ನವದೆಹಲಿ: ಮುಂಬೈ ದಾಳಿಯ ಪ್ರಮುಖ ಸಂಚುರೋರರಲ್ಲಿ ಒಬ್ಬನಾದ ತಹವ್ವೂರ್ ಹುಸೇನ್ ರಾಣಾ 2008ರ ಕೃತ್ಯದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ. ನಾನು ಪಾಕಿಸ್ತಾನಿ ಸೇನೆಯ ವಿಶ್ವಾಸಾರ್ಹ ಏಜೆಂಟ್ ಎಂದು ಹೇಳಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ದೆಹಲಿಯ ತಿಹಾರ್ ಜೈಲಿನಲ್ಲಿ ರಾಷ್ಟ್ರೀಯ ತನಿಖಾ ದಳದ ವಶದಲ್ಲಿರುವ ರಾಣಾನನ್ನು ಮುಂಬೈ ಕ್ರೈಂ ಬ್ರ್ಯಾಂಚ್ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ ಮುಂಬೈನಲ್ಲಿ ತನ್ನ ಸಂಸ್ಥೆಯ ವಲಸೆ ಕೇಂದ್ರವನ್ನು ತೆರೆಯುವ ಆಲೋಚನೆ ಇತ್ತು. ಮುಂಬೈ ದಾಳಿಯ ಸಮಯದಲ್ಲಿ ತಾನು ಮುಂಬೈನಲ್ಲಿದ್ದೆ ಹಾಗೂ ಅದು ಭಯೋತ್ಪಾದಕರ ಯೋಜನೆಯ ಭಾಗವಾಗಿತ್ತು ಎಂದು ಹೇಳಿದ್ದಾನೆ.
ದಾಳಿಗೂ ಮುನ್ನವೇ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ನಂತಹ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದೆ. ದಾಳಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ ಸಹಯೋಗದೊಂದಿಗೆ ನಡೆಸಲಾಗಿದೆ ಎಂದು ರಾಣಾ ತಪ್ಪೊಪ್ಪಿಕೊಂಡಿದ್ದಾನೆ.





