ವಯಸ್ಸಾದವರ ಒಳಿತನ್ನು ಕಾಪಾಡುವುದು, ಹಿರಿಯ ನಾಗರಿಕರಿಗೆ ಆರ್ಥಿಕ ಭದ ತೆ, ಆರೋಗ್ಯ ಪಾಲನೆ,ಆಶ್ರಯ ಒದಗಿಸುವುದು ಹಾಗೂ ಅವರನ್ನು ನಿಂದಿಸುವ ಮತ್ತು ಅನುಚಿತ ಉಪ ಯೋಗ ಪಡೆದುಕೊಳ್ಳುವವರಿಂದ ರಕ್ಷಣೆ ಒದಗಿಸುವುದು, ಇನ್ನಿತರ ಅವಶ್ಯಕತೆಗಳನ್ನು ಪೂರೈಸಲು ಬೆಂಬಲವನ್ನು ನೀಡುವುದು, ಗ್ರಾಮಾಂತರ ಪ ದೇಶಗಳಲ್ಲಿ ವಾಸಿಸುತ್ತಿರುವ ವೃದ್ಧರಿಗೆ ನಗರ ಪ್ರದೇಶಗಳಲ್ಲಿರುವಂತೆ ಸಮಾನ ಅವಕಾಶಗಳನ್ನು ಒದಗಿಸಲು ಕಾರ್ಯಕ್ರಮಗಳನ್ನು ರೂಪಿಸುವುದು, ಹಿರಿಯ ನಾಗರಿಕರು ರಚನಾತ್ಮಕ, ಸುಭಿಕ್ಷ ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಅವಕಾಶ ನೀಡುವ ಉದ್ದೇಶದಿಂದ ಹಿರಿಯ ನಾಗರಿಕರಿಗಾಗಿ ರಾಜ್ಯ ನೀತಿಯನ್ನು ಜಾರಿಗೊಳಿಸಿದೆ. ಈ ಕಾರ್ಯನೀತಿಯು ವಯೋಮಾನ ಸಂಘಟಿತ ಸಮಾಜವನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ. ವಯಸ್ಸಾದ ವ್ಯಕ್ತಿಗಳು ಕೂಡ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಉಪಯುಕ್ತ ಸೇವೆಯನ್ನು ಸಲ್ಲಿಸಿರುತ್ತಾರೆ ಎಂಬುದನ್ನು ಗುರುತಿಸಿರುವ ರಾಜ್ಯವು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮುಖ್ಯ ಮಂತ್ರಿಯವರ ಅಧ್ಯಕ ತೆಯಲ್ಲಿನ ಕಾರ್ಯಪಡೆಯು ಈ ರಾಜ್ಯ ನೀತಿಯ ಅನುಷ್ಠಾನದ ಮೇಲ್ವಿಚಾರಣೆಯನ್ನು ನಡೆಸುತ್ತಿದೆ.
ವೃದ್ಧಾಪ್ಯ ವೇತನ:
ಈ ಯೋಜನೆಯಡಿ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳ ನಿರ್ದೇಶನಾಲಯದ ಮೂಲಕ ೬೦ ರಿಂದ ೬೫ ವರ್ಷದೊಳಗಿನ ಹಿರಿಯ ನಾಗರಿಕರಿಗೆ ತಿಂಗಳಿಗೆ ೬೦೦ ರೂ. ಪಿಂಚಣಿಯನ್ನು ನೀಡಲಾಗುತ್ತಿದೆ. ೬೫ ವರ್ಷ ಮೇಲ್ಟಟ್ಟವರಿಗೆ ೧೦೦೦ ರೂ.ಗಳ ಪಿಂಚಣಿಯನ್ನು ನೀಡಲಾಗುತ್ತಿದೆ.
