ಮೈಸೂರು: ರಾತ್ರೋರಾತ್ರಿ ದುಷ್ಕರ್ಮಿಗಳು 4 ಸಾವಿರಕ್ಕೂ ಹೆಚ್ಚಿನ ಟೊಮ್ಯಾಟೋ ಗಿಡಗಳನ್ನು ನಾಶ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಬಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಾದೇಗೌಡ ಎಂಬುವವರು ಅರ್ಧ ಎಕರೆ ಜಮೀನಿನಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚಿನ ಟೊಮ್ಯಾಟೋ ಗಿಡಗಳನ್ನು ನಾಟಿ ಮಾಡಿದ್ದರು.
ಇದಕ್ಕಾಗಿಯೇ ಸುಮಾರು 2 ಲಕ್ಷ ಹಣವನ್ನು ಸಹ ಖರ್ಚು ಮಾಡಿದ್ದರು. ಟೊಮ್ಯಾಟೋ ಬೆಳೆ ಕಟಾವಿಗೆ ಬಂದಿದ್ದ ವೇಳೆ ರಾತ್ರೋರಾತ್ರಿ ಕಿಡಿಗೇಡಿಗಳು ಗಿಡಗಳನ್ನು ಕಿತ್ತು ನಾಶಮಾಡಿದ್ದಾರೆ.
ಬೆಳಿಗ್ಗೆ ಜಮೀನಿಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ರೈತ ಮಾದೇಗೌಡ ತೀವ್ರ ಕಂಗಾಲಾಗಿದ್ದಾರೆ. ಘಟನೆ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.





