ ಅವರ ಬುಡಕ್ಕೇ ಬಂತೋ ಆಗ ರಾಜಣ್ಣ ಅವರನ್ನು ವಜಾ ಮಾಡುವಂತೆ ಸಿದ್ದರಾಮಯ್ಯ  ಅವರಿಗೆ ನೇರ ನಿರ್ದೇಶನ ನೀಡಲಾಯಿತು.

ಹೀಗೆ  ರಾಜಣ್ಣ ಮಂತ್ರಿ ಮಂಡಲದಿಂದ ವಜಾ ಆದ ಪ್ರಕರಣ ಈಗ ಡಿಕೆಶಿ ಕ್ಯಾಂಪಿಗೆ  ಖುಷಿ ತರಲು ಹಲವು ಕಾರಣಗಳಿವೆ. ಅದರಲ್ಲೂ ಮುಖ್ಯವಾಗಿ ಈ ಬೆಳವಣಿಗೆಯ ಮೂಲಕ  ಸಿದ್ದರಾಮಯ್ಯ ಬ್ರಿಗೇಡ್‌ನ ದಂಡನಾಯಕನ ತಲೆದಂಡವಾಗಿದೆ. ಇದರರ್ಥ, ಮುಂದಿನ ದಿನಗಳಲ್ಲಿ ಡಿಕೆಶಿ ಅವರಿಗೆ ಮುಖ್ಯಮಂತ್ರಿ ಹುದ್ದೆ ಕೊಡಿಸಲು  ವರಿಷ್ಠರು ಯಾವುದೇ ಹಂತಕ್ಕಾದರೂ ಹೋಗಲು, ಕ್ರಮಕೈಗೊಳ್ಳಲು ಸಿದ್ಧರಿದ್ದಾರೆ ಎಂಬುದೇ ಹೊರತು ಮತ್ತೇನಲ್ಲ ಎಂಬುದು ಡಿಕೆಶಿ ಕ್ಯಾಂಪಿನ ಸ್ಪಷ್ಟ ಮಾತು.

ಕಳೆದ ತಿಂಗಳು ದಿಲ್ಲಿಗೆ ಹೋಗಿ ಸಿದ್ದರಾಮಯ್ಯ ಅವರಾಡಿದ  ಮಾತಿನಿಂದ ತಣ್ಣಗಾಗಿದ್ದ ಡಿಕೆಶಿ ಬಣಕ್ಕೆ ಸಹಜವಾಗಿಯೇ ಇದು ಟಾನಿಕ್ ಎಂಬುದು ಸುಳ್ಳಲ್ಲ. ಅದರಲ್ಲೂ ಈ ಹಿಂದೆ ಅಧಿಕಾರ ಹಂಚಿಕೆಯ ಮಾತು ಬಂದಾಗ ಗೃಹ ಸಚಿವ ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ  ಡಾ.ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ನಡೆಸುತ್ತಿದ್ದ ರಹಸ್ಯ ಸಭೆಗಳೇನಿದ್ದವು ,  ಈ ಸಭೆಗಳು ನಾಯಕತ್ವ ಬದಲಾವಣೆ ಆಗುವುದೇ ಆದರೆ ದಲಿತ ನಾಯಕರೊಬ್ಬರು ಸಿಎಂ ಆಗಬೇಕು ಎಂಬ ಅಜೆಂಡಾದೊಂದಿಗೆ ನಡೆಯುತ್ತಿದ್ದವು. ಅರ್ಥಾತ್, ಸಿದ್ದರಾಮಯ್ಯ ಕೆಳಗಿಳಿಯುವುದೇ ಆದರೆ ಡಿಕೆಶಿ ಬದಲು ದಲಿತ ನಾಯಕರೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬುದು ಈ ಸಭೆಗಳ ಮೂಲ
ಉದ್ದೇಶವಾಗಿತ್ತು.

