Mysore
26
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಪ್ರಕೃತಿಯನ್ನೇ ಧ್ಯಾನಿಸಿದ್ದ ಪಮೆಲಾ ಗೇಲ್ ಮಲ್ಹೋತ್ರಾ 

ಜಿ ಶಾಂತಕುಮಾರ್‌ 

ನಾನಾಗ ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದೆ. 2017ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಭಾರತದ ರಾಷ್ಟ್ರಪತಿಯವರಿಂದ ನಾರಿಶಕ್ತಿ ಪ್ರಶಸ್ತಿ ಪುರಸ್ಕೃತರಾಗುತ್ತಿರುವವರು ಪಮೆಲಾ ಗೇಲ್ ಮಲ್ಹೋತ್ರಾ ಎಂದು ತಿಳಿದಿತ್ತು. ಆದರೆ ಅವರು ಕೊಡಗಿನಲ್ಲಿ ನೆಲೆಸಿದ್ದಾರೆ ಎಂಬ ವಿಷಯವನ್ನು ಕೇಳುತ್ತಿದ್ದಂತೆಯೆ ಅವರ ಪರಿಸರ ಪ್ರೀತಿಯ ಕುರಿತು ತಿಳಿಯುವ ಕುತೂಹಲವಾಯಿತು. ಮುಂದೆ ಅವರ ಬದುಕಿನ ಪಯಣವನ್ನು ತೆರೆದಿಡುವ ಡಾಕ್ಯೂಮೆಂಟರಿಯನ್ನೂ ಮಾಡಿದೆ.

ಪಮೆಲಾ ಗೇಲ್ ಅವರು ಬದುಕಿದ್ದಾಗಲೇ ಪಸರಿಸಿದ್ದ ಪ್ರಕೃತಿಯ ಸೌಹಾರ್ದತೆ ಈಗಲೂ ನೆನಪಿಸಿಕೊಳ್ಳುವಂಥದ್ದು. ಅಮೆರಿಕಾದ ನ್ಯೂಜೆರ್ಸಿಯಲ್ಲಿ ಜನಿಸಿದ ಈ ನಿಸರ್ಗ ಜೀವ ಉಸಿರಾಡಿದ್ದು, ಭಾರತದ ವೈವಿಧ್ಯಮಯ ವನಸಿರಿಯನ್ನು. 1952ರಲ್ಲಿ ಜನಿಸಿದ ಪಮೀಲಾ ಅವರನ್ನು ಭಾರತ ತನ್ನೆಡೆಗೆ ಸೆಳೆದ ಬಗೆಯೇ ವಿಶೇಷ.

ನ್ಯೂಜೆರ್ಸಿಯ ಹೈಸ್ಕೂಲ್ ಮತ್ತು ಕಾಲೇಜು ದಿನಗಳಲ್ಲಿ ಮಹಾರಾಷ್ಟ್ರ ಮೂಲದವರಾಗಿದ್ದ ಡಾ.ಅನಿಲ್ ಮಲ್ಹೋತ್ರ ಅವರ ಪರಿಚಯವಾಯಿತು. ಹಸಿರನ್ನೇ ಸದಾ ಧ್ಯಾನಿಸುತ್ತಿದ್ದ ಇವರಿಬ್ಬರ ನಡುವೆ ಪ್ರೀತಿ ತಾನಾಗಿ ಚಿಗುರೊಡೆಯಿತು. ಅಮೆರಿಕಾದಲ್ಲೇ ಇದ್ದ ಅನಿಲ್ ಕುಮಾರ್ ಅವರು ಪುಣೆಗೆ ಹಿಂತಿರುಗಿ, ಮನೆಯವರನ್ನು ಒಪ್ಪಿಸಿ, ಪಮೇಲಾ ಅವರನ್ನು ಮದುವೆಯಾದರು.

