ಗುಂಡ್ಲುಪೇಟೆ: ಖಾಸಗಿ ಫೈನಾನ್ಸ್‌ವೊಂದರ ಸಿಬ್ಬಂದಿಯ ಕಿರುಕುಳದಿಂದ ರೈತರೊಬ್ಬರು ಕೀಟನಾಶಕ ಸೇವಿಸಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತಾಲ್ಲೂಕಿನ ಭೋಗಯ್ಯನಹುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಿದ್ದರಾಜು ಅಲಿಯಾಸ್ ಕರಿಯಪ್ಪ (38) ಮೃತರು. 4 ದಿನಗಳ ಹಿಂದೆ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಬೇಗೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ.
ನಂಜನಗೂಡಿನ ಖಾಸಗಿ ಫೈನಾನ್ಸ್ ಸಂಸ್ಥೆಯೊಂದರಿಂದ ಗೃಹ ಸಾಲ ಪಡೆದಿದ್ದರು. ಸಕಾಲಕ್ಕೆ ಪಾವತಿಸಲು ಸಾಧ್ಯವಾಗಿರಲಿಲ್ಲ. ಸಂಸ್ಥೆಯ ಸಿಬ್ಬಂದಿ ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಅವಿವಾಹಿತ ಸಿದ್ದರಾಜು ತಾಯಿ ಜೊತೆಗಿದ್ದರು. ಖಾಸಗಿ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಈತನ ಮನೆಗೆ ಬಂದು ಸಾಲ ಮರುಪಾವತಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ವಿಷ ಸೇವಿಸಿ ಅಸ್ವಸ್ಥರಾಗಿದ್ದರು ಎಂದು ಗ್ರಾಮದ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.





