Mysore
16
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ವಿದ್ಯೆ ಇದ್ದರೆ ಸಾಕೇ? ಸಂಸ್ಕಾರ ಬೇಡವೇ?

ವೃದ್ಧಾಶ್ರಮದ ಭೇಟಿಯ ಅನುಭವ ಹೀಗಿತ್ತು. ಹೌದು ಸಮಯವಿದ್ದಾಗ ವೃದ್ಧಾಶ್ರಮಕ್ಕೆ ಭೇಟಿ  ನೀಡುವುದು ನನ್ನ ಅಭ್ಯಾಸ. ಹಾಗಾಗಿ ನಿನ್ನೆ ನಾನು ಒಂದು ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಹಿರಿಯರ ಮಾತು ಬಹಳ ನೋವುಂಟುಮಾಡಿತು.

ಹಲವಾರು ಮನಸ್ಥಿತಿಯ ಹಿರಿಯರನ್ನು ನೋಡಿ ಕಣ್ತುಂಬಿತು. ಅದರಲ್ಲಿ ಒಂದಿಬ್ಬರ ಮಾತನ್ನು ನಿಮ್ಮೊಟ್ಟಿಗೆ ನಾನು ಹಂಚಿಕೊಳ್ಳುತ್ತಿರುವೆ. ಹೌದು ವೃದ್ಧಾಶ್ರಮದಲ್ಲಿ ಸಮಾನ ವಯಸ್ಕರ, ಸಮಾನ ಮನಸ್ಕರು ಹಾಗೂ ನೋಡಿಕೊಳ್ಳಲು ಜನ ಇರುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಡಾಕ್ಟರ್, ನರ್ಸ್‌ಗಳ ಭೇಟಿ ದಿನ ಇರುತ್ತದೆ. ಆದರೆ ಪ್ರೀತಿ ತೋರುವವರು ಯಾರೂ ಇಲ್ಲವೆಂದು ಕೊರಗುವವರ ಸಂಖ್ಯೆಯೇ ಹೆಚ್ಚು.

ನಿಮ್ಮ ಮಗ ಏನು ಮಾಡುತ್ತಿದ್ದಾನೆ ಎಂದು ಕೇಳುವ ಪ್ರಶ್ನೆಗೆ ? ಹಿರಿಯರು ಜಂಭದಿಂದ ನನ್ನ ಮಗ ಡಾಕ್ಟರ್, ಇಂಜಿನಿಯರ್, ಲಾಯರ್, ವಿದೇಶದಲ್ಲಿ ವಾಸವಾಗಿದ್ದಾನೆ ಎಂದು ಉತ್ತರ ಕೊಡುವವರ ಸಂಖ್ಯೆಯೇ ಹೆಚ್ಚು. ಆದರೆ ನಮ್ಮ ಜೊತೆ ಇದ್ದು ನಮ್ಮನ್ನ ನೋಡಿಕೊಳ್ಳುತ್ತಿದ್ದಾನೆ ಎನ್ನುವವರ ಸಂಖ್ಯೆ ತೀರಾ ವಿರಳ. ಹೌದು ಮಕ್ಕಳು  ಓದಬೇಕು, ವಿದೇಶದಲ್ಲಿ ಕೆಲಸ ಮಾಡಬೇಕು ಅವರು ಚೆನ್ನಾಗಿರಬೇಕು ಎಂದು ಯೋಚಿಸುವುದು ಖಂಡಿತಾ ತಪ್ಪಲ್ಲ. ಆದರೆ ಆ ಸಂಸ್ಕೃತಿಗೆ ನಮ್ಮನ್ನ ಹೊಂದಿಸಿಕೊಳ್ಳುವುದು ಬಹಳ ಕಷ್ಟವಾಗುತ್ತದೆ.

