ಮೈಸೂರು: ಸರ್ಕಾರದ ಬೇಜವಾಬ್ದಾರಿತನದಿಂದಲೇ ಕಾಲ್ತುಳಿತ ದುರಂತ ಸಂಭವಿಸಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಲೆದಂಡವಾಗಿದೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಅವರು, ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ. ಆದರೆ ಇದರಲ್ಲಿ ಸರ್ಕಾರದ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಆರ್‌ಸಿಬಿ ಕಪ್ ಗೆದ್ದ ಬಳಿಕ ರಾತ್ರಿಯಿಡೀ ವಿಜಯೋತ್ಸವ ನಡೆದಿದೆ. ಮರುದಿನ ಕೂಡ ವಿಜಯೋತ್ಸವ ನಡೆದು ದುರಂತ ನಡೆದಿದೆ.
ಹಲವು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಆ ಘಟನೆ ಕುರಿತು ಚಿಂತನೆ ನಡೆಸುವ ಅಗತ್ಯವಿದೆ ಎಂದರು.
ಇನ್ನು ನಿನ್ನೆ ಐದು ಮಂದಿ ಪೊಲೀಸರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದೀರಿ. ಇದಕ್ಕೆ ನಿಮ್ಮ ಮನಃಸಾಕ್ಷಿ ಒಪ್ಪುತ್ತದೆಯೆ? ಎಂದು ಪ್ರಶ್ನಿಸಿದ ಅವರು, ಸರ್ಕಾರ ರಾಜ್ಯದ ಜನರ ಕಣ್ಣೊರೆಸಲು ಮಾಡಿರುವ ತಂತ್ರ ಇದು. ಮೊದಲು ಇಂಟೆಲಿಜೆನ್ಸ್ ಐಜಿ ಏನು ಮಾಡ್ತಿದ್ರು?. ಅವರು ನಿಮಗೆ ರಿಪೋರ್ಟ್ ಕೊಡಲಿಲ್ಲವೇ? ಗೃಹ ಇಲಾಖೆ ಕಾರ್ಯದರ್ಶಿ ಏನು ಮಾಡುತ್ತಿದ್ದರು? ಎಂದು ರಾಜ್ಯ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆ ಮಾಡಿದರು.
ಕಪ್ ಗೆದ್ದ ಕೆಲವೇ ಗಂಟೆಗಳಲ್ಲಿ ವಿಜಯೋತ್ಸವ ಸಂಭ್ರಮಾಚರಣೆ ಮಾಡಿದ್ರಿ? ಇದಕ್ಕೆ ಪೂರ್ವಭಾವಿ ಸಭೆ ನಡೆಸಿದ್ದೀರಾ? ಸಚಿವರು, ಶಾಸಕರು, ಸಿಎಂ ಯಾವುದಾದರೂ ಸಭೆ ನಡೆಸಿದ್ರಾ? ಹಾಗಾಗಿ ಇದರಲ್ಲಿ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿಮ್ಮ ಕುಟುಂಬಸ್ಥರಿಗೆ ಏನು ಕೆಲಸ? ಆ ರೀತಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾದರೆ ಚೀಫ್ ಸೆಕ್ರೆಟರಿ ವಿರುದ್ಧ ಕ್ರಮ ತೆಗೆದುಕೊಳ್ಳಿ. ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮಲ್ಲಿ ಲೋಪ ಇಟ್ಕೊಂಡು ಪೊಲೀಸರ ಮೇಲೇಕೆ ಕ್ರಮ? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡುವ ತಂತ್ರ ಯಾಕೆ? ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಅಧಿಕಾರಿಗಳ ಅಮಾನತ್ತು ಆದೇಶ ವಾಪಸ್ ಪಡೆಯಿರಿ. ದಯಾನಂದ್, ಶೇಖರ್ ಏನು ತಪ್ಪು ಮಾಡಿದ್ದಾರೆ? ನೀವು ಕ್ರಮ ತೆಗೆದುಕೊಳ್ಳುವುದಾದರೆ ಇಂಟಲಿಜೆನ್ಸ್ ಐಜಿ ವಿರುದ್ಧ ತೆಗೆದುಕೊಳ್ಳಿ. ಈ ಘಟನೆಗೆ ವೇದಿಕೆ ಮೇಲೆ ಇದ್ದವರೆಲ್ಲ ಕಾರಣರು. ಈ ಆದೇಶವನ್ನು ಪುನಃ ಪರಾಮರ್ಶೆ ಮಾಡಿ. ವಾಪಸ್ ತೆಗೆದುಕೊಂಡು ನಿಷ್ಠಾವಂತ ಅಧಿಕಾರಿಗಳಿಗೆ ಸಾಥ್ ನೀಡಿ ಎಂದು ಆಗ್ರಹಿಸಿದರು.





