ಕನ್ನಡದ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾದ ‘ದುನಿಯಾ’ ಚಿತ್ರದಲ್ಲಿ ‘ಲೂಸ್ ಮಾದ’ ಎಂಬ ಪಾತ್ರವನ್ನು ಯೋಗೇಶ್ ಅವರು ಮಾಡಿದ್ದರು. ಆ ನಂತರ ಯೋಗಿ, ‘ಲೂಸ್ ಮಾದ’ ಅಂತಲೇ ಜನಪ್ರಿಯರಾದರು. ಈಗ ‘ಲೂಸ್ ಮಾದ’ ಚಿತ್ರದ ಶೀರ್ಷಿಕೆಯಾಗಿದ್ದು, ನಾಯಕನಾಗಿ ಯೋಗೇಶ್ ಅಭಿನಯಿಸುತ್ತಿದ್ದಾರೆ.
ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಧರ್ಮೇಂದ್ರ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ರಂಜಿತ್ ಕುಮಾರ್ ಗೌಡ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಯೋಗೇಶ್ ಅವರ ತಂದೆ, ನಿರ್ಮಾಪಕ ಟಿ.ಪಿ.ಸಿದ್ದರಾಜು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಚಿತ್ರದ ನಿರ್ಮಾಪಕ ಧರ್ಮೇಂದ್ರ ಕ್ಯಾಮೆರಾ ಚಾಲನೆ ಮಾಡಿದರು.
ರಂಜಿತ್ ಗೌಡ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದು ಅವರ ನಿರ್ದೇಶನದ ಮೂರನೇ ಚಿತ್ರವಂತೆ. ‘ಈ ಚಿತ್ರಕ್ಕೆ ‘The Wolf’ ಎಂಬ ಅಡಿಬರಹವಿದೆ. ಇದೊಂದು ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಉಡುಪಿ, ಸುರತ್ಕಲ್ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣವಾಗಲಿದೆ.
ಆಗಸ್ಟ್ 25 ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೇರೆ ಪ್ರಾಣೀಗಳಿಗೆ ಹೋಲಿಸಿದರೆ, ತೋಳವನ್ನು ಪಳಗಿಸುವುದು ಸ್ವಲ್ಪ ಕಷ್ಟ. ಅದು ಯಾರ ಮಾತನ್ನು ಕೇಳದ ಪ್ರಾಣಿ. ನಮ್ಮ ಚಿತ್ರದಲ್ಲಿ ನಾಯಕನ ಸ್ವಭಾವವೂ ಇದೇ ರೀತಿ. ಯಾವುದಕ್ಕೂ ಹಾಗೂ ಯಾರಿಗೂ ಅಂಜದ ಹುಡುಗ. ಈ ಹಿಂದೆ ಯೋಗೇಶ್ ಅವರು ಮಾಡಿರುವ ಪಾತ್ರಗಳಿಗಿಂತ ಭಿನ್ನ ಪಾತ್ರ’ ಎಂದು ಹೇಳಿದರು.
ಈ ಹಿಂದೆ ರಂಜಿತ್ ಕುಮಾರ್ ನಿರ್ದೇಶನದಲ್ಲಿ ಯೋಗಿ, ‘ಕಂಸ’ ಎಂಬ ಸಿನಿಮಾ ಮಾಡಬೇಕಿತ್ತಂತೆ. ಚಿತ್ರ ಸಹ ಘೋಷಣೆಯಾಗಿತ್ತು. ಆದರೆ, ಕಾರಣಾಂತರದಿಂದ ಮುಂದುವರೆಯಲಿಲ್ಲ. ‘ಈಗ ಈ ಚಿತ್ರವನ್ನು ರಂಜಿತ್ ನಿರ್ದೇಶಿಸುತ್ತಿದ್ದಾರೆ. ಈ ಶೀರ್ಷಿಕೆಯನ್ನಿಟ್ಟುಕೊಂಡು ಹಿಂದೆ ಸಾಕಷ್ಟು ನಿರ್ಮಾಪಕರು ಚಿತ್ರ ಮಾಡಲು ಮುಂದಾಗಿದ್ದರು. ನಾನೇ ಬೇಡ ಎನ್ನುತ್ತಿದ್ದೆ. ಆದರೆ ಈ ಕಥೆಗೂ ಶೀರ್ಷಿಕೆಗೂ ಪೂರಕವಾಗಿದೆ. ‘ದುನಿಯಾ’ ಸಿನಿಮಾದ ಲೂಸ್ ಮಾದನ ಪಾತ್ರಕ್ಕೂ ಈ ಚಿತ್ರದ ಪಾತ್ರಕ್ಕೂ ಸಂಬಂಧ ಇರುವುದಿಲ್ಲ. ಇದೇ ವಿಭಿನ್ನವಾದ ಚಿತ್ರ ಮತ್ತು ಪಾತ್ರವಾಗಲಿದೆ’ ಎಂದರು.
‘ಲೂಸ್ ಮಾದ’ ಚಿತ್ರದಲ್ಲಿ ಆದಿ ಲೋಕೇಶ್, ಕಿಶೋರ್, ಅಚ್ಯುತ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ಪ್ರದೀಪ್ ರೆಡ್ಡಿ ಛಾಯಾಗ್ರಹಣವಿದೆ.





