ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಎಸ್‌ಐಟಿ ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್‌ಐಟಿಗೆ ವಹಿಸಿದೆ. ಹಲವಾರು ಜನರು ಪ್ರಕರಣ ತನಿಖೆಗೆ ಒತ್ತಾಯಿಸಿದರು. ಹಲವು ಜನ ಕಂಪ್ಲೆಂಟ್ ಕೊಟ್ಟಿದ್ದಾರೆ. ತನಿಖೆ ಮಾಡಿದರೆ ನಿಜಾಂಶ ಹೊರ ಬರಲಿದೆ ಎಂದು ಹೇಳಿದರು.
ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಪ್ರಣವ್ ಮೊಹಂತಿಗೆ ವಹಿಸಿದ್ದೇವೆ. ಹಿರಿಯ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ. ಜವಾಬ್ದಾರಿಯಿಂದ ತನಿಖೆ ಮಾಡುತ್ತೇವೆ ಎಂದು ಪ್ರಣವ್ ತಿಳಿಸಿದ್ದಾರೆ. ಪ್ರಕರಣ ತನಿಖೆಯಿಂದ ಯಾರೂ ಹಿಂದೆ ಸರಿಯುವ ಬಗ್ಗೆ ಹೇಳಿಲ್ಲ. ಈ ಬಗ್ಗೆ ನನಗೆ ಹಾಗೂ ಸರ್ಕಾರಕ್ಕೆ ತಿಳಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.





