Mysore
27
broken clouds

Social Media

ಸೋಮವಾರ, 27 ಏಪ್ರಿಲ 2026
Light
Dark

ಉದ್ದೇಶ ಪೂರ್ವಕ ಅಲ್ಲ, ಆಡು ಭಾಷೆಯ ಮಾತು : ರಮೇಶ್‌ ಬಂಡಿಸಿದ್ದೇಗೌಡ ಸ್ಪಷ್ಟನೆ 

ಮೈಸೂರು : ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ತಾನು ಆಡಿರುವ ಮಾತುಗಳು ಉದ್ದೇಶಪೂರ್ವಕ ಅಲ್ಲ. ಆಡು ಭಾಷೆಯಲ್ಲಿ ಮಾತಾಡಿದ್ದೇನೆ. ನನ್ನ ಮಾತುಗಳಿಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದು, ಇದನ್ನು ಬೆಳೆಸುವುದು ಬೇಡ ಎಂದು ಸೆಸ್ಕ್ ಅಧ್ಯಕ್ಷರೂ ಆದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಸ್ಪಷ್ಟನೆ ನೀಡಿದರು.

ಕಾಮಗಾರಿ ಚಾಲನೆ ವೇಳೆ ತರೀಪುರ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡಾಗ ಅಧಿಕಾರಿಗಳಿಗೆ ಎಚ್ಚರಿಕೆ ಕೊಡುವಾಗ ಆಡು ಭಾಷೆಯಲ್ಲಿ ಮಾತಾಡಿರುವೆ. ಅಧಿಕಾರಿಗೆ ಬೆದರಿಕೆಯನ್ನೂ ಹಾಕಿಲ್ಲ. ಇನ್ನೊಂದು ಧರ್ಮ ಮತ್ತು ಜಾತಿಯ ಬಗ್ಗೆ ಎಂದೂ ಮಾತಾಡಿಲ್ಲ. ತಮ್ಮ ಕ್ಷೇತ್ರದಲ್ಲಿ ಕಾಲದಿಂದಲೂ ಸೌಹಾರ್ದವಾಗಿ ಇದ್ದೇವೆ ಎಂದು ಹೇಳಿದರು.

ಮುಸ್ಲಿಂ ಮುಖಂಡರು, ಎಸ್‌ಡಿಪಿಐ ಕಾರ್ಯಕರ್ತರಲ್ಲಿ ಕಳಕಳಿಯಿಂದ ಮನವಿ ಮಾಡುತ್ತೇನೆ. ಇದನ್ನು ಮುಂದುವರಿಸುವುದು ಬೇಡ. ತಮ್ಮ ಕ್ಷೇತ್ರದಲ್ಲಿ ಮೊದಲಿಂದಲೂ ಮುಸ್ಲಿಂ ಜನಾಂಗದವರೊಂದಿಗೆ ಚೆನ್ನಾಗಿದ್ದೇವೆ. ಅವರ ಎಲ್ಲ ಅಭಿವೃದ್ಧಿ ಕೆಲಸಗಳಿಗೂ ಒತ್ತಾಸೆಯಾಗಿದ್ದೇನೆ. ರಾಜಕಾರಣದ ಹೊರತಾಗಿ ಇದನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ನಮ್ಮ 40 ವರ್ಷದ ರಾಜಕಾರಣದಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಒಂದೇ ಒಂದು ಕೋಮು ಗಲಭೆ ಅಥವಾ ಜಾತಿ ಸಂಘರ್ಷ ಆಗಿಲ್ಲ. ಜನರ ವಿಶ್ವಾಸ ಗಳಿಸಿಕೊಂಡು ಕೆಲಸ ಮಾಡುತ್ತ ಬಂದಿದ್ದೇವೆ. ಸಂವಿಧಾನ ಬದ್ಧವಾಗಿ ನಮ್ಮ ಕೆಲಸ ಮುಂದುವರಿಯಲಿದೆ. ಯಾರಿಗೂ ನೋವುಂಟು ಮಾಡುವುದು ನಮ್ಮ ಉದ್ದೇಶ ಇಲ್ಲ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:
error: Content is protected !!