ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಎಚ್.ಡಿ.ಕೋಟೆ ಜಾಗ ಒತ್ತುವರಿ ವಿಚಾರ ಪ್ರತಿಧ್ವನಿಸಿದೆ.
ಮೈಸೂರಿನ ಜಿಲ್ಲಾ ಸಭಾಂಗಣದಲ್ಲಿಂದು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಎಚ್.ಡಿ.ಕೋಟೆಯ ನಿವೃತ್ತ ಇನ್ಸ್‌ಪೆಕ್ಟರ್ ಎಸ್.ದೊರೆಸ್ವಾಮಿ ಅವರು ಸಚಿವರಿಗೆ ದೂರು ನೀಡಿದರು.
ದೂರಿನಲ್ಲಿ ಕೆರೆ ಒತ್ತುವರಿ ಪ್ರಸ್ತಾಪ ಮಾಡಿದ ಅವರು, ಎಚ್.ಡಿ.ಕೋಟೆ ಹಾಗೂ ಸುತ್ತಮುತ್ತಲು ಅನೇಕ ಜಾಗಗಳು ಒತ್ತುವರಿಯಾಗಿದೆ. ಅನೇಕ ರೆಸಾರ್ಟ್‌ಗಳು ಹಾಗೂ ಬಾರ್‌ಗಳು ಪ್ರಾರಂಭವಾಗಿದೆ. ಎಚ್.ಡಿ.ಕೋಟೆಯ ಕೆರೆಯಲ್ಲಿ ಮಳಿಗೆಗಳು ಹಾಗೂ ಕಾಂಗ್ರೆಸ್ ಪಕ್ಷದ ಕಚೇರಿ ಕೂಡ ನಿರ್ಮಾಣವಾಗಿದೆ. ಈ ಹಿಂದೆ ಪ್ರಾಮಾಣಿಕ ಹಾಗೂ ದಕ್ಷ ಐಪಿಎಸ್ ಅಧಿಕಾರಿ ಹರ್ಷಗುಪ್ತ ಸ್ಥಳಕ್ಕೆ ಭೇಟಿ ನೀಡಿ ಸರ್ವೇಗೆ ಮುಂದಾಗಿದ್ದರು. ಅವರ ವರ್ಗಾವಣೆ ನಂತರ ಅದು ಮುಂದುವರಿಯಲಿಲ್ಲ. ಯಾವ ಅಧಿಕಾರಿಗೆ ದೂರು ನೀಡಿದರೂ ಕ್ರಮವಹಿಸುತ್ತಿಲ್ಲ. ಹರ್ಷಗುಪ್ತರಂತಹ ಮತ್ತೊಬ್ಬ ಪ್ರಾಮಾಣಿಕ ಅಧಿಕಾರಿ ಇಲ್ಲಿಯವರೆಗೂ ಜಿಲ್ಲೆಗೆ ಬಂದಿಲ್ಲ ಎಂದು ಹಾಲಿ ಜಿಲ್ಲಾಧಿಕಾರಿ ಮುಂದೆಯೇ ಸಮಸ್ಯೆ ಹೇಳಿಕೊಂಡರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸರ್ವೇ ನಡೆಸಿ. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದರು.





