Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕುಸಿಯುತ್ತಿದೆ ಬೆಟ್ಟದ ಮೇಲೆ ಬೆಳಗುತ್ತಿದ್ದ ನಗರ

crumbling

ಶೇಷಾದ್ರಿ ಗಂಜೂರು

ತಮ್ಮ ದೇಶವನ್ನು ಬಣ್ಣಿಸಲು ಅಮೆರಿಕದ ಹಲವಾರು ನಾಯಕರು ಈ ನುಡಿಗಟ್ಟನ್ನು ಉಪಯೋಗಿಸಿದ್ದಾರೆ. ೧೯೮೦ರ ದಶಕದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ರೋನಲ್ಡ್ ರೀಗನ್ ಅವರಂತೂ ಈ ಪದಗಳ ಪ್ರಯೋಗ ವನ್ನು ತಮ್ಮ ಭಾಷಣಗಳಲ್ಲಿ ಪದೇ ಪದೇ ಮಾಡುತ್ತಾರೆ.

೧೯೮೯ರಲ್ಲಿ ಅಧ್ಯಕ್ಷ ಪದವಿ ಬಿಟ್ಟುಕೊಡುವಾಗ ಮಾಡಿದ ವಿದಾಯ ಭಾಷಣದಲ್ಲಿ, ಇಡೀ ಜಗತ್ತನ್ನೇ ತನ್ನೆಡೆಗೆ ಆಕರ್ಷಿಸುವ ಅಮೆರಿಕವೆಂಬ ‘ಸಾಮರಸ್ಯ ಮತ್ತು ಶಾಂತಿ’ಯ ಬೀಡಾದ ಈ ‘ಗಿರಿಯ ಮೇಲಿನ ಈ ಸುಂದರ ನಗರ’ಕ್ಕೆ ‘ಗೋಡೆಗಳು ಇರಲೇಬೇಕೆಂದಿದ್ದರೆ, ಆ ಗೋಡೆಗಳಿಗೆ ಬಾಗಿಲುಗಳೂ ಇರಬೇಕು ಮತ್ತು ಆ ಬಾಗಿಲುಗಳು ತನ್ನೆಡೆಗೆ ಬರುವವರನ್ನು ಸ್ವಾಗತಿಸಲು ಯಾವಾಗಲೂ ತೆರೆದಿರಬೇಕು’ ಎನ್ನುತ್ತಾರೆ.

ರೀಗನ್ ತಮ್ಮ ವಿದಾಯ ಭಾಷಣದಲ್ಲಿ ಬಾಗಿಲು ತೆರೆದಿಟ್ಟಿರುವ ಮಾತುಗಳನ್ನು ಆಡಿದ್ದರೆ, ಬರಾಕ್ ಒಬಾಮ, ಅಮೆರಿಕದ ಅಧ್ಯಕ್ಷ ಪದವಿಗೆ ಕ್ಯಾಂಪೇನ್ ಪ್ರಾರಂಭಿಸುವ ಮುನ್ನವೇ ಅಮೆರಿಕದ ವಿಶ್ವವಿದ್ಯಾಲಯ ಒಂದರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, “ಈ ಬೆಟ್ಟದ ಮೇಲಿನ ನಗರದಲ್ಲಿ”, ಆ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಜಗತ್ತಿನ ನೂರಕ್ಕೂ ಮೀರಿದ ದೇಶಗಳ ವಿದ್ಯಾರ್ಥಿಗಳಿಗೆ ತಮ್ಮ ಕನಸಿನ ಸೌಧಗಳನ್ನು ಕಟ್ಟಿಕೊಳ್ಳುವ ಅವಕಾಶ ಇದೆ’ ಎನ್ನುತ್ತಾರೆ.

