ಬೆಂಗಳೂರು: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿಗಳಲ್ಲಿ ಒಬ್ಬರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಅವರಿಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಿ ದೇವರಾಜ ಅರಸುರವರ 43ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬೆಂಗಳೂರಿನ ವಿಧಾನಸೌಧದ ಪಶ್ಚಿಮ ದ್ವಾರದ ಮುಂಭಾಗ ಇರುವ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಸಿದ್ದರಾಮಯ್ಯ ಅವರು, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ದಿವಂಗತ ದೇವರಾಜ ಅರಸು ಅವರ ಪುಣ್ಯ ತಿಥಿಯಂದು ಸರ್ಕಾರವು ಏಳು ಕೋಟಿ ಕನ್ನಡಿಗರ ವತಿಯಿಂದ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿ ಸ್ಮರಿಸಿಕೊಂಡಿದೆ ಎಂದರು.
ಸಾಮಾಜಿಕ ನ್ಯಾಯದಲ್ಲಿ ಬಲವಾದ ನಂಬಿಕೆ ಇಟ್ಟಿದ್ದ ದೇವರಾಜ ಅರಸು ಅವರು ನಿರ್ಗತಿಕರು, ಭೂ ರಹಿತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದರು. ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿ ಮಾಡಿ ಭೂರಹಿತರನ್ನು ಭೂ ಒಡೆಯರಾಗಿಸಿದರು. ಜೀತ ಪದ್ಧತಿಯನ್ನು ರದ್ದು ಮಾಡಿ, ಮಲ ಹೊರುವ ಪದ್ಧತಿಯನ್ನು ನಿಲ್ಲಿಸಿದರು. ಅವರ ಕಾರ್ಯಕ್ರಮಗಳ ಉದ್ದನೆಯ ಪಟ್ಟಿಯೇ ಇದೆ. ದೀರ್ಘಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಎಂದರು.





