Mysore
19
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ದ್ವಿಗುಣದ ಆಸೆ ತೋರಿಸಿ ಕೋಟಿಗಟ್ಟಲೆ ಹಣ ಗುಳುಂ

Deception by showing an idol of God

ಮಂಡ್ಯ: ನಯವಂಚಕನೊಬ್ಬ ದೇವರ ವಿಗ್ರಹ ಮತ್ತು ಹಳೆಯ ಮಸಿ ಹಿಡಿದಿರುವ ತಂಬಿಗೆಯನ್ನುಮಹಿಳೆಯರಿಗೆ ತೋರಿಸಿ, ಇದರಿಂದ ಹಣ ದ್ವಿಗುಣಗೊಳಿಸುತ್ತೇನೆ ಎಂದು ನಂಬಿಸಿ ಕೋಟಿಗಟ್ಟಲೆ ಹಣವನ್ನು ಪಡೆದು ವಂಚಿಸಿರುವ ಘಟನೆ ತಾಲ್ಲೂಕಿನ ದ್ಯಾಪ ಸಂದ್ರ ಗ್ರಾಮದಲ್ಲಿ ನಡೆದಿದೆ.

ಹುಣಸೂರು ಮೂಲದ ನಾಗರಾಜು ಮಹಿಳೆಯರನ್ನು ನಂಬಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸಿದವನಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಹಳೆಯ ಪಾತ್ರೆ, ಪುರಾತನ ವಿಗ್ರಹಗಳಿಂದ ಹಣ ದ್ವಿಗುಣ ಮಾಡುವುದಾಗಿ ನಾಗರಾಜು ಮಹಿಳೆಯರಿಗೆ ಆಸೆ ಹುಟ್ಟಿಸಿದ್ದಾನೆ. ಈತನ ಮಾತನ್ನು ನಂಬಿದ ಮಹಿಳೆಯರು ತಮ್ಮಗಂಡಂದಿರಿಗೆ ತಿಳಿಯದಂತೆ ಹಣವನ್ನು ನೀಡಿದ್ದಾರೆ. ಮಸಿ ಹಿಡಿದಿರುವ ಹಿತ್ತಾಳೆಯ ತಂಬಿಗೆ, ದೇವರ ವಿಗ್ರಹವನ್ನು ತೋರಿಸಿದ ನಾಗರಾಜು, ಇವುಗಳನ್ನು ದೇವಸ್ಥಾನದಲ್ಲಿ ಇಟ್ಟು ಪೂಜೆ ಮಾಡಬೇಕು.

ನಂತರ ಪಾತ್ರೆಯಲ್ಲಿ ಏನೇ ಹಾಕಿದರೂ ದ್ವಿಗುಣಗೊಳ್ಳುತ್ತದೆ ಎಂದು ಹೇಳಿದ್ದಲ್ಲದೆ, ದೊಡ್ಡ ದೊಡ್ಡಹೋಟೆಲ್‌ಗಳಲ್ಲಿ ದೊಡ್ಡ ದೊಡ್ಡ ಜನರ ಜತೆ ಸಭೆಗಳನ್ನು ನಡೆಸಿ, ದ್ಯಾಪಸಂದ್ರ ಗ್ರಾಮದ ಮಹಿಳೆಯರಲ್ಲಿ ನಂಬಿಕೆ ಹುಟ್ಟಿಸಿದ್ದಾನೆ. ಇದೆಲ್ಲವನ್ನೂ ನೋಡಿದ ಮಹಿಳೆಯರು ತಮ್ಮ ಗಂಡಂದಿರಿಗೆ ಕಾಣದ ಹಾಗೆ ನಾಗರಾಜುಗೆ ಹಣವನ್ನು ತಂದು ಕೊಟ್ಟಿದ್ದಾರೆ. ನಂತರದ ದಿನಗಳಲ್ಲಿ ಈತ ಮಾಡುತ್ತಿರುವುದು ಮೋಸ ಎಂದು ತಿಳಿದು ಪ್ರಶ್ನಿಸ ತೊಡಗಿದ್ದಾರೆ. ತನ್ನ ಕೃತ್ಯ  ಬಯಲಾಗುತ್ತಿರುವುದನ್ನು ಅರಿತ ನಾಗರಾಜು ದ್ಯಾಪಸಂದ್ರ ಗ್ರಾಮದಿಂದ ಕಾಲ್ಕಿತ್ತಿದ್ದಾನೆ.  ಇದರಿಂದ ಗಾಬರಿಗೊಂಡ ಮಹಿಳೆಯರು ತಮ್ಮ ಗಂಡಂದಿರಿಗೆ ವಿಷಯ ತಿಳಿಸಿ ಕೆರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಡಿವೈಎಸ್ಪಿ ಲಕ್ಷ್ಮಿನಾರಾಯಣ ಪ್ರಸಾದ್, ಸಿಪಿಐ ಮಹೇಶ್, ಕೆರಗೋಡು ಠಾಣೆ ಪಿಎಸ್‌ಐ ದೀಕ್ಷಿತ್ ಅವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಿದರು. ಆರೋಪಿ ನಾಗರಾಜುವಿನ ಚಲನವಲನವನ್ನು ಪತ್ತೆ ಹಚ್ಚಿದ ತನಿಖಾ ತಂಡದ ಪೊಲೀಸ್ ಅಧಿಕಾರಿಗಳು ಉಡುಪಿಯಲ್ಲಿ ಆತನನ್ನು ಪತ್ತೆಹಚ್ಚಿ ಬಂಽಸಿ, ಮಂಡ್ಯಕ್ಕೆ ಕರೆತಂದು ವಿಚಾರಣೆ ನಡೆಸಲಾಗಿ ಕೋಟಿಗಟ್ಟಲೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ಆರೋಪಿ ನಾಗರಾಜು ಹಿನ್ನೆಲೆ: ಹುಣಸೂರಿನಲ್ಲಿ ಐಸ್ ಕ್ಯಾಂಡಿ ಮಾರುತ್ತಿದ್ದ ಆರೋಪಿ ನಾಗರಾಜು, ನಂತರದಲ್ಲಿ ಚಾಲಕನಾಗಿ ಟ್ರಾಕ್ಟರ್ ಇತರೆ ವಾಹನಗಳನ್ನು ಚಾಲನೆ ಮಾಡಿಕೊಂಡಿದ್ದನು. ತದನಂತರ ರೈಸ್ ಪುಲ್ಲಿಂಗ್ ಮಾಡುತ್ತಿದ್ದವರ ಸಂಪರ್ಕ ಪಡೆದು ಡ್ರೈವಿಂಗ್ ಕೆಲಸ ಬಿಟ್ಟು ರೈಸ್ ಪುಲ್ಲಿಂಗ್ ಮಾಡಲು ಕೋದಂಡರಾಮ ಎಂಬವರ ಜತೆ ಸೇರಿಕೊಂಡನು.