ಆದರೆ ಈಗ ರಾಜಣ್ಣ ಅವರ ಉಚ್ಚಾಟನೆಯ ನಂತರ ಈ ಫೋರ್ ಮ್ಯಾನ್ ಆರ್ಮಿಯ ಶಕ್ತಿ ಕಡಿಮೆಯಾಗಿದೆ ಎಂಬುದು ಡಿಕೆಶಿ ಬಣದ  ಲೆಕ್ಕಾಚಾರ. ಹೀಗಾಗಿ ರಾಜಣ್ಣ ವಜಾ ಎಪಿಸೋಡನ್ನು ಡಿಕೆಶಿ ಬಣ ಸಂಭ್ರಮಿಸುತ್ತ್ತಿದೆಯಷ್ಟೇ  ಅಲ್ಲ, ನವೆಂಬರ್ ಇಪ್ಪತ್ತರ ನಂತರ ತಮ್ಮ ನಾಯಕ ಸಿಎಂ ಆಗುವುದು ಗ್ಯಾರಂಟಿ ಎಂಬ ಲೆಕ್ಕಾಚಾರದಲ್ಲಿದೆ. ಇದು ಒಂದು ಕಡೆಗಾದರೆ, ಮತ್ತೊಂದು ಕಡೆ ಪ್ರತಿಪಕ್ಷ ಬಿಜೆಪಿ ಪಾಳೆಯದಲ್ಲೂ ರಾಜಣ್ಣ ಎಪಿಸೋಡು ಹೊಸ ಉತ್ಸಾಹ ಮೂಡಿಸಿದೆ. ಕಾರಣ ತಮ್ಮ ಬ್ರಿಗೇಡ್‌ನ ದಂಡನಾಯಕ ಕೆ.ಎನ್.ರಾಜಣ್ಣ ಅವರ ವಜಾ ಎಪಿಸೋಡು ಸಹಜವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರನ್ನು ಆಕ್ರೋಶಕ್ಕೆ ತಳ್ಳಿದೆ.

ಸದ್ಯದ ಸ್ಥಿತಿಯಲ್ಲೇನೋ ಅವರು ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಹೇಳಿದ್ದಾರಾದರೂ ರಾಜಣ್ಣ  ಎಪಿಸೋಡಿನ ನಂತರ ಗಾಯಗೊಂಡ ಹುಲಿಯಂತಾಗಿದ್ದಾರೆ. ಗಾಯಗೊಂಡ ಹುಲಿ ಸಾಮಾನ್ಯ  ಹುಲಿಗಿಂತ ಹೆಚ್ಚು  ಅಪಾಯಕಾರಿ. ಹೀಗಾಗಿ ಅಧಿಕಾರ ಹಂಚಿಕೆಯ ಮಾತು ಯಾವುದೋ ರೂಪದಲ್ಲಿ ತಮ್ಮ ಮೇಲೆರಗಬಹುದು ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಅವರು ಬೇರೆ ಲೆಕ್ಕಾಚಾರಕ್ಕೆ  ಇಳಿಯುವಂತೆ ಮಾಡಲಿದೆ ಮತ್ತು ಇದರ ಪರಿಣಾಮವಾಗಿ ಕಾಂಗ್ರೆಸ್‌ನಲ್ಲಿ  ಅವರ ಪರವಾದ ಆತ್ಮಹತ್ಯಾದಳ ಎದ್ದು ನಿಲ್ಲುವಂತೆ ಮಾಡಲಿದೆ.

