Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಗಂಡಸರಿಲ್ಲದೆ ಹೊರಗೆ ಬರಲೇಬಾರದೆ?

ಡಾ. ಸುಕನ್ಯಾ ಕನಾರಳ್ಳಿ

ಒಮ್ಮೆ ಬೆಳ್ಳಂಬೆಳಿಗ್ಗೆಯೇ ಚಾಮುಂಡಿಬೆಟ್ಟ ಹತ್ತಲೆಂದು ನಾಲ್ಕೂವರೆಗೆ ಮನೆ ಬಿಟ್ಟೆ. ಅರೆ! ಕಣ್ಣೆದುರು ಚಾಚಿಕೊಂಡಿದ್ದ ಕೆಆರ್‌ಎಸ್ ರಸ್ತೆಯ ಉಬ್ಬುತಗ್ಗು ಹಗಲು ಹೊತ್ತಿನಲ್ಲಿ ಕಾಣಿಸುವುದೇ ಇಲ್ಲವೇ ಎಂದು ಅಚ್ಚರಿಪಡುತ್ತಾ ಅದನ್ನೇ ನೋಡುತ್ತಿದ್ದಾಗ ಮುಂದೆ ಹೋಗುತ್ತಿದ್ದ ಎರಡು ಚಕ್ರಗಳ ಗಾಡಿಯೊಂದು ತಗ್ಗಿನಲ್ಲಿ ಹಿಡಿತ ತಪ್ಪಿ ರೊಯ್ಯನೆ ಹೋಗಿ ಸ್ವಲ್ಪ ಸಮನಾದ ರಸ್ತೆಯನ್ನು ತಲುಪಿದ ತಕ್ಷಣ ಉರುಳಿ ಪಕ್ಕಕ್ಕೆ ಬಿತ್ತು. ಬಿದ್ದ ಶಬ್ದಕ್ಕೆ ಸ್ವಲ್ಪ ಮುಂದೆ ಹೋಗುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನ ನಿಂತು ಅಪ್ಪ ಮಗಳು ಎತ್ತಲು ಹಿಂದಕ್ಕೆ ಓಡಿ ಬಂದರು. ಅಷ್ಟೊತ್ತಿಗೆ ಕಾರನ್ನು ಪಕ್ಕಕ್ಕೆ ನಿಲ್ಲಿಸಿ ನಾನೂ ಇಳಿದೆ.

ಆ ಅಪ್ಪ-ಗಂಡಸು ಬಿದ್ದ ಚಾಲಕ-ಹೆಂಗಸನ್ನು ಎತ್ತಿ ನಿಲ್ಲಿಸಿ ಬೈಗುಳ ಬುದ್ಧಿವಾದ ಎರಡನ್ನೂ ಬೆರೆಸಿ ಬಡಬಡಿಸುತ್ತಿದ್ದರು. ‘ಏನಮ್ಮಾ, ಗಾಡಿ ಓಡಿಸೋದು ಕಲಿಯೋದಕ್ಕೆ ಇಷ್ಟೊತ್ತಿನಲ್ಲಿ, ಮೇನ್ ರಸ್ತೆಯಲ್ಲಿ, ಜೊತೆಯಲ್ಲಿ ಗಂಡಸರೂ ಇಲ್ಲದೇ ಒಬ್ಬರೇ ಬಂದಿದ್ದಿರಲ್ಲಾ, ಏನು ಹೇಳಬೇಕು ನಿಮಗೆ?’ ಅಯ್ಯಮ್ಮ!

