ಹನೂರು : ಒಂದೇ ದಿನದಲ್ಲಿ ನಾಲ್ವರಿಗೆ ಬೀದಿ ನಾಯಿಗಳು ಕಚ್ಚಿರುವ ಘಟನೆ ತಾಲ್ಲೂಕಿನ ಚೆನ್ನಾಲಿಂಗನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹನೂರು ತಾಲ್ಲೂಕಿನ ಚೆನ್ನಾಲಿಂಗನಹಳ್ಳಿ ಗ್ರಾಮದ ಮಹೇಶ್ (44), ವೆಂಕಟಯ್ಯ (70), ಸಿದ್ದಯ್ಯ (50), ಹಾಗೂ ಚಂದನ್ (12) ಎಂಬ ನಾಲ್ವರು ಬೀದಿ ನಾಯಿ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಗ್ರಾಮದಲ್ಲಿ ಬೀದಿನಾಯಿಗಳು ಹೆಚ್ಚಾಗಿದ್ದು, ಮಕ್ಕಳು ಹಾಗೂ ವಯೋವೃದ್ಧರು ಬೀದಿಯಲ್ಲಿ ಆತಂಕದಲ್ಲಿಯೇ ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ. ಬೀದಿ ನಾಯಿಗಳ ನಿಯಂತ್ರಣ ಮಾಡುವಂತೆ ಗ್ರಾಮ ಪಂಚಾಯತಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಗ್ರಾಮದ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ತುಂಬಾ ತಾತ್ಸಾರ ವಹಿಸುತ್ತಿದ್ದಾರೆ ಎಂದು ಗ್ರಾಮದ ನಿವಾಸಿ ರವಿ ಬೇಸರ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಒಂದೇ ದಿನದಲ್ಲಿ ಗ್ರಾಮದ ನಾಲ್ವರು ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದಾರೆ. ಈ ದುರ್ಘಟನೆಯಿಂದ ಮನನೊಂದ ಸಾರ್ವಜನಿಕರು ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.





