ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಲ್ಪವಾದರೂ ಮಾನ ಮಾರ್ಯಾದೆ ಅಥವಾ ಕನಿಷ್ಟ ಪಕ್ಷ ಸಾರ್ವಜನಿಕ ಜೀವನದಲ್ಲಿ ಗೌರವ ಇಟ್ಟುಕೊಂಡಿದ್ದರೆ, ವಸತಿ ಇಲಾಖೆಯಲ್ಲಿ ನಡೆದಿರುವ ಆಕ್ರಮದ ಬಗ್ಗೆ ತನಿಖೆಗೆ ಆದೇಶ ನೀಡಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ಫಲಾನುಭವಿಗಳು ಹಣ ನೀಡಬೇಕು ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕ ಬಿ.ಆರ್.ಪಾಟೀಲ್ ಅವರೇ ಬಹಿರಂಗಪಡಿಸಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಎಂದು ಪ್ರಶ್ನೆ ಮಾಡಿದರು.
ವಸತಿ ಇಲಾಖೆಯಲ್ಲಿ ಲಂಚ ಕೊಡದೇ ಮನೆ ಸಿಗುವುದಿಲ್ಲ. ಶಾಸಕರೇ ಇದರ ಬಗ್ಗೆ ಮಾತಾಡಿದ್ದಾರೆ, ಆಡಿಯೋ ಇದೆ. ಇದು ಸ್ಯಾಂಪಲ್ ಮಾತ್ರ, ಮನೆ ಬೇಕಾ ಲಂಚ ಕೊಡಿ.
ಸಿಎಂಗೆ ಗೌರವ ಇದ್ದರೆ, ಮಾನಮರ್ಯಾದೆ ಇದ್ದರೆ, ಕೂಡಲೇ ಇದನ್ನು ತನಿಖೆಗೆ ಕೊಡಲಿ. ಇಲ್ಲದ ಸಬೂಬು ಹೇಳುವುದು ಬೇಡ ಎಂದು ವಾಗ್ದಾಳಿ ನಡೆಸಿದರು.