‘ಕಲೀಬೇಕಂದ್ರೆ ಇದೇ ಸರಿಯಾದ ಹೊತ್ತು ತಾನೆ? ಈ ಹೊತ್ತಿನಲ್ಲಿ ಮೇನ್ ರಸ್ತೆನೇ ಸೇಫ್ ಅಲ್ವಾ? ಇಷ್ಟೊತ್ತಿನಲ್ಲಿ ಮನೆಯಲ್ಲಿರುವ ಗಂಡಸರು ಗೊರಕೆ ಹೊಡಿಯೋದು ಬಿಟ್ಟು ಅವರ ಜೊತೆ ಬರುತ್ತಾರೆ ಅಂತ ಅಂದುಕೊಂಡಿದ್ದಿರಾ?’ ಎಂದು ಕೇಳಿದೆ. ಆ ಅಪ್ಪ-ಗಂಡಸು ಒಂದು ಗಳಿಗೆ ನನ್ನ ಮುಖವನ್ನೇ ದಿಟ್ಟಿಸಿ ನೋಡಿದರು. ‘ಏನೋ ಅವರ ಒಳ್ಳೇದಕ್ಕೇ ಹೇಳಿದೆ …’ ನಿಮ್ಮ ಒಳ್ಳೇದಕ್ಕೇ ಅಂತ ಹೇಳುತ್ತಲೇ ಹೆಂಗಸರನ್ನು ಮನೆಯಲ್ಲಿ ಕೂರಿಸುವ ಸಂಪ್ರದಾಯ ಮತ್ತು ಪ್ರಭುತ್ವ ನಮ್ಮದು ಅಂತ ಅಂದುಕೊಳ್ಳುತ್ತಾ ಹಣೆ ಕೈಗಳನ್ನು ತರಚಿಕೊಂಡಿದ್ದ ಆ ಹೆಂಗಸಿಗೆ ಆಸ್ಪತ್ರೆಗೆ ಹೋಗೋಣ ಬನ್ನಿ, ಇಲ್ಲೇ ಹತ್ತಿರವಿದೆ ಎಂದು ಕರೆದೆ. ‘ಹಣೆ ತರಚಿದೆ, ಕಲೆ ಉಳಿದುಬಿಡುತ್ತೆ, ಹೊಸ ಗಾಡಿಯೂ ತರಚಿದೆ, ಮನೇಲಿ ಬೈಗುಳ ಗ್ಯಾರಂಟಿ…’ ಎಂದು ಗಲಿಬಿಲಿಯಲ್ಲಿ ಬಡಬಡಿಸುತ್ತಿದ್ದ ಹೆಂಗಸು ಇನ್ನು ಸ್ವಲ್ಪ ಹೊತ್ತಿಗೆ ಕೆಲಸಕ್ಕೆ ಹೋಗಬೇಕಿದ್ದರಿಂದ ‘ಗಾಡಿಯನ್ನು ಆ ರಸ್ತೆಯ ಬದಿಗೆ ತಿರುಗಿಸಿ ಕೊಡಿ ಸಾಕು,’ ಅಂತ ಹೇಳಿದ್ದಕ್ಕೆ ಸರಿಯೆಂದು ಸುಮ್ಮನಾದೆ.