ಹಿರಿಯರಿಗೆ ಗುರುತಿನ ಚೀಟಿ: ೬೦ ವರ್ಷ ಮೇಲ್ಪಟ್ಟ ವಯೋಮಾನದ ಹಿರಿಯ ನಾಗರಿಕರಿಗೆ ನೀಡಲಾಗುವ ಗುರುತಿನ ಚೀಟಿಯು ಸರ್ಕಾರದ ಹಲವು ಯೋಜನೆಗಳ ಪ್ರಯೋಜನ ಪಡೆಯಲು ಸಹಕಾರಿಯಾಗಲಿದೆ. ಹಿರಿಯ ನಾಗರಿಕರು ಆನ್‌ಲೈನ್ ಮೂಲಕ ಈ ಗುರುತಿನ ಚೀಟಿ ಪಡೆಯಬಹುದಾಗಿದೆ. ಇದಕ್ಕಾಗಿ ಸೇವಾ ಸಿಂಧು ಆನ್‌ಲೈನ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಆಧಾರ್ ಕಾರ್ಡ್, ರಕ್ತದ ಗುಂಪು ಪರೀಕ್ಷೆಯ ಚೀಟಿ, ಫಲಾನುಭವಿಯ ಒಂದು ಭಾವಚಿತ್ರಗಳೊಂದಿಗೆ ಆನ್‌ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಿ ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆದುಕೊಂಡರೆ ೬೫ ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯೋಮಾನದ ಹಿರಿಯ ನಾಗರಿಕರಿಗೆ ಬಸ್ ಪಯಾಣ ದರದಲ್ಲಿ ಶೇ.೨೫ ರಷ್ಟು ರಿಯಾಯಿತಿಯನ್ನು ರಾಜ್ಯಸರ್ಕಾರ ನೀಡುತ್ತಿದೆ. ಜೊತೆಗೆ ಈ ಯೋಜನೆಯ ಪ್ರಯೋಜನ ಪಡೆಯಲು ಹಿರಿಯ ನಾಗರಿಕರು ಇಲಾಖೆ ವತಿಯಿಂದ ನೀಡಲಾಗುವ ಗುರುತಿನ ಚೀಟಿ, ಚುನಾವಣಾ ಗುರುತಿನ ಚೀಟಿ, ಚಾಲನಾ ಪರವಾನಗಿ, ಕೆಎಸ್‌ಆರ್‌ಟಿಸಿ ಯಿಂದ ವಿತರಿಸಲಾದ ಗುರುತಿನ ಚೀಟಿ ಇವುಗಳನ್ನು ತೋರಿಸಬೇಕಾಗುತ್ತದೆ. ಬಸ್ ಪ್ರಯಾಣದಲ್ಲಿ ರಿಯಾಯಿತಿ ಜೊತೆಗೆ ಆರೋಗ್ಯ ಸೇವೆಗಳಲ್ಲಿ ರಿಯಾಯಿತಿ, ತೆರಿಗೆ ರಿಯಾಯಿತಿ, ಬ್ಯಾಂಕ್, ಆಸ್ಪತ್ರೆ, ಸರ್ಕಾರಿ ಕಚೇರಿಗಳಲ್ಲಿ ತ್ವರಿತ ಸೇವೆ, ವಿಮಾನ ಪ್ರಯಾಣದಲ್ಲಿ ರಿಯಾಯಿತಿ, ಹೆಚ್ಚಿನ ಪಿಂಚಣಿ ಯೋಜನೆ, ವಿದ್ಯುತ್, ನೀರಿನ ಬಿಲ್ಲುಗಳಲ್ಲಿ ರಿಯಾಯಿತಿ, ವಿಮೆ ಪ್ರಯೋಜನ ಮೊದಲಾದವುಗಳು ದೊರೆಯಲಿದೆ.
ಹಿರಿಯರ ಜೀವನ ಸುರಕ್ಷಿತ ಹಾಗೂ ಆರ್ಥಿಕ ನೆಮ್ಮದಿಯಿಂದ ಕೂಡಿರಲಿ ಎನ್ನುವ ಕಾರಣಕ್ಕೆ ಭಾರತ ಸರ್ಕಾರ ಕೂಡ ಪ್ರತಿ ವರ್ಷ ಹಿರಿಯ ನಾಗರಿಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಈ ವರ್ಷವೂ ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗಾಗಿ ಕೆಲ ಯೋಜನೆಗಳನ್ನು ಜಾರಿಗೊಳಿಸಿದೆ. ಉಳಿತಾಯ ಯೋಜನೆಯ ಬಡ್ಡಿ ದರ ಶೇ.೮.೨ಕ್ಕೆ ಏರಿಕೆ, ಡಿಜಿಟಲ್ ಸೇವೆಗಳ ಸುಲಭ ಲಭ್ಯತೆ, ತೆರಿಗೆ ವಿನಾಯಿತಿ ಹೆಚ್ಚಳ, ಆರೋಗ್ಯ ತಪಾಸಣೆ ಮತ್ತು ಪ್ರಯಾಣದಲ್ಲಿ ರಿಯಾಯಿತಿ ಯನ್ನು ಒದಗಿಸಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಳಿತಾಯ ಯೋಜನೆ ಯಡಿ ೬೦ ವರ್ಷ ಮತ್ತು ಮೇಲ್ಪಟ್ಟ ಹಿರಿಯರಿಗಾಗಿ ಉಳಿತಾಯ ಖಾತೆಯಲ್ಲಿನ ಹಣಕ್ಕೆ ಬಡ್ಡಿದರ ಹೆಚ್ಚಳ ಮಾಡಿದ್ದು, ಶೇ.೮.೨ರಷ್ಟು ಬಡ್ಡಿ ಲಭ್ಯವಾಗಲಿದೆ. ಈ ಯೋಜನೆಯ ಲಾಭ ಪಡೆಯಲು ಕನಿಷ್ಠ ಸಾವಿರ ರೂ. ಹೂಡಿಕೆ ಮಾಡಬೇಕು. ಗರಿಷ್ಟ ೩೦ ಲಕ್ಷ ರೂ.ಗಳ ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯ ಅವಧಿ ಐದು ವರ್ಷಗಳಿದ್ದು, ತೆರಿಗೆ ವಿನಾಯಿತಿ ಕೂಡ ದೊರೆಯಲಿದೆ.