ಹಾಗಾಗಿ ಹಿರಿಯರನ್ನ ಇಲ್ಲೇ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚು ಹಾಗೂ ಅವರ ಆರೋಗ್ಯ ಕೈ ಕೊಟ್ಟಾಗ ಅವರನ್ನ ವೃದ್ಧಾಶ್ರಮಕ್ಕೆ ಸೇರಿಸುವವರ ಸಂಖ್ಯೆಯೂ ಸಹ ಹೆಚ್ಚು . ಅದರಲ್ಲಿ ಒಬ್ಬ ಹಿರಿಯರ ಮಾತು ಹೀಗಿತ್ತು ‘ನಾನು ಟೀಚರ್ ಆಗಿ ಕೆಲಸ ಮಾಡುತ್ತಿದ್ದೆ. ನನಗೆ ಪೆನ್ಷನ್ ಬರುತ್ತದೆ, ಹಾಗಾಗಿ ಆ ಪೆನ್ಷನ್ ಹಣದಲ್ಲಿ ನಾನು ಈ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದೇನೆ. ನನಗೆ ಇಬ್ಬರು ಹೆಣ್ಣು ಮಕ್ಕಳು ಹಾಗಾಗಿ ಹೆಣ್ಣು ಮಕ್ಕಳ ಮನೆಗೆ ಹೋಗುವುದು ಸರಿಯಲ್ಲ. ಎಲ್ಲಾ ಆಸ್ತಿಯನ್ನು ಮಾರಿ ಮಕ್ಕಳಿಗೆ ಕೊಟ್ಟು ನಾನು ಇಲ್ಲಿದ್ದೇನೆ. ಗಂಡು ಮಕ್ಕಳಿದ್ದರೆ ಬಹುಶಃ ನೋಡಿಕೊಳ್ಳುತ್ತಿದ್ದರೇನೋ ಎಂಬ ದುಃಖ ಅವರನ್ನು ಕಾಡುತ್ತಿತ್ತು.

ಮೊಮ್ಮಕ್ಕಳು ಬಂದು ಮಾತನಾಡಿಸುತ್ತಾರೆ. ಮಕ್ಕಳು ಆಗಾಗ ಬಂದು ನೋಡುತ್ತಾರೆ. ಚೆನ್ನಾಗಿದ್ದೇನೆ, ಆದರೆ ನನ್ನ ಮನೆ ಎಂಬುದು ನನಗಿಲ್ಲ ಎಂಬ ಬೇಸರ ನನ್ನನ್ನು ಬಹಳವಾಗಿ ಕಾಡುತ್ತದೆ. ಈಗ ನನ್ನ ಜೊತೆ ಇರುವವರೇ ಅಕ್ಕ ತಂಗಿಯರು, ಈಗ ನನ್ನನ್ನ ನೋಡಿಕೊಳ್ಳುತ್ತಿ ರುವವರೇ ನನ್ನ ಮಕ್ಕಳಲ್ಲವೇ?’

ಅದೇ ಪಕ್ಕದ ಹಾಸಿಗೆಯಲ್ಲಿ ಮಲಗಿದ್ದ ಇನ್ನೊಬ್ಬರು ಸುಮ್ನೆಯಿರಿ, ನನಗೆ ಇಬ್ಬರು ಗಂಡು ಮಕ್ಕಳು. ಅವರು ಒಬ್ಬರಿಗಿಂತ ಒಬ್ಬರು ದೊಡ್ಡ ಸ್ಥಾನದಲ್ಲಿ ಇದ್ದಾರೆ. ಆದರೆ ನೋಡಿಕೊಳ್ಳುವುದಿಲ್ಲ. ಮನೆಯಲ್ಲಿ ಮಾತನಾಡಿದರೆ ತಪ್ಪು, ಕೂತ್ರೆ ತಪ್ಪು. ಮೊಮ್ಮಕ್ಕಳನ್ನು ಮಾತಾಡ್ಸುದ್ರೆ ಸೊಸೆ ಬೈತಾಳೆ. ಹಾಗಾಗಿ ಈ ವೃದ್ಧಾಶ್ರಮದಲ್ಲಿ ನೆಮ್ಮದಿಯಾಗಿ ಇರಬಹುದು. ಈಗಿನ ಕಾಲದಲ್ಲಿ ಯಾವ ಗಂಡು ಮಕ್ಕಳು ಯಾವ ಹೆಣ್ಣು ಮಕ್ಕಳು’ ಅಂತ ನಗ್ತಾ ಇದ್ರು.