ವರುಷಗಳ ಹಿಂದೆ ಒಮ್ಮೆ ಬೆಳಕು ಹರಿಯುವಾಗ ಲಾಲ್‌ಬಾಗಿನಲ್ಲಿ ಕೆರೆಯ ಸುತ್ತಲೂ ನಡೆಯುತ್ತಿದ್ದೆ. ಒಬ್ಬ ಹೆಂಗಸು ಮತ್ತು ಇಬ್ಬರು ಮೂವರು ಗಂಡಸರು ನಿಂತಿದ್ದು ಕಾಣಿಸಿತು. ಆಕೆಯ ಚಿನ್ನದ ಸರವನ್ನು ಯಾರೋ ಒಬ್ಬ ಲಪಟಾಯಿಸಿ ಪರಾರಿಯಾಗಿದ್ದ. ಬೆಚ್ಚಿ ಬಿದ್ದು ನಿಂತಿದ್ದ ಹೆಂಗಸಿಗೆ ಧಾರಾಳವಾಗಿ ಉಪದೇಶ ನಡೆಯುತ್ತಿತ್ತು. ‘ಏನಮ್ಮಾ ನೀವು, ಚಿನ್ನ ಹಾಕಿಕೊಂಡು ಬಂದದ್ದು ಮೊದಲ ತಪ್ಪು. ಯಾರೂ ಗಂಡಸರು ಜೊತೆಯಿಲ್ಲದೆ ಬಂದದ್ದು ಎರಡನೆಯ ತಪ್ಪು. ಸ್ವಲ್ಪ ಬೆಳಕು ಚೆನ್ನಾಗಿ ಹರಿದ ಮೇಲಾದರೂ ಬರಬಾರದೇ?’ ಗಂಡಸಿಲ್ಲದ ಹೆಂಗಸನ್ನು ನೋಡಿದರೆ ಅದಾವ ವಿಚಿತ್ರ ರೀತಿಯ ಅಭದ್ರತೆಯ ಭಾವನೆಯೋ ಈ ಗಂಡಸರಿಗೆ ಎಂದು ಯೋಚಿಸುವಂತಾಯಿತು. ಬಾಯಿಂದ ಬರುವ ಮೊದಲ ಮಾತೇ ಅದು! ಈ ಶತಮಾನದ ಇಪ್ಪತ್ತೊಂದನೆಯ ಇಸವಿ. ಕೋವಿಡ್ ಎರಡನೆಯ ಬಾರಿ ಬಂದು ಹೊಡೆದಿದ್ದರೂ ಏನೋ ಅನಿವಾರ್ಯ ಕಾರಣಗಳಿಂದ ಇಂಡಿಯಾಗೆ ನಾನು ಹಿಂತಿರುಗಬೇಕಿತ್ತು. ಎಲ್ಲೊ ಅಲ್ಲಿ ಇಲ್ಲಿ ಒಂದು ವಿಮಾನ ಹೊರಡುತ್ತಿತ್ತು. ಎರಡೂ ಸರ್ಕಾರಗಳಿಗೆ ಸಲ್ಲಿಸಬೇಕಿದ್ದ ಹಲವಾರು ದಾಖಲೆಗಳನ್ನು ತರಾತುರಿಯಲ್ಲಿ ಹೊಂದಿಸಿದರೂ ಯಾವುದೋ ಒಂದನ್ನು ಕಂಪ್ರೆಸ್ ಮಾಡುವುದು ಗಮನಕ್ಕೆ ಬಾರದೆ ತಪ್ಪಿಸಿಕೊಂಡಿತ್ತು. ಸಾಲಿನಲ್ಲಿ ಕಾಯುತ್ತಾ ನಿಂತಾಗ ಅರಿವಾಗಿ ಈಗೇನು ಎಂದು ಆತಂಕದಿಂದ ಸುಮ್ಮನೆ ನಿಂತೆ.

ಇಡೀ ವಿಮಾನ ನಿಲ್ದಾಣ ಖಾಲಿ ಖಾಲಿ. ಕೆಲವೇ ಮಂದಿ ಅಧಿಕಾರಿಗಳು ಮೇಲಿನ ಅಂತಸ್ತಿನಲ್ಲಿ ಇದ್ದರು. ಆ ಯಾನದ ನಿರ್ವಹಣೆಗೆ ಒಬ್ಬ ವಿಶೇಷ ಭಾರತೀಯ ಅಧಿಕಾರಿ ನಿಯಮಿಸಲ್ಪಟ್ಟಿದ್ದ. ಪ್ರತಿಯೊಬ್ಬರ ದಾಖಲೆಗಳನ್ನು ಪರೀಕ್ಷಿಸುತ್ತಾ ಬಂದಾಗ ನನ್ನ ಸರದಿ ಬಂತು. ಒಂದು ದಾಖಲೆ ಮಿಸ್ಸಿಂಗ್ ಅಂತ ಗೊತ್ತಾದ ತಕ್ಷಣ ಅವನ ಮುಖ ವಿಕಾರವಾಯಿತು. ಇಷ್ಟಕ್ಕೂ ಅದು ಇರಲಿಲ್ಲ ಅಂತ ಅಲ್ಲ. ಕಂಪ್ರೆಸ್ ಆಗಿರಲಿಲ್ಲ ಅಷ್ಟೆ. ಆತ ಕಿರುಚಾಡಲಾರಂಭಿಸಿದಾಗ ಖಾಲಿ ನಿಲ್ದಾಣದಲ್ಲಿ ಪ್ರತಿಧ್ವನಿ ರಪರಪನೆ ಹೊಡೆಯ ಹತ್ತಿ ಮೇಲಿನ ಅಧಿಕಾರಿಗಳು ಕೆಳಗಿಳಿದು ಬಂದಿದ್ದರು.