೧೯೮೦ರಲ್ಲಿ ಭಾರತಕ್ಕೆ ಅವರ ಮೊದಲ ಭೇಟಿ. ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಾಗಲಷ್ಟೇ, ಅನಿಲ್ ಕುಮಾರ್ ಅವರ ತಂದೆ ಅಸ್ವಸ್ಥರಾಗಿ ನಿಧನರಾದರು. ಮತ್ತದೇ ಅಮೆರಿಕಾಕ್ಕೆ ಪಯಣ ಸಾಗಿತು. ವಿಶೇಷವೆಂದರೆ, ದಂಪತಿಗಳಿಬ್ಬರನ್ನೂ ಭಾರತ ಮತ್ತೆ ಕೈಬೀಸಿ ಕರೆಯಿತು. ಮಹಾರಾಷ್ಟ್ರದ ಪುಣೆಯಲ್ಲಿ ದಂಪತಿ ವಾಸವಿದ್ದರು. ಆಗ ಪ್ರಕೃತಿಯೊಂದಿಗೆ ಬೆಸೆದುಕೊಂಡ ಇವರ ಬಂಧ ಇನ್ನೆಂದೂ ಭಾರತವನ್ನು ಬಿಡದಂತೆ ಆವರಿಸಿತು.

ತಂದೆಯ ಅಸ್ಥಿಯನ್ನು ಗಂಗಾ ನದಿಯಲ್ಲಿ ವಿಸರ್ಜಿಸುವ ವೇಳೆ ಸುತ್ತಲ ಹಿಮಾಲಯದ ನಿಸರ್ಗ ಸೌಂದರ್ಯಕ್ಕೆ ಮಾರುಹೋದ ಇವರಿಬ್ಬರೂ ಅಲ್ಲೇ ನೆಲೆಸೋಣವೆಂದು ತೀರ್ಮಾನಿಸಿದರು. ಬರೋಬ್ಬರಿ ಹತ್ತು ವರ್ಷಗಳ ಕಾಲ ಹಿಮರಾಶಿಯ ತಪ್ಪಲಲ್ಲಿ ಬದುಕು ಕಟ್ಟಿಕೊಂಡಿದ್ದರು. ತನ್ನ ತವರಿನವರ ವನ-ವನ್ಯ ಪ್ರೀತಿಯನ್ನು ಹತ್ತಿರದಿಂದ ಕಂಡಿದ್ದ ಪಮೆಲಾ ಅವರಿಗೆ ತಮ್ಮ ಪತಿಯ ಆಸಕ್ತಿಯಿಂದಾಗಿ ಇನ್ನೂ ಒಲವು ಹೆಚ್ಚಾಯಿತು. ಹಿಮಾಲಯದ ಬಳಿ ಅಭಯಾರಣ್ಯವನ್ನು ಅಭಿವೃದ್ಧಿಪಡಿಸಬೇಕೆಂಬ ಕನಸು ಅವರಿದ್ದ ಜಾಗದಲ್ಲಿ ಹನ್ನೆರಡು ಎಕರೆ ಭೂಮಿಯನ್ನೇನೊ ಖರೀದಿಸುವಂತೆ ಮಾಡಿತು. ಆದರೆ, ಹಿಮಾಲಯದ ತಪ್ಪಲಿನ ಜಾಗದಲ್ಲಿ ತಮ್ಮ ಕನಸು ಸಾಕಾರಗೊಳ್ಳದು ಎಂಬುದನ್ನು ಅರಿತ ಇಬ್ಬರೂ ಸ್ಥಳವನ್ನರಸುತ್ತಾ ಇಡೀ ದಕ್ಷಿಣ ಭಾರತವನ್ನು ಸುತ್ತಿದರು. ೧೯೯೧ರಲ್ಲಿ ಅವರಿಗೆ ಕಂಡಿದ್ದು, ದಕ್ಷಿಣ ಕಾಶ್ಮೀರ ಎಂದೇ ಪ್ರಸಿದ್ಧವಾದ ಕೊಡಗು ಜಿಲ್ಲೆ! ಅವರು ವಿರಾಜಪೇಟೆಯಲ್ಲಿರುವ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿರುವ ತೆರಾಲು ಪ್ರದೇಶದಲ್ಲಿ ೫೫ ಎಕರೆ ಭೂಮಿಯನ್ನು ಖರೀದಿಸುತ್ತಾರೆ. ಕೃಷಿ ಮಾಡಿ, ಇಳುವರಿ ದೊರೆಯುತ್ತಿಲ್ಲವೆಂದು ಕೈಬಿಟ್ಟ ಬಂಜರು ಭೂಮಿಯದು. ದಂಪತಿಗಳ ಕೈ ಸೇರಿದ ಅದೇ ಬಂಜರು ಭೂಮಿ ಜೈವಿಕ ವೈವಿಧ್ಯತೆಯ ಮಳೆ ಕಾಡುಗಳಾಗಿ ಪರಿವರ್ತನೆಯಾಯಿತು. ಅಂತೆಯೇ ೨೦೦೨ರಲ್ಲಿ ಅಭಯಾರಣ್ಯ ಟ್ರಸ್ಟನ್ನೂ ಸ್ಥಾಪಿಸಿದರು. ಯಾವುದೇ ಲಾಭ-ಲಾಬಿಯ ಉದ್ದೇಶವಿಲ್ಲದೆ, ವನ-ವನ್ಯ ಜೀವಿಯ ಸಂರಕ್ಷಣೆಗಾಗಿ ಖಾಸಗಿ ಅಭಯಾರಣ್ಯವನ್ನು ಸ್ಥಾಪಿಸಿದ ಕೀರ್ತಿ ಈ ದಂಪತಿಗೆ ಸಲ್ಲುತ್ತದೆ. ಬಂಜರು ಕೃಷಿ ಭೂಮಿಯನ್ನು ಮರಳಿ ಪ್ರಕೃತಿಗೆ ನೀಡುವ ಹೊಸ ಯೋಜನೆಯೇ, ವನ್ಯಜೀವಿ ಅಭಯಾರಣ್ಯದ ಸ್ಥಾಪನೆ. ಅಷ್ಟೇ ಅಲ್ಲ, ಅರಣ್ಯ ನಾಶವಾದ ಭೂಮಿಯಲ್ಲಿ ಮೈನವಿರೇಳಿಸುವ ಪರಿಸರ ವ್ಯವಸ್ಥೆಯನ್ನು ಬೆಳೆಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಪಮೇಲಾ ದಂಪತಿ ನಿಜಾರ್ಥದಲ್ಲಿ ಪ್ರಕೃತಿಪ್ರಿಯರು.

