ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ, ಸಮ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ ಬುದ್ಧ , ಬಸವಣ್ಣ, ಅಂಬೇಡ್ಕರ್, ಕನಕದಾಸ,
ಮಹರ್ಷಿ ವಾಲ್ಮೀಕಿ ಅವರಂತಹ ಮಹನೀಯರ ಜಯಂತಿ ಕಾರ್ಯಕ್ರಮಗಳು ಇಂದು ಜಾತಿಗಳಿಗೆ ಸೀಮಿತವಾದ ವೇದಿಕೆಗಳಾಗುತ್ತಿವೆ. ಜಾತ್ಯತೀತ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವನವಿಡಿ ಹೋರಾಡಿದ ಇವರು ಯಾವುದೇ ಒಂದು ಜಾತಿಗೆ ಸೀಮಿತವಾದವರಲ್ಲ. ಇವರ ಜಯಂತಿಯನ್ನು ಸರ್ವಜನರು ಕೂಡಿ
ಆಚರಿಸಿ ಸಂಭ್ರಮಿಸಬೇಕು. ಆದರೆ ಇಂದು ಜಾತಿ ಬಲದ ಪ್ರದರ್ಶನದ ಸರಕಾಗಿ ಈ ಮಹಾನುಭಾವರ ಜಯಂತಿಗಳು ಬಳಕೆಯಾಗುತ್ತಿರುವುದು ಘೋರ ದುರಂತವೇ ಸರಿ. ‘ಎಲ್ಲಾ ಜನ ಸಮುದಾಯದ ಸೂಚಕವಾಗಿ ವಿಶಾಲ ಅರ್ಥದಲ್ಲಿ ಬಳಕೆಯಾಗಬೇಕಾದ ಸಾಮಾಜಿಕರು ಅಥವಾ ಸಮಾಜದ ಬಂಧುಗಳು ಎಂಬ ವಾಕ್ಯವನ್ನು ಯಾವುದೋ ಒಂದು ಜಾತಿಗೆ ಸೀಮಿತವಾಗಿ ಬಿಂಬಿಸುವ ಪ್ರಯತ್ನಗಳು ಕಾಣುತ್ತಿವೆ. ಆ ಮೂಲಕ ಯಾವುದೇ ತಾರತಮ್ಯವಿರದ ಅವರ ಸರ್ವಶ್ರೇಷ್ಠ ಚಿಂತನೆಗಳಿಗೆ ಮಸಿ ಬಳಿಯುವಂತಾಗುತ್ತಿದೆ. ಮಹನೀಯರ ಜಯಂತ್ಯುತ್ಸವಗಳು ಅವರ ಆಚಾರ – ವಿಚಾರ, ಜೀವನ, ಸಾಧನೆಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಅರ್ಥಪೂರ್ಣ ವೇದಿಕೆಯಾಗಬೇಕೆ ಹೊರತು ಜಾತಿಯನ್ನು ಪೋಷಿಸುವ, ವೈಷಮ್ಯಕ್ಕೆ ಎಡೆಮಾಡಿಕೊಡುವ ಜಾತಿ ಕೇಂದ್ರಿತ
ಕಾರ್ಯಕ್ರಮವಾಗಬಾರದು. ಕಡಿಮೆ ಸಂಖ್ಯೆಯಲ್ಲಿರುವ ತಳ ಸಮುದಾಯದವರ ಆಸೆ, ಆಶೋತ್ತರಗಳನ್ನು, ಅವರ ಆತಂಕ, ತಲ್ಲಣಗಳನ್ನು ಗಮನದಲ್ಲಿರಿಸಿಕೊಂಡು ಜಯಂತಿಯನ್ನು ಆಚರಿಸುವಂತಾದರೆ ಮಹನೀಯರ ಜಯಂತಿ ಕಾರ್ಯಕ್ರಮಗಳು ಸಾರ್ಥಕತೆ ಪಡೆದುಕೊಳ್ಳುತ್ತವೆ. ಈ ಬಗ್ಗೆ ಎಲ್ಲರೂ ಆಲೋಚಿಸಿ ಹೆಜ್ಜೆಯಿಡಬೇಕಿದೆ.
– ಕೊತ್ತಲವಾಡಿ ಶಿವಕುಮಾರ್, ಚಾಮರಾಜನಗರ ತಾ.