ಅಮೆರಿಕಕ್ಕೆ ಇಡೀ ಜಗತ್ತನ್ನೇ ತನ್ನೆಡೆಗೆ ಆಕರ್ಷಿಸುವ ‘ಬೆಟ್ಟದ ಮೇಲಿನ ನಗರ’ ಎನ್ನುವುದರಲ್ಲಿ ಉತ್ಪ್ರೇಕ್ಷೆ ಇರ ಬಹುದಾದರೂ, ಅದೊಂದು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಬಳಸುವ ಸ್ಲೋಗನ್ ಅಂತೂ ಅಲ್ಲ; ಅದರ ಹಿಂದೆ ಸತ್ಯವೂ ಇದೆ. ಸುಮಾರು ನೂರು ವರ್ಷಗಳ ಹಿಂದೆ, ಭಾರತೀಯ ಸುಬ್ರಹ್ಮಣ್ಯಂ ಚಂದ್ರಶೇಖರ್ ಇಂಗ್ಲೆಂಡ್ ತ್ಯಜಿಸಿ ಅಮೆರಿಕವನ್ನು ತನ್ನ ಮನೆಯಾಗಿಸಿಕೊಂಡರೆ, ಸುಮಾರು ೪೦ ವರ್ಷಗಳ ಹಿಂದೆ ಲೆಬನಾನಿನಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ತಡೆಯಲಾಗದೆ ೧೮ ವರ್ಷದ ತರುಣನೊಬ್ಬ ಅಮೆರಿಕ ತಲುಪುತ್ತಾನೆ. ಅಲ್ಲಿ ಪಿಜ್ಜಾ ಡೆಲಿವರಿ ಮಾಡುತ್ತಲೇ ತನ್ನ ವಿದ್ಯಾಭ್ಯಾಸ ಮಾಡುವ ಅವನು ನ್ಯೂರೋಸೈನ್ಸ್ ಅಧ್ಯಯನದಲ್ಲಿ ತೊಡಗಿಕೊಳ್ಳುತ್ತಾನೆ.

ಅವನ ಹೆಸರು ಆರ್ಡೆಮ್ ಪಾಟಪೌಟಿಯನ್. ೨೦೨೧ರಲ್ಲಿ ಡಾ.ಪಾಟಪೌಟಿಯನ್ ನೊಬೆಲ್ ಪ್ರಶಸ್ತಿಗೆ ಪಾತ್ರರಾಗುತ್ತಾರೆ, ಸುಬ್ರಹ್ಮಣ್ಯಂ ಚಂದ್ರಶೇಖರ್ ಅಂತೆಯೇ! ನೊಬೆಲ್ ವಿಜೇತರ ಪಟ್ಟಿಯಲ್ಲಿ ಅಮೆರಿಕ ನಂಬರ್ ಒನ್ ದೇಶ. ಆ ವಿಜೇತರು ಇನ್ನಾವುದೋ ದೇಶದಲ್ಲಿ ಹುಟ್ಟಿ ಅಲ್ಲಿಗೆ ಬಂದಿದ್ದರೊ? ಅಮೆರಿಕದ ನೊಬೆಲ್ ವಿಜೇತರಲ್ಲಿ ಶೇ.೪೦ರಷ್ಟು ಮಂದಿ ವಲಸಿಗರು. ಇತ್ತೀಚಿನ ವರ್ಷಗಳಲ್ಲಂತೂ ಇದು ಶೇ.೬೦-೭೦ಕ್ಕೆ ಏರಿದೆ.

ಇದು ಕೇವಲ ನೊಬೆಲ್ ವಿಜೇತರಂತಹ ಮಹಾಮಹಿಮರ ವಿಷಯವಲ್ಲ. ಲೆಕ್ಕವಿಲ್ಲದಷ್ಟು ಮಂದಿ ಕೃಷಿ ಕಾರ್ಮಿಕರು, ಟ್ಯಾಕ್ಸಿ ಚಾಲಕರು, ಹೋಟೆಲ್ ಕೆಲಸಗಾರರು, ವೈದ್ಯರು, ಸಾಫ್ಟ್‌ವೇರ್ ಉದ್ಯೋಗಿಗಳು, ವಿದ್ಯಾರ್ಥಿಗಳು ಹೀಗೆ ಎಲ್ಲ ರಂಗಗಳ ಸಾಮಾನ್ಯ-ಅಸಾಮಾನ್ಯರು ಈ ‘ಗಿರಿ ನಗರ’ವನ್ನು ತಮ್ಮದಾಗಿಸಿಕೊಂಡಿದ್ದಾರೆ; ಒರೆಸಿ, ತಿಕ್ಕಿ, ಬೆವರು ಸುರಿಸಿ ಆ ನಗರಕ್ಕೆ ಮತ್ತಷ್ಟು ಹೊಳಪು ತಂದಿದ್ದಾರೆ. (ಅವರಲ್ಲಿ ಹಲವರು ಆ ‘ನಗರ’ದ ಗಡಿಯ ಬೇಲಿಯನ್ನು ಹಾರಿ ಬಂದಿದ್ದರೆ, ಇನ್ನೂ ಕೆಲವರು ಅದರ ಕೆಳಗಿನಿಂದ ನುಸುಳಿದ್ದಾರೆ ಎನ್ನುವುದೂ ಅಕ್ಷರಶಃ ನಿಜ)