ಅದೇ ರೀತಿ ಆಶ್ರಮದವರನ್ನ ಮಾತನಾಡಿಸಿದಾಗ ‘ಹೌದು ಇಲ್ಲಿ ಬರುವವರೆಲ್ಲರನ್ನ ನಮ್ಮ ತಂದೆ ತಾಯಿಯ ಹಾಗೆ ನೋಡಿ ಕೊಳ್ಳುತ್ತೇವೆ. ನಿಮಗೆ ಗೊತ್ತಾ ಮೊನ್ನೆ ತಾನೇ ಒಬ್ರು ನಮ್ಮ ಆಶ್ರಮದಲ್ಲಿ ಹೋಗ್ಬಿಟ್ರು. ಅವರ ಮಕ್ಕಳು ವಿದೇಶದಲ್ಲಿದ್ದಾರೆ. ಅವರಿಗೆ ಫೋನ್ ಮಾಡಿ ಈ ರೀತಿ ನಿಮ್ಮ ತಾಯಿ ಹೋಗ್ಬಿಟ್ರು ಅಂದಾಗ ಎಷ್ಟು ದುಡ್ಡು ಆಗುತ್ತೋ ಹೇಳಿ ಹಾಕ್ತಿವಿ ಅಂತ್ಯಸಂಸ್ಕಾರವನ್ನ ನೀವೇ ಮಾಡಿ ಅಂದ್ರು ನೋಡಿ ಕೊನೆವರೆಗೂ ನೋಡಿಕೊಳ್ಳುತ್ತೇವೆ. ಆದರೆ ಮಕ್ಕಳಾಗಿ ಅವರು ಅಂತ್ಯಸಂಸ್ಕಾರಕ್ಕೂ ಬರೋದಿಲ್ಲ ಅನ್ನುವ ಸ್ಥಿತಿಗೆ ನಮ್ಮ ಸಮಾಜ ತಲುಪಿದೆ ಅನ್ನೋದು ಶೋಚನೀಯ ಅಲ್ವಾ ಅಂತ ಕೇಳುದ್ರು.

ನಾವು ನಮ್ಮ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಬೇಕು ಅನ್ನುವಂತಹ ಈ ಸ್ಪರ್ಧೆಯಲ್ಲಿ ಎಲ್ಲೋ ಸಂಸ್ಕಾರವನ್ನ ಕಲಿಸುವುದು ಮರೆತು ಹೋಗ್ತಾ ಇದ್ದೀವಾ ? ಅಂತ ಬಹಳ ನೋವು ಉಂಟಾಗುವ ಸಂಗತಿ ಇದಾಗಿದೆ. ವೃದ್ಧಾಶ್ರಮಗಳ ಸಂಖ್ಯೆ ಬೆಳೆಯುತ್ತಾ ಇರುವುದು ನಿಜಕ್ಕೂ ಶೋಚನೀಯ ಸಂಗತಿ. ಮಕ್ಕಳು ತಂದೆ ತಾಯಿಯನ್ನು ನೋಡಿಕೊಳ್ಳದಷ್ಟು ಅವರ ಜೀವನದಲ್ಲಿ ಮುಳುಗಿ ಹೋಗಿದ್ದಾರೆ ಎನ್ನುವುದು ಸಹ ತಪ್ಪಲ್ಲವೇ? ಒಮ್ಮೆ ಯೋಚನೆ ಮಾಡಿ ನಿಮ್ಮ ಬಾಲ್ಯದ ದಿನದಲ್ಲಿ ಅಪ್ಪ-ಅಮ್ಮ ಕೈಹಿಡಿದು ನಡೆಸಿದ್ದಾರೆ, ನಿಮ್ಮ ಆರೋಗ್ಯ, ನಿಮ್ಮ ಆಸೆಗಳು ಹಾಗೂ ನಿಮಗೆ ವಿದ್ಯಾಭ್ಯಾಸವನ್ನು ಕೊಟ್ಟು ಬೆಳೆಸಿದ್ದಾರೆ . ನಾನು ವೃದ್ಧಾಶ್ರಮಕ್ಕೆ ಕಳುಹಿಸುವುದು ತಪ್ಪು ಎಂದು ಹೇಳುತ್ತಿಲ್ಲ. ಆದರೆ ಅವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯಎಂದು ಒಮ್ಮೆ ನೆನಪಿಸುತ್ತಿರುವೆ ಅಷ್ಟೇ, ಒಮ್ಮೆ ಯೋಚನೆ ಮಾಡಿ.

– ಸೌಮ್ಯ ಕೋಠಿ, ಮೈಸೂರು

Tags:
error: Content is protected !!