ಬೆಂಗಳೂರು: ಬೀದಿ ನಾಯಿಗಳಿಗೆ ಪಾಲಿಕೆಯಿಂದ ಚಿಕನ್ ರೈಸ್ ಭಾಗ್ಯ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಇದೀಗ ಸ್ಪಷ್ಟನೆ ನೀಡಿದೆ.
ಈ ಕುರಿತು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆ ನೀಡಿರುವ ಬಿಬಿಎಂಪಿ, ಈ ಊಟಕ್ಕೆ ಹೆಸರಿಲ್ಲ. ಮಾನವ ಗುಣಮಟ್ಟದ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವುದಿಲ್ಲ. ನಾಯಿ ದರ್ಜೆಯ ಆಹಾರ ನೀಡಲಾಗುವುದು. ಟೆಂಡರ್‌ನಲ್ಲಿ ಊಟದ ಪದಾರ್ಥಗಳನ್ನು ನಮೂದಿಸಿದ್ದು ಬಿಟ್ಟರೆ ವಿತರಿಸುವ ಆಹಾರಕ್ಕೆ ಹೆಸರಿಟ್ಟಿಲ್ಲ ಎಂದು ಹೇಳಿದೆ.
ಇನ್ನು ಪ್ರತಿ ನಾಯಿಗೆ ದಿನದ ಆಹಾರಕ್ಕೆ 11 ರೂ ವೆಚ್ಚ ಮಾಡಲಾಗುತ್ತಿದ್ದು, ಆಹಾರ ಸಾಗಾಣಿಕೆ ವೆಚ್ಚ, ಸ್ವಚ್ಛತೆ, ಜಿಎಸ್‌ಟಿ ಸೇರಿದಂತೆ ಒಟ್ಟು ವೆಚ್ಚ 22.42 ರೂ ಆಗಲಿದೆ. ಭಾರತ ಪ್ರಾಣಿ ಕಲ್ಯಾಣ ಮಂಡಳಿಯ ಕೈಪಿಡಿ, ಸಂಶೋಧನೆಯ ಶಿಫಾರಸ್ಸು ಆಧರಿಸಿ ಆಹಾರ ವಿತರಣೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಲಾಗಿದೆ.





