Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಕಸ ವಿಲೇವಾರಿ: ಅನೈರ್ಮಲ್ಯ ಭೀತಿ

ಪಿ.ಶಿವಕುಮಾರ್

ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ಕಾರ್ಯವೈಖರಿಗೆ ಗ್ರಾಮಸ್ಥರ ಆಕ್ರೋಶ 

ದೊಡ್ಡ ಕವಲಂದೆ: ಚಾಮರಾಜನಗರ, ನಂಜನಗೂಡು, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಂಚರಿಸುವ ಸಾವಿರಾರು ವಾಹನಗಳು ಮತ್ತು ಪ್ರಯಾಣಿಕರಿಗೆ ರಸ್ತೆಯ ಬದಿಯಲ್ಲಿ ಬಿದ್ದಿರುವ ಕಸದ ರಾಶಿ ಸ್ವಾಗತ ಕೋರುತ್ತಿದೆ.

ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ೧೫೦ರಲ್ಲಿ ಬರುವ ರಸ್ತೆಯಲ್ಲಿ ಕಸದ ಕಿರಿಕಿರಿ ಉಂಟಾಗಿದೆ.

ದೊಡ್ಡ ಕವಲಂದೆ ಗ್ರಾಮ ಪಂಚಾಯಿತಿಯಕಸ ವಿಲೇವಾರಿ ವಾಹನದಿಂದ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಸ ಹಾಕಲಾಗುತ್ತಿದೆ. ಅಲ್ಲದೆ ಕವಲಂದೆ ಗ್ರಾಮದಿಂದ ಚುಂಚನಹಳ್ಳಿ, ಉಮ್ಮತ್ತೂರು , ಕೊಳ್ಳೇಗಾಲ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟಕ್ಕೆ ತೆರಳುವ ಮುಖ್ಯರಸ್ತೆಯಲ್ಲೂ ಕವಲಂದೆ ಗ್ರಾಪಂನ ಕಸದ ವಾಹನದ ಚಾಲಕ ರಸ್ತೆಯ ಎರಡು ಬದಿಯಲ್ಲಿ ಕಸ ಸುರಿದು ಹೋಗುತ್ತಿದ್ದಾನೆ. ಇನ್ನು ದೊಡ್ಡ ಕವಲಂದೆ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಂಭಾಗದಲ್ಲೂ ಕಸವನ್ನು ಸುರಿಯಲಾಗುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ರಸ್ತೆಗಳ ಅಂಚಿನಲ್ಲಿ ಅಪಾಯಕಾರಿ ತ್ಯಾಜ್ಯವನ್ನು ಬೀಸಾಡುವುದಲ್ಲದೆ ಅದಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ರಸ್ತೆಗೆ ದಟ್ಟ ಹೊಗೆ ಆವರಿಸಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲದೆ ಕಸದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸೇರಿ ವಿಷಕಾರಕ ವಸ್ತುಗಳನ್ನು ಸುಡುವುದರಿಂದ ಬರುವ ಹೊಗೆಯಿಂದ ಅಸ್ತಮಾ ಮತ್ತು ಶ್ವಾಸಕೋಶ ಕಾಯಿಲೆ ಇರುವ ರೋಗಿಗಳಿಗೆ ಕಂಟಕ ಎದುರಾಗಿದೆ. ದೊಡ್ಡ ಕವಲಂದೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಸ ವಿಲೇವಾರಿ ಘಟಕ ಮಾಡದೆ ರಸ್ತೆಗಳ ಬದಿಯಲ್ಲಿ ಕಸವನ್ನು ವಿಲೇವಾರಿ ಮಾಡಲಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕಸ ವಿಲೇವಾರಿ ಮಾಡುತ್ತಿರುವ ವಾಹನದ ಚಾಲಕ ಮತ್ತು ಗ್ರಾಮ ಪಂಚಾಯಿತಿ ಅಽಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

” ಹೆದ್ದಾರಿಯ ಬದಿಗಳಲ್ಲಿ ಕಸ ವಿಲೇವಾರಿ ಮಾಡಬಾರದು. ಜಾಗದ ಸಮಸ್ಯೆ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕಗಳು ಇಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ತಾತ್ಕಾಲಿಕವಾಗಿ ಕಸ ವಿಲೇವಾರಿ ಘಟಕ ನಿರ್ಮಿಸಿ, ಕಸ ವಿಲೇವಾರಿ ಮಾಡಬೇಕು. ಈ ಬಗ್ಗೆ ಪಿಡಿಒ ಜೊತೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು.”

-ಜೆರಾಲ್ಡ್ ರಾಜೇಶ್, ತಾಪಂ ಇಒ, ನಂಜನಗೂಡು.

”  ಹೆದ್ದಾರಿಯ ಎರಡೂ ಬದಿಯಲ್ಲೂ ಕಸ ವಿಲೇವಾರಿ ಮಾಡಲಾಗುತ್ತಿದ್ದು, ಇದರಿಂದ ನಮ್ಮ ಗ್ರಾಮೀಣ ಭಾಗದ ಸೌಂದರ್ಯ ಹಾಳಾಗುತ್ತಿದೆ. ದೊಡ್ಡ ಕವಲಂದೆ ಗ್ರಾಪಂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸಂಗ್ರಹಿಸಿದ ಕಸವನ್ನು ವಿಲೇವಾರಿ ಘಟಕದಲ್ಲಿಯೇ ವಿಲೇವಾರಿ ಮಾಡಬೇಕು ಎಂಬ ನಿಯಮ ಇದ್ದರೂ ಇದನ್ನು ಗಾಳಿಗೆ ತೂರಿ, ನಂಜನಗೂಡು ಮತ್ತು ಚಾ.ನಗರ ರಾಷ್ಟ್ರೀಯ ಹೆದ್ದಾರಿ ಹಾಗೂ ಚುಂಚನಹಳ್ಳಿ ರಸ್ತೆ, ಸರ್ಕಾರಿ ಕಾಲೇಜಿನ ಮುಂಭಾಗದಲ್ಲೂ ಕಸ ಸುರಿಯಲಾಗುತ್ತಿದೆ. ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.”

-ಗಟ್ಟವಾಡಿ ಮಹೇಶ್, ದಸಂಸ ತಾಲ್ಲೂಕು ಸಂಚಾಲಕ

Tags:
error: Content is protected !!