ಬೆಂಗಳೂರು : ಧರ್ಮಸ್ಥಳ ಭಾಗದಲ್ಲಿ ನಡೆದಿರುವ ಅನುಮಾನಸ್ಪದ ನಾಪತ್ತೆ ಪ್ರಕರಣಗಳು, ಅಸಹಜ ಸಾವಿನ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ದಳ ರಚಿಸಲಾಗಿದೆ. ಗೃಹಸಚಿವರು ಇದನ್ನು ನಿರ್ವಹಣೆ ಮಾಡುತ್ತಾರೆ. ಒಳ್ಳೆಯ ಅಧಿಕಾರಿಗಳ ತಂಡವನ್ನೇ ನಿಯೋಜಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರವಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಬಿಜೆಪಿಯವರೇ ಹೇಳಲಿ. ನಾವು ಅದರಂತೆ ಅದನ್ನು ಅನುಸರಿಸುತ್ತೇವೆ. ಬಿಜೆಪಿಯವರು ಮತ್ತು ಮಾಧ್ಯಮಗಳ ಭಾಷೆಯೇ ನನಗರ್ಥವಾಗುತ್ತಿಲ್ಲ. 15 ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಘಟನೆಗಳ ಬಗ್ಗೆ ವ್ಯಕ್ತಿಯೊಬ್ಬ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾನೆ. ಮಾಧ್ಯಮಗಳು ಧರ್ಮಸ್ಥಳ ಭಾಗಕ್ಕೆ ಸಂಬಂಧಪಟ್ಟಂತಹ ವಿಚಾರಗಳನ್ನು ದೊಡ್ಡದಾಗಿ ಪ್ರಚಾರ ಮಾಡಿದೆ. ಸರ್ಕಾರ ಎಲ್ಲರ ಧ್ವನಿಗೂ ಕಿವಿಯಾಗಬೇಕು. ವಿರೋಧಪಕ್ಷಗಳ ಅಭಿಪ್ರಾಯಗಳನ್ನೂ ಗೌರವಿಸಬೇಕು. ಹಾಗಾಗಿ ತನಿಖಾ ತಂಡ ರಚಿಸಿದೆ. ಈ ವಿಚಾರವಾಗಿ ಆತುರ ಬೇಡ. ತನಿಖೆಯ ನಂತರ ಬರುವ ಅಂಶಗಳನ್ನು ಪರಿಗಣಿಸುವುದು ಸೂಕ್ತ ಎಂದು ಹೇಳಿದರು.
ಬಿಬಿಎಂಪಿ ವಿಭಜನೆ ಶತಸಿದ್ಧ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಭಜಿಸಲು ನಾವು ಬದ್ಧರಾಗಿದ್ದು, ಈ ವಿಚಾರವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಅದಕ್ಕೂ ಮುನ್ನ ವಿರೋಧಪಕ್ಷಗಳ ನಾಯಕರ ಜೊತೆ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ಚರ್ಚೆ ಮಾಡುತ್ತೇವೆ. ಜನಸಾಮಾನ್ಯರ ಅಭಿಪ್ರಾಯಗಳನ್ನೂ ಪರಿಗಣಿಸಿ ಬೆಂಗಳೂರಿನ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಮಾಡುತ್ತೇವೆ ಎಂದರು.
ಇ ಖಾತಾ, ಎ ಖಾತಾ, ಬಿ ಖಾತಾ ಆಂದೋಲನಗಳು ಮುಗಿದ ಬಳಿಕ ಸಂಬಂಧಪಟ್ಟಂತೆ ಚರ್ಚೆಯನ್ನು ಮುಂದುವರೆಸುತ್ತೇವೆ, ಸಭೆ ಕರೆಯುತ್ತೇವೆ ಎಂದ ಅವರು, 5 ಪಾಲಿಕೆಗಳನ್ನಾಗಿ ವಿಭಜಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದು ಸ್ವಾಗತಾರ್ಹ. ಇದು ಯಾವುದೇ ತಪ್ಪುಗಳನ್ನು ಮಾಡದಂತೆ ನಮಗೆ ಎಚ್ಚರಿಕೆಯ ಗಂಟೆ. ನ್ಯಾಯಾಲಯದಲ್ಲಿ ಪ್ರಶ್ನಿಸುವ ಜನಸಮಾನ್ಯರ ಅಧಿಕಾರವನ್ನು ನಾವು ಮೊಟಕುಗೊಳಿಸುವುದಿಲ್ಲ ಎಂದು ತಿಳಿಸಿದರು.