ಇಂದು ಅಮೆರಿಕ ರೀಗನ್-ಒಬಾಮಾರವರ ‘ಗಿರಿಯ ಮೇಲಿನ ಸುಂದರ ನಗರ’ವಾಗಿ ಉಳಿದಿಲ್ಲ. ಬದಲಿಗೆ, ಭಯ-ಸಂದೇಹ-ಉಗ್ರ ರಾಷ್ಟ್ರೀಯತೆ ತುಂಬಿರುವ ಕಂದಕದ ಹಿಂದೆ ನಿರ್ಮಿತವಾಗುತ್ತಿರುವ ಉಕ್ಕಿನ ಕೋಟೆಯಾಗಿ ಪರಿವರ್ತಿತವಾಗುತ್ತಿದೆ. ಈ ಕೋಟೆಯೊಳಗೆ ಇಣುಕಿ ನೋಡಿದರೆ ಕಾಣುವುದು ವಿದೇಶಿಯರ ಕತ್ತಿನ ಮೇಲೆ ಅಮೆರಿಕನ್ ಪೊಲೀಸರು ಬೂಟುಗಾಲಿನಿಂದ ಒತ್ತಿ ತುಳಿಯುತ್ತಿರುವಂತಹ ಬೀಭತ್ಸ ದೃಶ್ಯಗಳು. ಇಂತಹ ದೃಶ್ಯಗಳು ಅಮೆರಿಕದ ಹೊಳಪನ್ನು ಗಮನಾರ್ಹವಾಗಿ ಕುಂದಿಸಿವೆ. ಪ್ರತಿಷ್ಠಿತ ವೈಜ್ಞಾನಿಕ ನಿಯತಕಾಲಿಕೆ ನೇಚರ್‌ನಲ್ಲಿ ಪ್ರಕಟವಾಗಿರುವ ಒಂದು ಸರ್ವೆ ಪ್ರಕಾರ, ಆ ಸರ್ವೆಯಲ್ಲಿ ಭಾಗವಹಿಸಿದ್ದ ಸುಮಾರು ಶೇ.೭೫ರಷ್ಟು ಮಂದಿ ವಿಜ್ಞಾನಿಗಳು ಅಮೆರಿಕವನ್ನು ತ್ಯಜಿಸಿ ಇತರೆ ದೇಶಗಳಿಗೆ ಹೋಗುವ ಆಲೋಚನೆಯಲ್ಲಿ ಇದ್ದಾರಂತೆ.

ಅಂತಹವರನ್ನು ಆಕರ್ಷಿಸಲು ಯೂರೋಪಿಯನ್ ರಾಷ್ಟ್ರಗಳು ಮತ್ತು ಚೈನಾತುದಿಗಾಲಲ್ಲಿ ನಿಂತಿವೆ. ಕೆಲ ವರದಿಗಳ ಪ್ರಕಾರ, ಅಮೆರಿಕದ ವಿದ್ಯಾರ್ಥಿ ವೀಸಾಗಾಗಿ ಅರ್ಜಿ ಸಲ್ಲಿಸುವ ಭಾರತೀಯರ ಸಂಖ್ಯೆಯಲ್ಲಿಯೂ ಶೇ.೨೮ರಷ್ಟು ಕುಸಿತ ಕಂಡಿದೆಯಂತೆ.

ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸುವ ಭಾರತೀಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸುವುದು ಕಡಿಮೆ ಖರ್ಚಿನ ವಿಚಾರವಲ್ಲ; ಮಾಸ್ಟರ್ಸ್ ಪದವಿ ಪಡೆಯಲು ಕನಿಷ್ಠ ೬೦-೮೦ ಲಕ್ಷ ರೂಪಾಯಿಗಳಾದರೂ ಬೇಕು. ಹಾರ್ವರ್ಡ್, ಸ್ಟಾನ್ಛರ್ಡ್, ಎಮ್.ಐ.ಟಿ., ಕಾರ್ನೆಗಿ ಮೆಲನ್ ಅಂತಹ ಅತಿ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಓದಬೇಕೆಂದರೆ ವೆಚ್ಚ ಒಂದು ಕೋಟಿ ರೂ.ಗೂ ಮೀರುತ್ತದೆ. ಆದರೂ, ಸಾಲ ಮಾಡಿಯೋ ಅಥವಾ ತಮ್ಮ ಆಸ್ತಿ-ಪಾಸ್ತಿ ಮಾರಿಕೊಂಡೋ ಲಕ್ಷಾಂತರ ಮಂದಿ ಭಾರತೀಯರು ಪ್ರತಿವರ್ಷ ಅಮೆರಿಕಕ್ಕೆ ಹಾರುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಅಮೆರಿಕದ ವೀಸಾ ನೀತಿಯ ಪ್ರಕಾರ, ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದ ಮೇಲೆ ಮೂರು ವರ್ಷಗಳ ಕಾಲ ವಿದ್ಯಾರ್ಥಿ ವೀಸಾದಲ್ಲಿಯೇ ಅಮೆರಿಕದಲ್ಲಿ ಕೆಲಸ ಮಾಡಬಹುದು. ಅನಂತರ ಅದನ್ನು ವೃತ್ತಿ ವೀಸಾಗೆ ಬದಲಿಸಿಕೊಂಡರೆ ಇನ್ನೂ ಆರು ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಇವೆಲ್ಲಾ ಒಳ್ಳೆಯ ವೇತನ ನೀಡುವ ಕೆಲಸಗಳು; ಎರಡು-ಮೂರು ವರ್ಷಗಳಲ್ಲಿಯೇ ಮಾಡಿದ ಸಾಲ ತೀರಿಸುವ ಸಾಧ್ಯತೆ ಇರುತ್ತದೆ.

ವಿದೇಶಿಯರು ಪೂರ್ಣ ಫೀ ತೆತ್ತು ಸೇರುವುದರಿಂದ ಆ ವಿಶ್ವವಿದ್ಯಾಲಯಗಳಿಗೂ ಮತ್ತು ಅಮೆರಿಕಕ್ಕೂ ಸಹ ಒಳಿತೇ. ವಿಶ್ವದೆಲ್ಲೆಡೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ದಾಖಲಾಗುವುದರಿಂದ ಆ ವಿಶ್ವವಿದ್ಯಾಲಯಗಳ ಗುಣಮಟ್ಟ ಮತ್ತು ಪ್ರತಿಷ್ಠೆ ಮೇಲೇರುವುದಲ್ಲದೆ, ವಿದೇಶಿಯರು ಪೂರ್ಣ ಫೀ ತೆರುವುದರಿಂದ ಅಮೆರಿಕನ್ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಫೀ-ರಿಯಾಯಿತಿ ಇತ್ಯಾದಿ ನೀಡಲು ಸಾಧ್ಯವಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಈ ವಿದೇಶಿ ವಿದ್ಯಾರ್ಥಿಗಳು ಅಮೆರಿಕನ್ ಆರ್ಥಿಕ ವ್ಯವಸ್ಥೆಗೆ ಪ್ರತಿ ವರ್ಷ ಸುಮಾರು ೩,೫೦,೦೦೦ ಕೋಟಿ ರೂಪಾಯಿಗಳನ್ನು ತುಂಬುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದ ಬಹುಪಾಲು ವಿದ್ಯಾರ್ಥಿಗಳು ವೈಯಕ್ತಿಕವಾಗಿ ತಾವೂ ಸಂಪನ್ನರಾಗುವುದಲ್ಲದೆ, ಅಮೆರಿಕದ ಟೆಕ್ನಾಲಜಿ, ವಿಜ್ಞಾನ, ವ್ಯಾಪಾರ ರಂಗಗಳಿಗೆ ಅಪಾರ ಕೊಡುಗೆ ನೀಡುತ್ತಾ ಬಂದಿದ್ದಾರೆ. ಗೂಗಲ್‌ನ ಸುಂದರ್ ಪಿಚ್ಚೆ , ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ ಇದಕ್ಕೆ ಕೇವಲ ಎರಡು ಉದಾಹರಣೆಗಳಷ್ಟೇ.

