ಮೈಸೂರು ಮಹಾನಗರ ಪಾಲಿಕೆ ಇದೀಗ ತನ್ನ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಸಲುವಾಗಿ ಮೈಸೂರಿನ ನಾಲ್ಕು ಚಿತಾಗಾರಗಳಲ್ಲಿ ಅಂತ್ಯಕ್ರಿಯೆ ನೆರವೇರಿಸಲು ರೂ. ೫೦೦ ಶುಲ್ಕವನ್ನು ನಿಗದಿಪಡಿಸಿದೆ ಎಂದು ಮಾಧ್ಯಮ ಗಳಲ್ಲಿ ವರದಿಯಾಗಿದೆ. ಇದು ದುರದೃಷ್ಟಕರ ಸಂಗತಿ.
ಸತ್ತವರಿಗೆ ಸದ್ಗತಿ ದೊರಕಿಸಲೆಂದು ಅಲ್ಲಿಗೆ ಬರುವವರು ಅಪರಕ್ರಿಯೆಗಳನ್ನು ಮಾಡಿ ಹೋಗುತ್ತಾರೆ. ಬದುಕಿರುವವರೆಗೂ ವಿವಿಧ ತೆರಿಗೆಗಳನ್ನು ಹೇರುವ ಸರ್ಕಾರಗಳು, ಸತ್ತವರ ಅಂತ್ಯಕ್ರಿಯೆ ನೆರವೇರಿಸಲೂ ತೆರಿಗೆಗಳನ್ನು ಹೇರುವ ಮೂಲಕ ಜನರ ನೆಮ್ಮದಿಯನ್ನು ಹಾಳುಗೆಡಹುತ್ತಿದೆ. ಈಗಾಗಲೇ ಪಾಲಿಕೆಯು ಆಸ್ತಿ ತೆರಿಗೆಯಲ್ಲಿ ಪ್ರತಿ ಮನೆಗೂ ಸ್ಮಶಾನ ತೆರಿಗೆ ಎಂದು ೧೫೦ ರೂ. ಗಳನ್ನು ಸಂದಾಯ ಮಾಡಿಸಿಕೊಳ್ಳುತ್ತಿದ್ದು, ೫೦೦ ರೂ. ಶುಲ್ಕವನ್ನು ನಿಗದಿಪಡಿಸಿರುವುದು ಸರಿಯಲ್ಲ ಅನಿಸುತ್ತದೆ. ಬಹುಶಃ ಅಂತಹ ಮನೆಯಲ್ಲಿನ ಸದಸ್ಯರ ಮರಣಕ್ಕಿಂತಲೂ ಹೆಚ್ಚೇ ಸ್ಮಶಾನ ತೆರಿಗೆ ಸಂದಾಯವಾಗುತ್ತದೆ ಅಲ್ಲವೇ. ಅಷ್ಟಕ್ಕೂ ಪ್ರತಿ ವರುಷವೂ ಸ್ಮಶಾನಕ್ಕೆ ತೆರಿಗೆದಾರರು ಹೋಗಿ ಬರುತ್ತಾರೆಯೇ ಎಂಬ ವಿವೇಚನೆಯೂ ಇಲ್ಲವಲ್ಲ. ಒಟ್ಟಿನಲ್ಲಿ ಈ ಸರ್ಕಾರಕ್ಕೆ ‘ಹಣ ಸೂರೆ ಹೆಣ ಸೂರೆ’ ಎಂಬ ಗಾದೆ ಮಾತು ಸೂಕ್ತವಾಗಿ ಅನ್ವಯಿಸುತ್ತದೆ.
– ವಿಜಯ್ ಹೆಮ್ಮಿಗೆ, ಮೈಸೂರು





