ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದ ಒಳಹರಿವಿನಲ್ಲಿ ಮತ್ತೆ ಏರಿಕೆ ಕಂಡು ಬಂದಿದ್ದು, ಜಲಾಶಯದಿಂದ ಹೊರಹರಿವನ್ನು ಕೂಡ ಹೆಚ್ಚಳ ಮಾಡಲಾಗಿದೆ.
ಜಲಾಶಯದ ಇಂದಿನ ಒಳಹರಿವು 52,856 ಕ್ಯೂಸೆಕ್ಸ್‌ಗಳಾಗಿದ್ದು, ಜಲಾಶಯದ ಇಂದಿನ ಹೊರಹರಿವು 56,474 ಕ್ಯೂಸೆಕ್ಸ್‌ಗಳಾಗಿದೆ. ಜಲಾಶಯದ 24 ಗೇಟ್‌ಗಳ ಮೂಲಕ ನೀರು ಹೊರಬಿಡಲಾಗಿದ್ದು, ಕಾವೇರಿ ನದಿ ಭೋರ್ಗರೆದು ಹರಿಯುತ್ತಿದೆ.
ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದ್ದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.
ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಗೆ ಇಳಿಯದಂತೆ ಜನರಿಗೆ ಸೂಚನೆ ನೀಡಲಾಗಿದ್ದು, ಸೇತುವೆಗಳ ಬಳಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.