ಸ್ಥಳೀಯ ಮರಗಳನ್ನು ನೆಡುವ ಮೂಲಕ, ಪಮೆಲಾ ದಂಪತಿ ಅಳಿವಿನಂಚಿನಲ್ಲಿರುವ ನೂರಾರು ಸಸ್ಯಗಳು, ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆ ಕಲ್ಪಿಸಿದ್ದಲ್ಲದೆ, ಸಸ್ಯಾಹಾರಿ ಪ್ರಾಣಿಗಳಿಗಾಗಿ ಹುಲ್ಲುಗಾವಲನ್ನೂ ಬೆಳೆಸಿದರು. ಈ ಅಭಯಾರಣ್ಯ ವರ್ಷಪೂರ್ತಿ ಹರಿಯುವ ತೊರೆಯನ್ನು ಹೊಂದಿದ್ದು, ಪ್ರಾಣಿ ಪಕ್ಷಿಗಳ ಅಗತ್ಯವನ್ನೂ ಪೂರೈಸುತ್ತಿತ್ತು. ’ನಾವು ಮೊದಲು ಇಲ್ಲಿಗೆ ಬಂದಾಗ ನಮಗೆ ಮಾರಾಟವಾದ ಹೆಚ್ಚಿನ ಭೂಮಿಗಳು ಬಂಜರು ಭೂಮಿಗಳಾಗಿದ್ದವು. ಏಲಕ್ಕಿ ಬೆಳೆಯುವ ಜಾಗಗಳಲ್ಲಿ ನೆರಳನ್ನು ಕೊಡುವ ದೊಡ್ಡ ದೊಡ್ಡ ಮರಗಾಡುಗಳಿದ್ದರೂ, ಕಾಫಿ ತೋಟಗಳಲ್ಲಿ ಕಾಡು ಕಡಿದು ಅರಣ್ಯ ಸಾಕಷ್ಟು ನಾಶಗೊಂಡಿವೆ. ಹಾಗಾಗಿ ಅದನ್ನು ಮರಳಿ ತರಲು ಸಾಕಷ್ಟು ಕಾಳಜಿ, ಶಕ್ತಿ, ಸಮಯ ಬೇಕಾಯಿತು’ ಎಂದು ಸ್ವತಃ ಪಮೇಲಾ ಅವರೇ ಹೇಳಿದ್ದರು.

