ಮೈಸೂರು: ಎಸ್.ಎಂ.ಕೃಷ್ಣ ಅವರ ಕಾಲದಿಂದಲೂ ಒಳಮೀಸಲಾತಿ ಕೂಗು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಈಗ ಪರಿಶಿಷ್ಟ ಜಾತಿ ಸಮೀಕ್ಷೆ ಪ್ರತ್ಯೇಕವಾಗಿ ನಡೆಯುತ್ತಿದೆ ಎಂದು ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗಾಗಿ ಹಲವಾರು ವರ್ಷಗಳಿಂದ ಗೊಂದಲಗಳಿದ್ದವು. ಎಸ್.ಎಂ.ಕೃಷ್ಣ ಅವರ ಕಾಲದಿಂದಲೂ ಒಳ ಮೀಸಲಾತಿ ಕೂಗು ಕೇಳಿ ಬಂದಿದೆ. ಈ ಹಿಂದೆ ನಾನು ಸಚಿವನಿದ್ದಾಗ ಆಂಜನೇಯ ಅವರು ಸಮಾಜ ಕಲ್ಯಾಣ ಸಚಿವರಿದ್ದಾಗಲೂ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿದ್ದೆವು. ಆ ಕಾಲ ಸನಿಹವಾಗಿದ್ದು, ಈಗ ಪರಿಶಿಷ್ಟ ಜಾತಿ ಸಮೀಕ್ಷೆ ಪ್ರತ್ಯೇಕವಾಗಿ ನಡೆಯುತ್ತಿದೆ.
ಈಗ ಪ್ರತ್ಯೇಕ ಆಯೋಗ ರಚನೆ ಮಾಡಿ ವೈಜ್ಞಾನಿಕ ದತ್ತಾಂಶ ಸಂಗ್ರಹ ಮಾಡಲು ಶಿಕ್ಷಕರನ್ನು ನೇಮಕ ಮಾಡಿ ಗಣತಿ ನಡೆಯುತ್ತಿದೆ. ಸಣ್ಣ ಪುಟ್ಟ ಗೊಂದಲಗಳನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕಿದೆ. ಹಿಂದಿನಿಂದಲೂ ಎಡಗೈ ಬಲಗೈ ನಡುವೆ ನಾವು ಇದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲರಿಗೂ ಅವಕಾಶ ಸಿಗಲಿ. ಒಂದು ರಾಶಿ ಅಂದ ಮೇಲೆ ಒಂದಷ್ಟು ಆಚೆ ಈಚೆ ಆಗುತ್ತೆ. ಒಟ್ಟಿನಲ್ಲಿ ತಳ ಸಮುದಾಯದ ಜನರಿಗೆ ಒಳ್ಳೆಯದಾದರೆ ಸರಿ. ಈಗ ಎಲ್ಲ ಚೆನ್ನಾಗಿ ನಡೆಯುತ್ತಿದೆ ಎಂದು ಒಳಮೀಸಲಾತಿ ಬಗ್ಗೆ ಮಾಹಿತಿ ನೀಡಿದರು.





