ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮಾದಿಗ ಸಮಾಜದ ನಂಬರ್ ಒನ್ ವೈರಿಯಾಗಿದೆ ಎಂದು ಕರ್ನಾಟಕ ಸಮಾಜ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಹಾಗೂ ಹಿರಿಯ ವಕೀಲ ಅರುಣ್ ಕುಮಾರ್ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿ ಮುಂಬರುವ ಆಗಸ್ಟ್.1ಕ್ಕೆ ಒಂದು ವರ್ಷವಾಗಲಿದೆ. ಆದರು ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿಲ್ಲ. ಒಳಮೀಸಲಾತಿ ಜಾರಿ ಮಾಡದೇ ಕೇವಲ ಓಟ್ ಬ್ಯಾಂಕ್‌ಗಾಗಿ ಪರಿಶಿಷ್ಟ ಸಮುದಾಯದ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಜಸ್ಟೀಸ್ ನಾಗಮೋಹನದಾಸ್ ಆಯೋಗ ಹಾಗೂ ರಾಜ್ಯ ಸರ್ಕಾರ ಮಾದಿಗ ಸಮುದಾಯದ ವಿರೋಧಿಗಳೆಂಬುದು ಸ್ಪಷ್ಟವಾಗಿದೆ. ಮಾದಿಗ ಸಮುದಾಯ ಪರಿಶಿಷ್ಟ ಸಮುದಾಯದಲ್ಲೇ ಅತಿ ಹೆಚ್ಚು ತುಳಿತಕ್ಕೆ ಒಳಗಾದ ಸಮುದಾಯವಾಗಿದೆ. ಆದ್ದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಮಾದಿಗ ಸಮಾಜದ ನಂಬರ್ ಒನ್ ವೈರಿಯಾಗಿದೆ.
ಒಳಮೀಸಲಾತಿ ಜಾರಿಗಾಗಿ ಸಮೀಕ್ಷೆ ಮಾಡಲು ನೇಮಿಸಿರುವ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಪದೇ ಪದೇ ದಿನಾಂಕವನ್ನು ವಿಸ್ತರಿಸುತ್ತಿದೆ. ನಾಗಮೋಹನ್ ದಾಸ್ ಸಮಿತಿ ಆಗಸ್ಟ್.1ರೊಳಗೆ ವರದಿ ನೀಡದಿದ್ದರೇ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಒಳಮೀಸಲಾತಿ ಹೋರಾಟ ಸಮಿತಿಯ ಭಾಸ್ಕರ್ ಪ್ರಸಾದ್ ಮಾತನಾಡಿ ಒಳಮೀಸಲಾತಿ ಜಾರಿಗೆ ತ್ವರಿತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹಿಂದೇಟು ಹಾಕುವುದನ್ನು ಮುಂದುವರಿಸಿದರೆ ಹೋರಾಟ ಅನಿವಾರ್ಯ. ಮಾದಿಗ ಸಮುದಾಯದ ಹೋರಾಟದ ಬಗ್ಗೆ ಮಾತನಾಡಲು ಸಚಿವ ಕೆ.ಹೆಚ್.ಮುನಿಯಪ್ಪಗೆ ಯಾವುದೇ ನೈತಿಕತೆ ಇಲ್ಲ.
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಬರುವ ಆಗಸ್ಟ್.1ರಿಂದ ರಾಜ್ಯದಾದ್ಯಂತ ಪಕ್ಷಾತೀತವಾಗಿ ಹೋರಾಟ ಆರಂಭಿಸುತ್ತೇವೆ. ಹಾಗಾಗಿ ಜುಲೈ.31ರೊಳಗೆ ನಾಗಮೋಹನ್ ದಾಸ್ ಸಮಿತಿ ನೀಡುವ ವರದಿ ಸ್ವೀಕರಿಸಿ, ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಆಗಸ್ಟ್.1ರಂದು ರಾಜ್ಯ ಸರ್ಕಾರದ ಶವಯಾತ್ರೆ ಮಾಡುತ್ತೇವೆ. ತಲೆ ಬೋಳಿಸಿಕೊಂಡು ತಲೆಕೂದಲನ್ನು ಸರ್ಕಾರಕ್ಕೆ ರವಾನಿಸುತ್ತೇವೆ. ಏಕೆಂದರೆ ಈ ರಾಜ್ಯ ಸರ್ಕಾರ ಸತ್ತುಹೋಗಿದೆ ಎಂದು ಹರಿಹಾಯ್ದರು.