‘ಆ ದಾಖಲೆ ಬೇಕೇ ಬೇಕು ಅಂತ ವೆಬ್ ಸೈಟಿನಲ್ಲಿ ಬರೆದಿರುವುದು ಅರ್ಥವಾಗಲಿಲ್ಲವಾ? ಮನೆಯಲ್ಲಿ ಯಾರೂ ಗಂಡಸರಿಲ್ಲವಾ? ಪಕ್ಕಕ್ಕೆ ಸರಿದು ನಿಲ್ಲಿ. ವಿಮಾನ ನಿಮ್ಮನ್ನು ಬಿಟ್ಟು ಹೊರಡುತ್ತದೆ!’ ಅರೆಕ್ಷಣ ನನಗೆ ಮಾತೆ ಹೊರಡಲಿಲ್ಲ. ಒಬ್ಬ ವಿಶೇಷ ಅಧಿಕಾರಿಯಿಂದ ಈ ತರಹದ ದುರ್ವರ್ತನೆ!!!

ನನ್ನನ್ನು ದಾಟಿಕೊಂಡು ಇನ್ನೊಬ್ಬರ ದಾಖಲೆಗಳನ್ನು ಆತ ನೋಡುವ ಹೊತ್ತಿಗೆ ನನಗೆ ಹೋದಉಸಿರು ಮರಳಿ ಬಂದಿತ್ತು. ಆತನ ಭುಜವನ್ನು ತಟ್ಟಿ ಹಿಂತಿರುಗಿ ನೋಡುವಂತೆ ಮಾಡಿದೆ. ‘ನಿಮಗೆ ಅಷ್ಟಿಷ್ಟಾದರೂ ಮರ್ಯಾದೆ ಎನ್ನುವುದು ಇದೆಯಾ? ಜನರೊಂದಿಗೆ ಹೇಗೆ ವರ್ತಿಸಬೇಕು ಎನ್ನುವುದರ ಬಗ್ಗೆ ತರಬೇತಿ ಕೊಟ್ಟೇ ಇಲ್ಲವಾ? ಅದರಲ್ಲೂ ಹೆಂಗಸರ ಜೊತೆ ಹೇಗೆ ವರ್ತಿಸಬೇಕು ಅಂತ ತಿಳಿದೆ ಇಲ್ಲವಾ? ಈ ವಿಷಮ ಪರಿಸ್ಥಿತಿಯಲ್ಲಿ ಪ್ರಯಾಣಿಸಲೇಬೇಕಾದ ಅನಿವಾರ್ಯಕ್ಕೆ ಸಿಕ್ಕಿದ ನಮ್ಮ ತಲ್ಲಣ ತಳಮಳಗಳ ಅರಿವು ಸ್ವಲ್ಪವಾದರೂ ಇದೆಯಾ? ಇಷ್ಟಕ್ಕೂ ‘ಮನೆಯಲ್ಲಿ ಗಂಡಸರಿಲ್ಲವಾ?’ ಅಂತ ಕೇಳಲು ನಾಚಿಕೆಯಾಗುವುದಿಲ್ಲವಾ? ಆ ತರಹದ ತಾರತಮ್ಯ ಮಾಡುವ ಹೇಳಿಕೆ ಒಂದು ಅಫಿಶಿಯಲ್ ಅಪರಾಧ ಅಂತನಾದ್ರೂ ಗೊತ್ತಿದೆಯಾ? ಅದರ ಬಗ್ಗೆ ನಿಮ್ಮ ಮತ್ತು ಈ ದೇಶದ ಅಧಿಕಾರಿಗಳಿಗೆ ದೂರೊಂದನ್ನು ಒಗೆಯುತ್ತೇನೆ. ನಿಮ್ಮ ಕೆಲಸ ಉಳಿಸಿಕೊಳ್ಳಿ ನೋಡೋಣ. ವಿಮಾನ ನನ್ನನ್ನು ಬಿಟ್ಟು ಹೊರಡುತ್ತದೆ ಎಂದು ಮಕ್ಕಳನ್ನು ಹೆದರಿಸುವಂತೆ ಮಾತನಾಡಲು ನಾಚಿಕೆಯಾಗಬೇಕು ನಿಮಗೆ! ಒಮ್ಮೆ ಪ್ರಯತ್ನಿಸಿ ನೋಡಿ!’

