ಚಾಮರಾಜನಗರ : ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಪಿ ನೌಕರರಿಗೆ ನೇಮಕಾತಿ ಹಾಗೂ ಬಡ್ತಿ ವಿಚಾರದಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆರೋಪಿಸಿದರು.
ರಾಜ್ಯದ ಅಧಿಕಾರ ಹಿಡಿಯಲು ದಲಿತ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ರಾಜ್ಯದ ೩೧ ಜಿಲ್ಲೆಗಳ ಪೈಕಿ ಕೇವಲ ಕೋಲಾರ ಜಿಲ್ಲೆಗೆ ಮಾತ್ರ ಎಸ್ಸಿಗೆ ಸೇರಿದ ಜಿಲ್ಲಾಧಿಕಾರಿಯನ್ನು ನೇಮಿಸಿದೆ. ಆ ಮೂಲಕ ಎಸ್ಸಿ, ಎಸ್ಟಿ ಜನಾಂಗದ ಐಎಎಸ್ ಅಧಿಕಾರಿಗಳಿಗೆ ಮಹತ್ವದ ಹುದ್ದೆಗಳನ್ನು ನೀಡದೆ ವಂಚಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಜ್ಯದ ಪದವಿ ಪೂರ್ವ ಶಿಕ್ಷಣ, ಗೃಹ, ಅರಣ್ಯ, ತೋಟಗಾರಿಕೆ, ಕೃಷಿ, ನಗರಾಭಿವೃದ್ಧಿ, ಸಾರಿಗೆ, ಡಿಪಿಎಆರ್, ಇಂಧನ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಮುಂಬಡ್ತಿಗೆ ಅರ್ಹರಾಗಿರುವ ಎಸ್ಸಿ, ಎಸ್ಪಿ ನೌಕರರಿಗೆ ಸಕಾಲದಲ್ಲಿ ಬಡ್ತಿ ನೀಡದೆ ವಂಚಿಸಲಾಗಿದೆ. ಕೃಷಿ ಇಲಾಖೆಯಲ್ಲಿ ೫೦ ಎಸ್ಸಿ, ಎಸ್‌ಟಿ ಅಧಿಕಾರಿಗಳಿಗೆ ಬಡ್ತಿ ನೀಡಿಲ್ಲ. ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಗಳಿಗೆ ರೋಸ್ಟರ್ ಪದ್ಧತಿ ಅಳವಡಿಸಿಲ್ಲ ಎಂದು ದೂರಿದರು.
ಸಾಂವಿಧಾನಿಕ ಸಂಸ್ಥೆಯಾಗಿರುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದ ಸದನ ಸಮಿತಿಯ ಆದೇಶವನ್ನು ಕಡೆಗಣಿಸಿ ಎಸ್ಸಿ, ಎಸ್ಟಿ ಜನಾಂಗದ ೮೦ ಉಪನ್ಯಾಸಕರಿಗೆ ಅನ್ಯಾಯ ಮಾಡಲೆಂದೆ ಇತರರಿಗೆ ಬಡ್ತಿ ನೀಡಲಾಗಿದೆ. ಆ ಮೂಲಕ ಸಮಿತಿಗೆ ಯಾವುದೇ ಮಹತ್ವ ಇಲ್ಲ ಎಂದು ಸಾಬೀತುಪಡಿಸಿದೆ ಎಂದರು.
ಎಸ್ಸಿ, ಎಸ್ಪಿ ನೌಕರರಿಗೆ ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ಕೂಡ ಎಸ್ಸಿ, ಎಸ್ಟಿ ಜನಾಂಗದ ಸಂಪುಟ ದರ್ಜೆ ಸಚಿವರು ಹಾಗೂ ಮೀಸಲು ಕ್ಷೇತ್ರಗಳಿಂದ ಗೆದ್ದಿರುವ ಶಾಸಕರು ಬಾಯಿ ಮುಚ್ಚಿಕೊಂಡು ಕುಳಿತಿರುವುದು ವಿಪರ್ಯಾಸ. ಇವರು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು.
ಎರಡೂವರೆ ವರ್ಷಗಳಿಂದ ಎಸ್ಸಿ, ಎಸ್ಪಿ ಆಯೋಗಕ್ಕೆ ಅಧ್ಯಕ್ಷರನ್ನೇ ನೇಮಕ ಮಾಡದೆ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಈ ಅನ್ಯಾಯವನ್ನು ಸರಿಪಡಿಸದಿದ್ದರೆ ಈ ದಲಿತ ವಿರೋಧಿ ನೀತಿ ಖಂಡಿಸಿ ಮುಂದಿನ ದಿನಗಳಲ್ಲಿ ಬಿಎಸ್ಪಿ ಪಕ್ಷದ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ. ಇದಲ್ಲದೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎನ್.ನಾಗಯ್ಯ, ರಾಜ್ಯ ಸಮಿತಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಉಸ್ತುವಾರಿ ಪುಟ್ಟಸ್ವಾಮಿ, ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಮುಖಂಡ ಎಸ್.ಪಿ.ಮಹೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.