ಹದತಪ್ಪಿದ ಪರಿಸರ ವ್ಯವಸ್ಥೆಯನ್ನು ಮರಳಿ ಸರಿಪಡಿಸುವ ಬಹುದೊಡ್ಡ ಸವಾಲು ಪಮೇಲಾ ದಂಪತಿ ಎದುರಿತ್ತು. ಆಶ್ಚರ್ಯವೆಂದರೆ, ಪ್ರಕೃತಿಯ ಪದರಗಳನ್ನು ಸಾವಧಾನವಾಗಿ ಅಭಿವೃದ್ಧಿಪಡಿಸಿದ ಪಮೇಲಾ ದಂಪತಿ ತಾಳ್ಮೆಗೆ ಬೆರಗಾಗಲೇಬೇಕು. ಕಾಡಿನ ಮೇಲಾವರಣದ ಮೂಲಕ ಹಾರುತ್ತಲೇ ಬೀಡು ಬಿಡುವ ಅಥವಾ ಗೂಡು ಕಟ್ಟುವ ಮುನ್ನೂರು ವಿವಿಧ ಜಾತಿಯ ಪಕ್ಷಿಗಳಿಗೆ ಆಸರೆ ನೀಡಿದರು. ಐವತ್ತೈದು ಎಕರೆ ಪ್ರದೇಶದಿಂದ ಆರಂಭಗೊಂಡ ಈ ಅಭಯಾರಣ್ಯದ ವಿಸ್ತೀರ್ಣ ಪಮೆಲಾ ಅವರು ಬದುಕಿರುವವರೆಗೂ ಜೀವವೈವಿಧ್ಯದ ತಾಣವಾಗಿ 300 ಎಕರೆಗೆ ವಿಸ್ತಾರಗೊಂಡಿತು. ಮಾತ್ರವಲ್ಲ, ದೇಶದ ಮೊದಲ ಖಾಸಗಿ ರಕ್ಷಿತಾರಣ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಪ್ರಕೃತಿ ಮತ್ತು ಮಾನವರ ನಡುವಿನ ಸಮತೋಲನವನ್ನು ಮತ್ತೆ ಸರಿದೂಗಿಸಲು ಆಶಿಸಿ, ೨೬ ವರ್ಷಗಳವರೆಗೆ ನಿರಂತರ ಪರಿಶ್ರಮಿಸಿದ್ದ ಡಾ. ಅನಿಲ್ ಮಲ್ಹೋತ್ರಾ ಮತ್ತು ಪಮೆಲಾ ಗೇಲ್ ದಂಪತಿ ಬದುಕು ನಿಸರ್ಗ ಪ್ರೇಮಿಗಳಿಗೆ ಸಾರ್ವಕಾಲಿಕ ಮಾದರಿ.

Tags:
error: Content is protected !!