ನನ್ನ ಕೋಪ ಮತ್ತು ಗಂಟಲ ಶಕ್ತಿಗೆ ಪ್ರತಿಧ್ವನಿಯ ಶಕ್ತಿಯೂ ದುಪ್ಪಟ್ಟಾಗಿತ್ತು. ಮೆಟ್ಟಿಲ ಮೇಲೆ ನಿಂತು ನೋಡುತ್ತಿದ್ದ ಆ ದೇಶದ ಅಧಿಕಾರಿಗಳ ಮುಖದ ಮೇಲೆ ಭೇಷ್ ಭಾವ ಒಡೆದು ಮೂಡಿತ್ತು. ಈಗ ಬ್ಬೆಬ್ಬೆಬ್ಬೆ ಸರದಿ ಆತನದು. ಮೆಲ್ಲಗಿನ ದನಿಯಲ್ಲಿ ‘ಹೀಗೆ ಕೋಪ ಮಾಡಿಕೊಂಡರೆ ಹೇಗೆ? ಇಂಡಿಯನ್ಸ್ ಹೇಗೆ ಜಗಳವಾಡುತ್ತಾರೆ ನೋಡಿ ಅಂತ ಅವರೆಲ್ಲ ಅಂದುಕೊಳ್ಳುವುದಿಲ್ಲವಾ?’ ನನ್ನ ಭುಜದ ಮೇಲಿದ್ದ ಆತನ ಕೈ ಸೇರಿಸಿ ನಾನೂ ಮೆಲ್ಲಗೇ ಹೇಳಿದೆ. ‘ಧ್ವನಿ ಏರಿಸಿ ಮಾತಾಡಿದ್ದು ನೀವು. ಗಂಡಸರು ಕಿರುಚಾಡಬಹುದು. ಹೆಂಗಸರು ತೆಪ್ಪಗಿದ್ದು ದೇಶ-ಮನೆಗಳ ಮರ್ಯಾದೆ ಉಳಿಸಬೇಕಾ?’ ಹೆಣ್ಣಿನ ಬದುಕಿನಲ್ಲಿ ಗಂಡಸನ್ನು ಕೇಂದ್ರವಾಗಿ ಸ್ಥಾಪಿಸುವ ಈ ಗೀಳು ಒಂದು ಸಾಮಾಜಿಕ ಹುನ್ನಾರ ಅಂತಲೇ ಅನ್ನಿಸುತ್ತದೆ. ಅದು ಮನಸ್ಸಿನಾಳಕ್ಕೆ ಇಳಿದಾಗ ಹೆಂಗಸರು ತಮಗರಿವಿಲ್ಲದಂತೆಯೇ ಆ ಕೇಂದ್ರವನ್ನು ಮನಸಾರೆ ಒಪ್ಪಿಕೊಂಡಿರುತ್ತಾರೆ. ಸೌಂದರ್ಯದ ಪರಿಕಲ್ಪನೆಯನ್ನು ಸ್ವಲ್ಪ ಗಮನಿಸಿದರೂ ಸಾಕು.

ಹೆಣ್ಣುಮಕ್ಕಳ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದಾಗ ವರ್ಷಕ್ಕೊಮ್ಮೆ ನಡೆಯುತ್ತಿದ್ದ ethnic day ನೆನಪಿಗೆ ಬರುತ್ತದೆ. ಅದೇನು ಸಡಗರ, ಸಂಭ್ರಮ! ಸರಬರ ಸೀರೆ ಸದ್ದು, ಬಳೆಗಳ ಝಣ ಝಣ, ಬ್ಯಾಗಿನ ತುಂಬ ಏನೇನೋ ಪ್ರಸಾಧನ! ಆ ಹಬ್ಬದ ವಾತಾವರಣ ಎಂಥವರ ಮನಸ್ಸನ್ನೂ ಅರಳಿಸುತ್ತದೆ.