ಆದರೆ ಟ್ರಂಪ್ ಯುಗದಲ್ಲಿ ಅದಕ್ಕೆಲ್ಲಾ ತೆರೆ ಬೀಳುತ್ತಿದೆ. ಸ್ಪೀಡ್ ಲಿಮಿಟ್‌ಗಿಂತ ಹೆಚ್ಚಿನ ವೇಗದಲ್ಲಿ ಕಾರು ಚಲಾಯಿಸುವುದು, ಹತ್ತಿರದ ತೊರೆಯೊಂದ ರಲ್ಲಿ ಪರ್ಮಿಟ್ ಇಲ್ಲದೆ ಮೀನು ಹಿಡಿಯುವುದು, ಇತ್ಯಾದಿ ಸಣ್ಣ-ಸಣ್ಣ ತಪ್ಪುಗಳನ್ನೂ ಮಹಾಪರಾಧವೆಂಬಂತೆ ಪರಿಗಣಿಸಿ ವಿದ್ಯಾರ್ಥಿಗಳ ವೀಸಾ ರದ್ದು ಮಾಡಿ ಅವರನ್ನು ದೇಶದಿಂದ ಹೊರಗಟ್ಟಲಾಗುತ್ತಿದೆ. ಟ್ರಂಪ್ ಸರ್ಕಾರಕ್ಕೆ ಇಷ್ಟವಿಲ್ಲದ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರೆ ಅಥವಾ ಲೈಕ್ ಮಾಡಿದರೆ ವೀಸಾ ರದ್ದು ಮಾಡಲು ಅಷ್ಟೇ ಸಾಕು ಎಂಬಂತಾಗಿದೆ.

ರಂಜನಿ ಶ್ರೀನಿವಾಸನ್ ನ್ಯೂಯಾರ್ಕಿನ ಪ್ರತಿಷ್ಠಿತ ಕೊಲಂ ಬಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ವಿದ್ಯಾರ್ಥಿನಿ. ಅವರು ತಮ್ಮ ಪದವಿ ಪಡೆಯಲು ಕೆಲವೇ ತಿಂಗಳಿತ್ತು. ಆದರೆ ಅವರು ವಿಶ್ವವಿದ್ಯಾಲಯದಲ್ಲಿ ಪ್ಯಾಲೆಸ್ಟಿನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆಂಬ ಒಂದೇ ಕಾರಣಕ್ಕೆ ಅವರ ಮೇಲೆ ‘ಹಾಮಾಸ್ ಉಗ್ರರ ಬೆಂಬಲಿಗ’ರೆಂಬ ಆರೋಪ ಹೊರಿಸಿ, ಮಾಚ್ನಲ್ಲಿ ಅವರ ವಿದ್ಯಾರ್ಥಿ ವೀಸಾ ರದ್ದು ಮಾಡಲಾಯಿತು. ರದ್ದಾದ ವೀಸಾದಲ್ಲಿ ಅಕ್ರಮವಾಗಿ ನೆಲೆಸಿರುವ ಆರೋಪದಡಿಯಲ್ಲಿ ಅವರನ್ನು ಬಂಧಿಸುವ ಮುನ್ನವೇ, ಅವರು ತಮ್ಮ ವ್ಯಾಸಂಗವನ್ನು ಬಿಟ್ಟು ಅಮೆರಿಕ ತೊರೆದು ಹೊರ ಹೋಗಬೇಕಾಯಿತು. ಅವರ ಪರವಾಗಿ ಕೋರ್ಟಿನ ಮೊರೆ ಹೋಗಲಾಗಿದೆ ಯಾದರೂ, ಟ್ರಂಪ್ ತತ್ವದ ಪ್ರಕಾರ ಅಮೆರಿಕದಲ್ಲಿರುವ ವಿದೇಶಿಗರಿಗೆ ನ್ಯಾಯಾಂಗದ ಮೂಲಕ ಪರಿಹಾರ ಬೇಡುವ ಯಾವುದೇ ಹಕ್ಕು ಇಲ್ಲವಂತೆ!

ಟ್ರಂಪ್ ಅವರ ರಾಜಕಾರಣದ ಕೇಂದ್ರದಲ್ಲಿರುವ ಶ್ವೇತ ಜನಾಂಗವಾದಿಗಳು ಇಷ್ಟಕ್ಕೇ ತೃಪ್ತರಾಗಿಲ್ಲ. ಭಾರತದಂತಹ ‘ಥರ್ಡ್ ವರ್ಲ್ಡ್’ ರಾಷ್ಟ್ರಗಳ ಪೌರರಿಗೆ ಇನ್ನು ಮುಂದೆ ವೀಸಾ ಕೊಡಲೇಬಾರದು ಮತ್ತು ಈಗಾಗಲೇ ಇರುವವರಿಗೆ ಕೆಲಸ ಮಾಡಲು ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸುತ್ತಿದ್ದಾರೆ.