ಈಗಿರುವ ಮಾಹಿತಿಯ ಪ್ರಕಾರ, ಈ  ಆತ್ಮಹತ್ಯಾದಳದಲ್ಲಿ ಅರವತ್ತರಷ್ಟು ಶಾಸಕರು ಇದ್ದಾರೆ. ಒಂದು ವೇಳೆ ಇದು ನಿರ್ಣಾಯಕ ಸಂದರ್ಭದಲ್ಲಿ ಕೈ ಪಾಳೆಯ  ತೊರೆಯಲು ನಿರ್ಧರಿಸಿದರೆ, ಸಹಜವಾಗಿಯೇ ಸರ್ಕಾರ ಅಲುಗಾಡುತ್ತದೆ. ಈ ಅಲುಗಾಟ  ಎಷ್ಟು  ತೀವ್ರವಾಗಿರಲಿದೆಯೋ  ಅಷ್ಟು ಬೇಗ ಕರ್ನಾಟಕ ವಿಧಾನಸಭೆಗೆ ಮಧ್ಯಂತರ  ಚುನಾವಣೆ ನಡೆಯಲಿದೆ ಎಂಬುದು  ಬಿಜೆಪಿ ಮುಖಂಡರ  ಲೆಕ್ಕಾಚಾರ. ಅದರ ಈ ಲೆಕ್ಕಾಚಾರಕ್ಕೆ ಪೂರಕವಾದ ಮತ್ತೊಂದು ಅಂಶವೆಂದರೆ, ಅಧಿಕಾರ ಹಂಚಿಕೆಯ ಎಪಿಸೋಡಿಗೆ ಕಾಂಗ್ರೆಸ್  ವರಿಷ್ಠರು ಕೈ ಹಾಕಿದರೆ ಸರ್ಕಾರ ಅಲುಗಾಡುವುದಷ್ಟೇ ಅಲ್ಲ, ಇವತ್ತು ಕೈ ಪಾಳೆಯದ ಜತೆ ಗಟ್ಟಿಯಾಗಿ ನಿಂತಿರುವ ಅಹಿಂದ ಸೈನ್ಯ ಛಿದ್ರಛಿದ್ರವಾಗಲಿದೆ.

ಹಾಗೇನಾದರೂ ಅದು ಛಿದ್ರವಾದರೆ ಅನುಮಾನವೇ ಬೇಡ, ಮಧ್ಯಂತರ ಚುನಾವಣೆಯಲ್ಲಿ ಅದರ ಲಾಭವನ್ನು ಬಿಜೆಪಿ- ಜಾ.ದಳ
ಮಿತ್ರಕೂಟ ಪಡೆಯಲಿದೆ. ಅಷ್ಟೇ ಅಲ್ಲ,  ನಿರಾಯಾಸವಾಗಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಲಿದೆ ಎಂಬುದು ಬಿಜೆಪಿ ಪಾಳೆಯದ ಲೆಕ್ಕಾಚಾರ. ಅದರ ಈ ಲೆಕ್ಕಾಚಾರಕ್ಕೆ ಇಂಬು ನೀಡಿರುವುದು ಮಂತ್ರಿ ರಾಜಣ್ಣ ವಜಾ ಎಪಿಸೋಡು.  ನಿಜಕ್ಕೂ   ಕುತೂಹಲಕಾರಿಯಲ್ಲವೇ?

” ರಾಜಣ್ಣ ಅವರ ಉಚ್ಚಾಟನೆಯ ನಂತರ ಈ ಫೋರ್ ಮ್ಯಾನ್ ಆರ್ಮಿಯ ಶಕ್ತಿ ಕಡಿಮೆಯಾಗಿದೆ ಎಂಬುದು ಡಿಕೆಶಿ ಬಣದ  ಲೆಕ್ಕಾಚಾರ. ಹೀಗಾಗಿ ರಾಜಣ್ಣ ವಜಾ ಎಪಿಸೋಡನ್ನು ಡಿಕೆಶಿ ಬಣ ಸಂಭ್ರಮಿಸುತ್ತ್ತಿದೆಯಷ್ಟೇ  ಅಲ್ಲ,  ನವೆಂಬರ್ ಇಪ್ಪತ್ತರ ನಂತರ ತಮ್ಮ ನಾಯಕ ಸಿಎಂ ಆಗುವುದು ಗ್ಯಾರಂಟಿ ಎಂಬ ಲೆಕ್ಕಾಚಾರದಲ್ಲಿದೆ.”

Tags:
error: Content is protected !!