ಆದರೆ ಮಧ್ಯಾಹ್ನದ ಹೊತ್ತಿಗೆ ಕಾಲೇಜು ಖಾಲಿ ಖಾಲಿ. ಎಲ್ಲಿ ಹೋದರೋ ನಮ್ಮ ಸುಂದರಿಯರು? ಬಾಯ್ ಫ್ರೆಂಡ್ಸ್ ನೋಡಲು ಪರಾರಿಯಾದರಂತೆ! ಅಷ್ಟು ಸಿಂಗರಿಸಿಕೊಂಡು ಅವನ ಕಣ್ಣಿಗೆ ಹಬ್ಬವಾಗದೆ ಇದ್ದರೆ ವೇಸ್ಟ್ ತಾನೆ? ತಾನೊಂದು ನೋಡಬೇಕಾದ ವಸ್ತುವೆಂದು ಒಪ್ಪಿಕೊಂಡಿದ್ದು ಹೇಗೆ? ಅದು ನಮಗೆ ಅರಿವಿಲ್ಲದಂತೆಯೇ ವರುಷಗಳ ಮಟ್ಟಿಗೆ ನಡೆಯುವ ಸಾಮಾಜಿಕ ಪ್ರಕ್ರಿಯೆ ಬಿಡಿ. ನಮ್ಮ ಜಾಹೀರಾತುಗಳು, ನಮ್ಮ ಸಿನಿಮಾಗಳು, ನಮ್ಮ ಚಿತ್ರಗೀತೆಗಳು, ನಮ್ಮ ಕುಟುಂಬ, ನಮ್ಮ ಸ್ನೇಹಿತರು, ನಮ್ಮ ಸುತ್ತಮುತ್ತಲಿನ ಮಂದಿ ಇತ್ಯಾದಿ ಎಲ್ಲರ ಪಾಲೂ ಅಲ್ಲಿ ಇರುತ್ತದೆ. ಅನೊರೆಕ್ಸಿಯಾ ಎಂಬ ಒಂದು ಗೀಳು-ಕಾಯಿಲೆ ಇದೆ.

ಹಾಯಾಗಿ ತಿಂದರೆ, ಮನ ಬಿಚ್ಚಿ ನಕ್ಕರೆ ದಪ್ಪಗಾಗಿ ಬಿಡುತ್ತೇವೆ ಎಂಬ ಭಯ! ಸೌಂದರ್ಯವೆಂದರೆ ತೆಳ್ಳಗೆ, ಬೆಳ್ಳಗೆ, ಎತ್ತರಕ್ಕೆ ಇರುವುದು. ಸೌಂದರ್ಯ ಸ್ಪರ್ಧೆಗಳು ಎಲ್ಲ ಮಟ್ಟದಲ್ಲೂ ನಡೆಯುವುದು ಆ ಒಂದು ಪ್ರಮಾಣವನ್ನು ಸ್ಥಾಪಿಸಲೆಂದೇ. ಫೇರ್ ಅಂಡ್ ಲವ್ಲಿ ಒಂದು ಪ್ರಚಂಡ ಉದ್ಯಮವಾಗಿ ಬೆಳೆದಿದ್ದು ಆಕಸ್ಮಿಕವೇನೂ ಅಲ್ಲ. ಹಾಗೆಯೇ ನಮ್ಮ ಜಾಹೀರಾತುಗಳು, ಸಿನಿಮಾ ನಾಯಕಿಯರು ಎಲ್ಲರೂ, ಎಲ್ಲವೂ ಆ ಅಮೆರಿಕನ್ ಅಥವಾ ಯುರೋಪಿಯನ್ ಸೌಂದರ್ಯ ಮಾದರಿಯನ್ನೇ ಎತ್ತಿ ಹಿಡಿಯುತ್ತಿರುತ್ತವೆ. ‘ಹುಡುಗಿ ಕಪ್ಪಗಿದ್ದರೂ ಪರವಾಗಿಲ್ಲ, ಲಕ್ಷಣವಾಗಿದ್ದಾಳೆ’ ಎನ್ನುವುದು ಅದರೊಳಗಿನ ಒಂದು ಸಾಮಾಜಿಕ ರಿಯಾಯಿತಿ. ‘ತಪ್ಪು, ಆಕೆ ಕಪ್ಪಗಿದ್ದರಿಂದಲೇ ಕಳೆಕಳೆಯಾಗಿ ಚೆನ್ನಾಗಿರುವುದು’ ಎಂದು ನಾನೊಮ್ಮೆ ಹೇಳಿ, ಸಹೋದ್ಯೋಗಿಗಳು ‘ನೀನು ಬಿಡಮ್ಮ, ಏತಿ ಅಂದ್ರೆ ಪ್ರೇತಿ’ ಎಂದು ತಳ್ಳಿ ಹಾಕಿದ್ದರು.