ಸರ್ಕಾರದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ನಂತಹವರು, ಇಂತಹ ಜನಾಂಗ ದ್ವೇಷವನ್ನು ವಿರೋಧಿಸುತ್ತಿಲ್ಲ. ಬದಲಿಗೆ, ವ್ಯಾನ್ಸ್ ಪ್ರಕಾರ ವಿದೇಶದಿಂದ ಬಂದು ಅಮೆರಿಕದಲ್ಲಿ ನೆಲೆಸಿರುವವರು, ‘ಸೇವಕ ವರ್ಗ’ (Servent Class)ದವರಂತೆ ಮತ್ತು ಅಂತಹವರು ಅಮೆರಿಕಕ್ಕೆ ಬೇಡವಂತೆ! ವ್ಯಂಗ್ಯವೆಂದರೆ, ಖುದ್ದು ವ್ಯಾನ್ಸ್ ಅವರ ಪತ್ನಿ ಉಷಾ ಇಂತಹ ‘ಸೇವಕ ವರ್ಗ’ದಲ್ಲಿಯೇ ಹುಟ್ಟಿದವರು!!

ಇವೆಲ್ಲದರ ಮಧ್ಯೆ ಹಾರ್ವರ್ಡ್‌ನಂತಹ ಕೆಲವೊಂದು ವಿಶ್ವವಿದ್ಯಾಲಯಗಳು ಟ್ರಂಪ್ ಸರ್ವಾಧಿಕಾರದ ವಿರುದ್ಧ ಸೆಟೆದು ನಿಲ್ಲುವ ಧಾರ್ಷ್ಟ್ಯ ತೋರುತ್ತಿವೆ. ದೇಶದ ಹಲವೆಡೆ, ಅದರಲ್ಲೂ ಮೆಕ್ಸಿಕನ್ ವಲಸಿಗರು ಹೆಚ್ಚಾಗಿ ಇರುವ ಲಾಸ್ ಏಂಜೆಲಿಸ್‌ನಂತಹ ನಗರಗಳಲ್ಲಿ ಟ್ರಂಪ್ ವಲಸೆ ನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಅವನ್ನು ಹತ್ತಿಕ್ಕಲು ಟ್ರಂಪ್ ಮಿಲಿಟರಿ ಪಡೆಯನ್ನು ಕಳುಹಿಸುವುದೂ ನಡೆದಿದೆ. ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ, ಲೂಟಿಗಳೂ ನಡೆಯುತ್ತಿವೆ. ಟಿಯರ್ ಗ್ಯಾಸ್, ರಬ್ಬರ್ ಬುಲೆಟ್ ಪ್ರಯೋಗವೂ ನಡೆದಿದೆ. ಬೆಟ್ಟದ ಮೇಲಿನ ಬೆಳಗುವ ನಗರ ತಾನೇ ಕಟ್ಟಿಕೊಳ್ಳುತ್ತಿರುವ ಕಬ್ಬಿಣದ ಕೋಟೆಯ ಭಾರಕ್ಕೆ ಕುಸಿಯುತ್ತಾ ಪಾತಾಳಕ್ಕೆ ಇಳಿಯುತ್ತಿದೆ!

“ಅಮೆರಿಕದ ಅಧಿಕಾರ ಕೇಂದ್ರದಲ್ಲಿರುವ ಶ್ವೇತ ಜನಾಂಗವಾದಿಗಳು ಭಾರತದಂತಹ ರಾಷ್ಟ್ರಗಳ ಪೌರರಿಗೆ ಇನ್ನು ಮುಂದೆ ವೀಸಾ ಕೊಡಲೇಬಾರದು ಮತ್ತು ಈಗಾಗಲೇ ಇರುವವರಿಗೆ ಕೆಲಸ ಮಾಡಲು ಅವಕಾಶ ಕೊಡಬಾರದು ಎಂದು ಆಗ್ರಹಿಸುತ್ತಿದ್ದಾರೆ.”

Tags:
error: Content is protected !!