Mysore
25
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ಟ್ರೇಲರ್‌ನಲ್ಲಿ ‘ಕೊತ್ತಲವಾಡಿ’ಯ ಹೋರಾಟದ ಕಥೆ …

kothlavadi

ಯಶ್‌ ತಾಯಿ ಪುಷ್ಪ ಅರುಣ್‌ ಕುಮಾರ್‌, ‘ಕೊತ್ತಲವಾಡಿ’ ಎಂಬ ಚಿತ್ರವನ್ನು ನಿರ್ಮಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಚಿತ್ರವು ಆಗಸ್ಟ್.01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.

ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಎಂಬ ಗ್ರಾಮದಲ್ಲಿ ನಡೆಯುವ ಕಥೆ ಹೊಂದಿರುವ ಚಿತ್ರ ‘ಕೊತ್ತಲವಾಡಿ’. ಆ ಚಿತ್ರದಲ್ಲಿ ನಡೆಯುವ ಹೋರಾಟ, ರಾಜಕೀಯದ ಸುತ್ತ ಚಿತ್ರ ಸಾಗುತ್ತದೆ. ಪೃಥ್ವಿ ಅಂಬಾರ್ ಮೊದಲ ಬಾರಿಗೆ ಇಂಥದ್ದೊಂದು ಒರಟು ಗ್ರಾಮೀಣ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ಕಾವ್ಯಾ ಶೈವ ಅಭಿನಯಿಸಿದ್ದಾರೆ. ಮಿಕ್ಕಂತೆ ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್‍ ನಟರಂಗ, ಮಾನಸಿ ಸುಧೀರ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಇದೆ.

ಟ್ರೇಲರ್ ಬಿಡುಗಡೆ ನಂತರ ಮಾತನಾಡಿದ ಪುಷ್ಪಾ, ‘ಆಗಸ್ಟ್‌.1ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜನ ಈ ಚಿತ್ರವನ್ನು ಹೇಗೆ ತೆಗೆದುಕೊಳ್ತಾರೋ ಎಂಬ ಭಯವಿದೆ. ಜನ ನಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆಯೂ ಇದೆ. ಭಯ-ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಯಶ್‌ಗೆ ಹೇಳದೇ ಏನನ್ನೂ ಮಾಡಿಲ್ಲ. ಅವನಿಂದ ಪ್ರೇರಣೆ ಪಡೆದು ಈ ಚಿತ್ರ ಮಾಡಿದ್ದೇವೆ. ಜನ ಒಪ್ಪಿಕೊಂಡರೆ ಅವರಿಗೂ ಖುಷಿ ನಮಗೂ ಖುಷಿ’ ಎಂದರು.

ನಿರ್ದೇಶಕ ಶ್ರೀರಾಜ್‌ ಮಾತನಾಡಿ, ‘ಕೊತ್ತಲವಾಡಿ ಗ್ರಾಮದಲ್ಲಿ ಚಿತ್ರೀಕರಣ ಮಾಡಿದ್ದರಿಂದ, ಚಿತ್ರಕ್ಕೆ ಅದೇ ಹೆಸರಿಟ್ಟಿದ್ದೇವೆ. ಕಥೆಗೂ, ಗ್ರಾಮಸ್ಥರಿಗೂ ಯಾವುದೇ ಸಂಬಬಂಧವಿಲ್ಲ. ಕೆಲವು ನೈಜ ಘಟನೆಗಳ ಜೊತೆಗೆ, ಒಂದಿಷ್ಟು ಕಾಲ್ಪನಿಕ ಅಂಶಗಳನ್ನು ಸೇರಿಸಿ ಚಿತ್ರ ಮಾಡಿದ್ದೇವೆ’ ಎಂದರು.

ನಾಯಕ ಪೃಥ್ವಿ ಅಂಬಾರ್ ಮಾತನಾಡಿ, ‘ಇದೊಂದು ತಂತ್ರಜ್ಞರ ಚಿತ್ರ. ಇದಕ್ಕೂ ಮುನ್ನ ಬೇರೆ ಚಿತ್ರಗಳಲ್ಲಿ ಹೆಚ್ಚಾಗಿ ಪ್ರೀತಿಸುವ ಯುವಕನ ಪಾತ್ರವೇ ಸಿಕ್ಕಿತ್ತು. ಇಲ್ಲಿ ಬೇರೆ ತರಹದ ಪಾತ್ರ ಸಿಕ್ಕಿದೆ. ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿದೆ. ಅವರು ನಮ್ಮ ಚಿತ್ರರಂಗಕ್ಕೆ ದೊಡ್ಡ ಆಸ್ತಿ. ಚಿತ್ರೀಕರಣ ಮಾಡುವಾಗ ನನಗೆ ಈ ಚಿತ್ರದ ನಿರ್ಮಾಪಕರು ಯಾರು ಎಂದು ಗೊತ್ತಿರಲಿಲ್ಲ. ಎಲ್ಲಾ ಮುಗಿದ ಮೇಲೆ ನಿರ್ದೇಶಕರು ಕರೆದುಕೊಂಡು ಹೋಗಿ ಯಶ್‍ ಅವರ ತಾಯಿಯನ್ನು ಪರಿಚಯ ಮಾಡಿಸಿದರು. ಈ ಚಿತ್ರದಲ್ಲಿ ಮೋಹನ ಎಂಬ ಹಳ್ಳಿ ಯುವಕನ ಪಾತ್ರ ಮಾಡಿದ್ದೇನೆ. ಆಸೆ, ದುರಾಸೆ ಮಟ್ಟಕ್ಕೆ ಹೋದರೆ ಏನಾಗುತ್ತದೆ ಎಂಬುದೇ ಚಿತ್ರದ ಕಥೆ’ ಎಂದರು.

‘ಕೊತ್ತಲವಾಡಿ’ ಚಿತ್ರಕ್ಕೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದರೆ, ಶೀರ್ಷಿಕೆ ಗೀತೆ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಅಭಿನಂದನ್‍ ಕಶ್ಯಪ್‍ ಹೊತ್ತಿದ್ದಾರೆ. ಕಾರ್ತಿಕ್‍ ಛಾಯಾಗ್ರಾಹಣ ಮತ್ತು ರಘು ನಿಡುವಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ.

Tags:
error: Content is protected !!