ಗುಂಡ್ಲುಪೇಟೆ : ಸಾಲ ಕಟ್ಟಿಲ್ಲ ಎಂದು ರೈತನ ಮನೆ ಜಪ್ತಿ ಮಾಡಿರುವ ಘಟನೆ ತಾಲ್ಲೂಕಿನ ಕಗ್ಗಳದಹುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಹುರ್ ಅಹಮದ್ ಎಂಬವರು ೪.೫೦ ಲಕ್ಷ ರೂ.ಗಳನ್ನು ಜನ ಬ್ಯಾಂಕ್ ಎಂಬ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ೭೨ ತಿಂಗಳ ಅವಧಿಯಲ್ಲಿ ತಿಂಗಳಿಗೆ ೧೧,೨೦೦ ರೂ. ಕಟ್ಟಲು ಒಪ್ಪಿ ಸಾಲ ಪಡೆದಿದ್ದರು.
ಆದರೆ ರೈತ ಜಹುರ್ ಅವರು ೩೦ ತಿಂಗಳು ಮಾಸಿಕ ಕಂತುಗಳನ್ನು ಕಟ್ಟಿದ್ದರು. ಆದರೆ ಅವರ ಅಣ್ಣನಿಗೆ ಅಪಘಾತವಾಗಿದ್ದರಿಂದ ಆಸ್ಪತ್ರೆಗೆ ಹಣ ಖರ್ಚಾಗಿತ್ತು. ಹೀಗಾಗಿ ಎಂಟು ತಿಂಗಳಿನಿಂದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ.
ಆದರೆ ಜನ ಬ್ಯಾಂಕ್‌ನವರು ಇನ್ನೂ ಕೂಡ ೭೨ ತಿಂಗಳು ಅವಧಿ ಮುಗಿಯದೇ ಇದ್ದರೂ ಕೂಡ ಕೇವಲ ಎಂಟು ತಿಂಗಳ ಕಂತು ಬಾಕಿ ಇದ್ದದ್ದನ್ನೇ ಗುರಿಯಾಗಿಸಿ, ಕೋರ್ಟಿಗೆ ಹೋಗಿ ಅನುಮತಿಯನ್ನು ಪಡೆದುಕೊಂಡು ಪೊಲೀಸರ ಭದ್ರತೆಯೊಂದಿಗೆ ರೈತನ ವಾಸದ ಮನೆಗೆ ಬೀಗ ಜಡಿದಿದ್ದಾರೆ.
ಏಕಾಏಕಿ ಮನೆಗೆ ಬೀಗ ಜಡಿದಿರುವುದು ಸರಿಯಲ್ಲ. ರೈತನಿಗೆ ಕಾಲಾವಕಾಶ ನೀಡಬೇಕಿತ್ತು ಎಂದು ರೈತ ಮುಖಂಡ ಕಡಬೂರು ಮಂಜುನಾಥ್ ತಿಳಿಸಿದ್ದಾರೆ.
ಆಶ್ಚರ್ಯಕರ ಸಂಗತಿ ಎಂದರೆ ರೈತನಿಗೆ ಇವತ್ತಿನವರೆಗೆ ಯಾವುದೇ ನೋಟಿಸ್ ಕೂಡ ನೀಡಿಲ್ಲ. ನೋಟಿಸ್ ಕೊಟ್ಟಿಲ್ಲವೆಂದು ಕೇಳಿದರೆ ಪತ್ರಿಕೆಯಲ್ಲಿ ಹಾಕಿಸಿದ್ದೇವೆ ಎಂದು ಹೇಳುತ್ತಾರೆ ಎನ್ನುವುದು ರೈತರ ಅಳಲು.
ಕಾನೂನಿನಲ್ಲಿ ಅವಧಿಗೂ ಮೊದಲು ಕಂತು ಕಟ್ಟುವ ವ್ಯವಸ್ಥೆ ಎಲ್ಲಿದೆ? ಅವಧಿಗೂ ಮುನ್ನ ೭೨ ತಿಂಗಳು ಮುಗಿಯದೆ ಮನೆಗೆ ಬೀಗ ಜಡಿಯಲು ಯಾವ ಕಾನೂನು ಇದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅನ್ಯಾಯದ ವಿರುದ್ಧ ಮತ್ತು ಸರ್ಕಾರದ ವಿರುದ್ಧ ಯಾರೇ ಹೋರಾಟ ಮಾಡುವಂತಹ ಸಂದರ್ಭದಲ್ಲಿ ನಮ್ಮೊಂದಿಗೆ ನ್ಯಾಯಾಲಯವಿದೆ ಎಂಬ ನಂಬಿಕೆ ಅಗಾಧವಾಗಿರುತ್ತದೆ, ಆದರೆ ನ್ಯಾಯಾಲಯ ೭೨ ತಿಂಗಳವರೆಗೆ ಕಾಯದೆ, ಇನ್ನೂ ೪೦ ಕಂತು ಬಾಕಿ ಇದ್ದರೂ ಜನ ಬ್ಯಾಂಕ್ ಪರವಾಗಿ ನಿಂತು, ಮನೆಗೆ ಬೀಗ ಜಡಿಸಿರುವುದು ಸರಿಯಲ್ಲ. – ಕಡಬೂರು ಮಂಜುನಾಥ್, ರೈತ ಮುಖಂಡ