ಬಳಿಕ ದ್ಯಾಪಸಂದ್ರ ಗ್ರಾಮದ ರೈಸ್‌ಮಿಲ್‌ವೊಂದರಲ್ಲಿ ಕೆಲಸಕ್ಕೆ ಸೇರಿದ ನಾಗರಾಜು, ಜನರ ಸಂಪರ್ಕ ಗಿಟ್ಟಿಸಿ, ಹಳೇ ಪಾತ್ರೆ ಹಾಗೂ ದೇವರ ವಿಗ್ರಹ ತೋರಿಸಿ ಹಣ ದ್ವಿಗುಣಗೊಳಿಸುವುದಾಗಿ ಮಹಿಳೆಯರನ್ನು ಬಣ್ಣ ಬಣ್ಣದ ಮಾತುಗಳಿಂದ ಯಾಮಾರಿಸಿ ವಂಚನೆ ಮಾಡಿದ್ದಾನೆ.

“ನಾಗರಾಜು ಹಿಂದೆ ಕೋದಂಡರಾಮ ಎಂಬವರಜತೆ ಸೇರಿ ರೈಸ್ ಪುಲ್ಲಿಂಗ್ ಮಾಡಿ ಹಣ ಮಾಡುತ್ತಿದ್ದನು. ಬಳಿಕ ಹೆಚ್ಚಿನ ಹಣ ಮಾಡುವ ಉದ್ದೇಶದಿಂದ ಮೈಸೂರಿನಿಂದ ದೇವರ ವಿಗ್ರಹ ಹಾಗೂ ಹಿತ್ತಾಳೆಯ ಒಂದುತಂಬಿಗೆಯನ್ನು ತಂದು ಮಹಿಳೆಯರಿಗೆ ತೋರಿಸಿ,  ತಂಬಿಗೆಗೆ ಸಿಡಿಲು ಬಡಿದಿದೆ, ಇದಕ್ಕೆ ಹಣವನ್ನು ಹಾಕಿದರೆ ದ್ವಿಗುಣ ಆಗುತ್ತದೆ. ದೇವರ ವಿಗ್ರಹ ಮತ್ತು ಹಳೆಯ ಪಾತ್ರೆಯನ್ನು ದೇವಸ್ಥಾನಗಳಲ್ಲಿ ಇಟ್ಟು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಜನರನ್ನು ನಂಬಿಸಿದ್ದಾನೆ. ಹಣ ದ್ವಿಗುಣವಾಗುತ್ತದೆ ಎಂದು ನಂಬಿದ ಮಹಿಳೆಯರು ತಮ್ಮ ಗಂಡಂದಿರಿಗೆ ಗೊತ್ತಾಗದಂತೆ ಆರೋಪಿ ನಾಗರಾಜುಗೆ ಹಣ ನೀಡಿದ್ದಾರೆ. ಮಹಿಳೆಯರಿಂದ ಹಣ ಪಡೆದ ನಾಗರಾಜು ಅಲ್ಲಿಂದ ಕಾಲ್ಕಿತ್ತಿದ್ದ. ಉಡುಪಿಯಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ನಮ್ಮ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.” – ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ಅಧೀಕ್ಷಕ

Tags:
error: Content is protected !!