ನಿವೃತ್ತಿ ಯೋಜನೆಯಲ್ಲೂ ಮಾರ್ಪಾಡು:
ಪ್ರಸಕ್ತ ಹಣಕಾಸು ವರ್ಷದಿಂದ ಕೇಂದ್ರ ಸರ್ಕಾರ ನಿವೃತ್ತಿ ಯೋಜನೆಯಲ್ಲೂ ಅನೇಕ ಮಾರ್ಪಾಡುಗಳನ್ನು ಜಾರಿಗೆ ತಂದಿದ್ದು, ಇದರಿಂದ ಲಕ್ಷಾಂತರ ಹಿರಿಯ ನಾಗರಿಕರಿಗೆ ಪ್ರಯೋಜನ ದೊರೆಯಲಿದೆ. ಇನ್ನು ಮುಂದೆ ಈ ಯೋಜನೆಯಡಿ ಪ್ರತಿ ವರ್ಷ ಫಿಸಿಕಲ್ ಲೈಫ್ ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ. ಮೊಬೈಲ್ ಅಥವಾ ಅಪ್ಲಿಕೇಷನ್ ಮೂಲಕ ಇ ಸರ್ಟಿಫಿಕೇಟ್ ಸಲ್ಲಿಸಿದರೆ ಸಾಕು. ಪಿಂಚಣಿ ನೇರವಾಗಿ ಅವರ ಖಾತೆಗೆ ಜಮೆಯಾಗಲಿದೆ.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ:
ಈ ಯೋಜನೆಯಡಿ ಹಿರಿಯ ನಾಗರಿಕರಿಗೆ ೫ ಲಕ್ಷ ರೂ.ಗಳವರೆಗೆ ನಗದು ರಹಿತ ಆರೋಗ್ಯ ಸೇವೆ ದೊರೆಯಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ, ಸಂಯೋಜಿತ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.
ತೆರಿಗೆ ವಿನಾಯಿತಿ:
ಭಾರತ ಸರ್ಕಾರ ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ತೆರಿಗೆ ವಿನಾಯಿತಿ ನೀಡಿದ್ದು, ೧೨ ಲಕ್ಷ ರೂ.ಗಳವರೆಗೆ ವಾರ್ಷಿಕ ಆದಾಯ ಹೊಂದಿರುವವರು ತೆರಿಗೆ ಪಾವತಿಸಬೇಕಾಗಿಲ್ಲ. ನಿಶ್ಚಿತ ಠೇವಣಿ ಮತ್ತು ಉಳಿತಾಯ ಖಾತೆ ಮೇಲಿನ ಟಿಡಿಎಸ್ ಮಿತಿಯನ್ನು ಒಂದು ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ೭೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತೆರಿಗೆ ಪಾವತಿಯನ್ನು ಸರಳೀಕರಣಗೊಳಿಸಿದ್ದು, ಡಿಜಿಟಲ್ ಇಂಡಿಯಾ ಮಿಷನ್ ಅಡಿ ಹಿರಿಯ ನಾಗರಿಕರಿಗಾಗಿ ಅನೇಕ ಡಿಜಿಟಲ್ ಸೇವೆಗಳನ್ನು ಆರಂಭಿ ಸಿದೆ. ಈ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್, ಆಧಾರ್ ವೆರಿಫಿಕೇಷನ್ ಸೌಲಭ್ಯವನ್ನು ನೀಡುವ ಮೂಲಕ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ.
“ಕರ್ನಾಟಕ ರಾಜ್ಯದಲ್ಲಿ ೨೦೧೧ರ ಜನಗಣತಿಯ ಅಂದಾಜಿನಂತೆ ಒಟ್ಟು ೬ ಕೋಟಿ ೧೧ಲಕ್ಷ ಜನಸಂಖ್ಯೆಯಲ್ಲಿ ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಶೇ.೭.೭೨ರಂತೆ ಸುಮಾರು ೪೭.೧೮ ಲಕ್ಷ ಇದ್ದು, ರಾಜ್ಯವು ಹಿರಿಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನ ಒದಗಿಸಿಕೊಡುವ ಉದ್ದೇಶದಿಂದ ೨೦೦೩ರಲ್ಲಿ ಹಿರಿಯ ನಾಗರಿಕರಿಗಾಗಿ ರಾಜ್ಯನೀತಿಯನ್ನು ರೂಪಿಸಿದೆ. “