ನನ್ನ ತೆಲುಗು ಸ್ನೇಹಿತೆಯೊಬ್ಬಳು ಈ ನಡುವೆ ಭಾರೀ ಜನಪ್ರಿಯವಾಗುತ್ತಿರುವ ಮಧ್ಯಮ ವರ್ಗದ ‘ಸ್ಯಾರಿ ಸೆರಮನಿ’ ಬಗ್ಗೆ ಹೇಳುತ್ತಿದ್ದಳು. ಮಗಳು ಮೊದಲ ಬಾರಿ ಸೀರೆ ಉಟ್ಟು ‘ಹೆಣ್ಣಾಗಿ’ ಕಾಣಿಸಿಕೊಳ್ಳುವ ರಂಗಪ್ರವೇಶ. ಅದಕ್ಕೆ ತಿಂಗಳುಗಟ್ಟಲೆ ಸಿದ್ಧತೆ ನಡೆಯುತ್ತಂತೆ. ಗ್ಲೋಬೀಕರಣದಿಂದ ಸಿಕ್ಕಾಪಟ್ಟೆ ಬಡ್ತಿ ಹೊಂದಿದ ಕಾಸ್ಮೆಟಿಕ್ಸ್ ಉದ್ಯಮ ಸೌಂದರ್ಯ ಸ್ಪರ್ಧೆಗಳನ್ನು ನಡೆಸಿ ರೂಪದರ್ಶಿಗಳನ್ನು ಜಾಗತಿಕ ಮಟ್ಟದಲ್ಲಿ ಹೊಮ್ಮಿಸಿ ಸುಂದರವಾಗಿ ಕಾಣಿಸಿಕೊಳ್ಳುವ ಒತ್ತಡವನ್ನು ಪ್ರಚಂಡವಾಗಿ ಹುಟ್ಟು ಹಾಕಿರುವ ವಿದ್ಯಮಾನದ ಒಂದು ರೂಪ ಈ ‘ಸ್ಯಾರಿ ಸೆರಮನಿ’ ಈಗ ಅದಕ್ಕೆ ಮುನ್ನುಡಿಯಾಗಿ ‘ದಾವಣಿ ಸೆರಮನಿ’ ಕೂಡ ಪ್ರಾರಂಭವಾಗಿದೆ ಎಂದವಳು ಹೇಳಿದಾಗ ಬೆಚ್ಚಿ ಬೀಳುವ ಹಾಗಾಯಿತು. ಸೌಂದರ್ಯ, ಸಂಪತ್ತು, ಮತ್ತು ಸಂಪ್ರದಾಯಗಳು ತಮ್ಮನ್ನು ತಾವು ತೋರ್ಪಡಿಸಿಕೊಳ್ಳಲು ಮತ್ತು ಸ್ಥಾಪಿಸಿಕೊಳ್ಳಲು ಹೆಣ್ಣು ದೇಹವನ್ನು ಆರಿಸಿಕೊಳ್ಳುತ್ತವೆ. ತಿರುಪತಿಯ ಲಡ್ಡು ಗುತ್ತಿಗೆದಾರರ ಮಗಳ ಮದುವೆಯಲ್ಲಿ ಅವಳ ದೇಹದ ಒಂದು ಇಂಚನ್ನೂ ಬಿಡದಂತೆ ಚಿನ್ನವನ್ನು ಹೇರಿದ್ದ ಒಂದು ಭಾವಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ನೆನಪಿಗೆ ಬರುತ್ತದೆ. ಇದೆಲ್ಲದರ ನಡುವೆ ‘ನಾನು’ ಎಂಬ ನಾನೆಲ್ಲಿ?

Tags:
error: Content is protected !!